ದಾವಣಗೆರೆಯ ನಿಟುವಳ್ಳಿಯಲ್ಲಿರುವ ಇಎಸ್‌ಐ ಆಸ್ಪತ್ರೆಯ ಹೊರ ನೋಟ
ಪ್ರಜಾವಾಣಿ ಚಿತ್ರಗಳು: ಸತೀಶ್ ಬಡಿಗೇರ
ದಾವಣಗೆರೆ: ‘ಬೆಳಿಗ್ಗೆ ಮಾತ್ರ ವೈದ್ಯರು ರೌಂಡ್ಸ್‌ಗೆ ಬರ್ತಾರೆ. ಸಂಜೆ ಅವರ ಪತ್ತೆಯೇ ಇರುವುದಿಲ್ಲ. ಇಲ್ಲಿನ ಸಿಬ್ಬಂದಿ ರಕ್ತದೊತ್ತಡ (ಬಿ.ಪಿ.) ಚೆಕ್ ಮಾಡೊಲ್ಲ. ಬರೀ ಪೇನ್‌ಕಿಲ್ಲರ್ ಇಂಜೆಕ್ಷನ್ ಕೊಡುತ್ತಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ –ಸಾರು, ಮೊಟ್ಟೆ ಕೊಡುತ್ತಾರೆ. ರಾತ್ರಿ ಊಟಕ್ಕೆ ಮಧ್ಯಾಹ್ನದ ಸಾರೇ ಗತಿ. ಎರಡು ದಿನಕ್ಕೊಮ್ಮೆ ಗಾಯಕ್ಕೆ ಡ್ರೆಸಿಂಗ್ ಮಾಡಬೇಕು. ಆದರೆ, ಡ್ರೆಸಿಂಗ್ ಮಾಡಿ ಈಗ 3 ದಿನವಾಗಿದೆ. ನರ್ಸ್‌ಗಳಿಗೆ ಕೇಳಿದರೆ ಡಾಕ್ಟರ್ ಹೇಳುವವರೆಗೂ ಡ್ರೆಸಿಂಗ್ ಮಾಡೊಲ್ಲ ಅಂತಿದ್ದಾರೆ’...
ಇದು ಬೇತೂರು ಗ್ರಾಮದ ಪರಶುರಾಮ್ ಅವರ ದೂರು. ಬೈಕ್‌ನಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿರುವ ಇವರು ನಿಟುವಳ್ಳಿಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮಾತು ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
‘ಡಿಸ್ಪೆನ್ಸರಿಗಳು (ಸಣ್ಣ ಆಸ್ಪತ್ರೆ) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 4.30 ರಿಂದ 6ರವರೆಗೆ ಕಾರ್ಯ ನಿರ್ವಹಿಸುತ್ತವೆ. ಇಎಸ್‌ಐ ಆಸ್ಪತ್ರೆಯ ಹೊರರೋಗಿ ವಿಭಾಗ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮ.2ರಿಂದ ಸಂಜೆ 4ರವರೆಗೆ ಕಾರ್ಯ ನಿರ್ವಹಿಸುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ ಸಣ್ಣ ಆಸ್ಪತ್ರೆಯವರು ಚೀಟಿ ಬರೆದುಕೊಟ್ಟು ಇಎಸ್‌ಐ ಆಸ್ಪತ್ರೆಗೆ ಕಳಿಸುತ್ತಾರೆ. ನಾವು ದೂರದೂರಿಂದ ಬಂದು ಹೊರರೋಗಿ ಚೀಟಿ ಪಡೆದು, ದಾಖಲೆಗಳಿಗೆ ಸಂಬಂಧಪಟ್ಟ ವೈದ್ಯರ ಸಹಿ ಮಾಡಿಸಿಕೊಳ್ಳುವಷ್ಟರಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಮನೆಗೆ ಹೋಗಿರುತ್ತಾರೆ. ಹೀಗಾಗಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಚಿಕಿತ್ಸೆಗಾಗಿ ತಾಯಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಕೊಂಡಜ್ಜಿಯ ನಾಗರಾಜ್ ಬೇಸರಿಸಿದರು.
‘ಇಎಸ್‌ಐ ಹಾಗೂ ಡಿಸ್ಪೆನ್ಸರಿಯ ಕಾರ್ಯಾವಧಿ ಏಕರೂಪತೆಯಿಂದ ಕೂಡಿರಬೇಕು. ಹಾಗಾದಾಗ ರೋಗಿಗಳ ಅಲೆದಾಟ ತಪ್ಪಿಸಬಹುದು. ಇದರಿಂದ ರೋಗಿಯ ವೈದ್ಯಕೀಯ ದಾಖಲೆಗಳು, ಶುಲ್ಕದ ರಸೀದಿಗಳನ್ನು ಪಡೆಯುವುದು, ವೈದ್ಯರ ಸಹಿ ಮಾಡಿಸುವುದೂ ಸುಲಭವಾಗಲಿದೆ’ ಎಂಬುದು ಅವರ ಸಲಹೆ.
1987ರಲ್ಲಿ ಆರಂಭವಾದ ಇಎಸ್‌ಐ ಆಸ್ಪತ್ರೆಯು 2017ರಲ್ಲಿ ಭವ್ಯವಾದ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. 50 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಲಿಫ್ಟ್ ಸೇರಿದಂತೆ ಆಧುನಿಕ ಸೌಲಭ್ಯಗಳೆಲ್ಲವೂ ಇವೆ. ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗ, ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗ, ಹರಿಹರ, ರಾಣೇಬೆನ್ನೂರು ಸೇರಿದಂತೆ 13 ಡಿಸ್ಪೆನ್ಸರಿಗಳು ಈ ಆಸ್ಪತ್ರೆಯ ವ್ಯಾಪ್ತಿಗೊಳಪಟ್ಟಿವೆ.
ಡಿಸ್ಪೆನ್ಸರಿಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುವ ಕಾರ್ಮಿಕರು, ಅಲ್ಲಿನ ವೈದ್ಯರ ಶಿಫಾರಸು ಆಧರಿಸಿ ಸೆಕೆಂಡರಿ ಕೇರ್ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗೆ ಧಾವಿಸುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಹೆಚ್ಚಿನ ಚಿಕಿತ್ಸೆ ಅವಶ್ಯವಾದರೆ ಇಎಸ್‌ಐ ಆಸ್ಪತ್ರೆಯೊಂದಿಗೆ ಸಂಯೋಜನೆ (ಟೈಅಪ್) ಹೊಂದಿದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಅಲ್ಲಿನ ವೈದ್ಯಕೀಯ ಖರ್ಚುಗಳನ್ನು ಇಎಸ್‌ಐ ಆಸ್ಪತ್ರೆಯ ಮೂಲಕ ಭರಿಸಲಾಗುತ್ತಿದೆ.
ಕಾರ್ಮಿಕರ ಪಾಲಿಗೆ ವರದಾನವಾಗಬೇಕಿರುವ ಇಎಸ್‌ಐ ಆಸ್ಪತ್ರೆಯು ಹಲವು ಸಮಸ್ಯೆಗಳನ್ನೂ ಎದುರಿಸುತ್ತಿದೆ. ‘ಆಸ್ಪತ್ರೆಯಲ್ಲಿ ಹೆಚ್ಚಿನ ಔಷಧಿಗಳು ದೊರೆಯುತ್ತಿಲ್ಲ. ನಿಗದಿತ ಸಮಯದಲ್ಲಿ ವೈದ್ಯರು ಲಭ್ಯವಾಗುವುದಿಲ್ಲ’ ಹೀಗೆ ನಾನಾ ದೂರುಗಳೂ ಇಲ್ಲಿ ಕೇಳಿಬರುತ್ತವೆ.
‘ಬೆಳಿಗ್ಗೆ 9.30ಕ್ಕೆ ಬಂದು ವೈದ್ಯರಿಗಾಗಿ ಕಾಯುತ್ತಿದ್ದೇನೆ. ಸಮಯ 11.30 ಆದರೂ, ಅವರ ಸುಳಿವಿಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ‘ಬರುತ್ತಾರೆ ಕಾಯಿರಿ’ ಎನ್ನುತ್ತಾರೆ. ಯಾವಾಗ ಬರುತ್ತಾರೋ ಗೊತ್ತಾಗುತ್ತಿಲ್ಲ. ಚಿಕಿತ್ಸೆ ಪಡೆಯುವುದು ವಿಳಂಬವಾದರೆ, ಊರಿಗೆ ಹೋಗುವುದೂ ತಡವಾಗುತ್ತದೆ’ ಎಂದು ಸಂಡೂರಿನಿಂದ ರೋಗಿಯೊಬ್ಬರ ಜೊತೆ ಆಸ್ಪತ್ರೆಗೆ ಬಂದಿದ್ದ ನಾಗಪ್ಪ ಅಳಲು ತೋಡಿಕೊಂಡರು.
‘ಇಎಸ್‌ಐ ಆಸ್ಪತ್ರೆಗೆ ನೇರವಾಗಿ ಹೋದರೆ ವೈದ್ಯರು ತುರ್ತುಚಿಕಿತ್ಸೆ ನೀಡುವುದಿಲ್ಲ. ಡಿಸ್ಪೆನ್ಸರಿಯಿಂದ ಚೀಟಿ ಬರೆಸಿಕೊಂಡು ಬಂದರೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಇದರಿಂದ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಕಾರ್ಮಿಕ ಮುಖಂಡ ಆವರಗೆರೆ ವಾಸು ಒತ್ತಾಯಿಸುತ್ತಾರೆ.
ವೈದ್ಯರ ಕೊರತೆ:
ಆಸ್ಪತ್ರೆಗೆ 28 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 18 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇಬ್ಬರು ವೈದ್ಯರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಡಿ’ ಗ್ರೂಪ್, ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಹುದ್ದೆಗಳೂ ಖಾಲಿ ಇದ್ದು, ಈ ಕಾರ್ಯಗಳಿಗೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.
‘ವೈದ್ಯರ ಕೊರತೆಯಿಂದ ರೋಗಿಗಳಿಗೆ ಎಲ್ಲ ಅವಧಿಯಲ್ಲೂ ಸಮರ್ಪಕವಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ಇರುವ ವೈದ್ಯರಿಗೂ ಕಾರ್ಯಾಭಾರ ಹೆಚ್ಚಾಗುತ್ತಿದೆ. ಆದರೂ, ಹೆಚ್ಚಿನ ಶ್ರಮವಹಿಸಿ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ಹೇಳಿದರು.
ಇಎಸ್‌ಐ ಆಸ್ಪತ್ರೆಯಲ್ಲಿ ಕೆಲವು ಔಷಧಿಗಳು ದೊರೆಯುತ್ತಿಲ್ಲ. ಹೊರಗಡೆ ತೆಗೆದುಕೊಳ್ಳುವಂತೆ ಚೀಟಿ ಬರೆದುಕೊಡುತ್ತಾರೆ. ಹೊರಗಡೆ ಖರೀದಿಸಿದವರು ಅದರ ರಸೀದಿ ಕೊಟ್ಟು ಇಎಸ್‌ಐ ಆಸ್ಪತ್ರೆಯಲ್ಲಿ ಹಣ ಕ್ಲೈಮ್ ಮಾಡಿಕೊಳ್ಳಬೇಕಾಗುತ್ತದೆಎ.ಅರುಣ ದಾವಣಗೆರೆ
ಔಷಧಿಯನ್ನು ಹೊರಗಡೆಯೇ ಹೆಚ್ಚು ಖರೀದಿಸಬೇಕಿದೆ. ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಸ್ಥಿತಿ ಇದೆ. ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡದೆ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಬೇಕುಆವರಗೆರೆ ವಾಸು ಕಾರ್ಮಿಕ ಮುಖಂಡ
ಇಎಸ್‌ಐ ಕಾರ್ಡ್; ಯಾರು ಅರ್ಹರು?
₹21000ಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವ ಕಾರ್ಮಿಕರು ಇಎಸ್‌ಐ ಕಾರ್ಡ್ ಪಡೆಯಬಹುದು. ಮಾಲ್ ಹೋಟೆಲ್ ಕಾರ್ಖಾನೆಗಳು ಗಾರ್ಮೆಂಟ್ಸ್ ಚಿತ್ರಮಂದಿರ ನರ್ಸಿಂಗ್ ಹೋಂ ಮಾಧ್ಯಮ ಸೇರಿದಂತೆ ಇನ್ನಿತರ ಸಂಸ್ಥೆಗಳ ಉದ್ಯೋಗಿಗಳು ಇಎಸ್‌ಐ ಸೌಲಭ್ಯ ಪಡೆಯಬಹುದು. ಈ ಸಂಸ್ಥೆಗಳು ಕಾರ್ಖಾನೆಗಳು ಕನಿಷ್ಠ 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರಬೇಕು. ಇಎಸ್‌ಐ ಕಾರ್ಡ್‌ಗಾಗಿ ಪ್ರತೀ ತಿಂಗಳು ಕಾರ್ಮಿಕರು ಹಾಗೂ ಮಾಲೀಕರು ಒಂದಿಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕಾರ್ಡ್ ಹೊಂದಿದ ಸದಸ್ಯನ ಕುಟುಂಬದವರೂ (ತಂದೆ – ತಾಯಿ ಹೆಂಡತಿ ಮಕ್ಕಳು) ಇಎಸ್‌ಐ ಆಸ್ಪತ್ರೆಯ ಸೌಲಭ್ಯ ಪಡೆಯಬಹುದು.
ಗುಣಮಟ್ಟದ ಉಚಿತ ಚಿಕಿತ್ಸೆ: ಡಾ.ಬಸವನಗೌಡ
‘ಕೆಲವು ಔಷಧಿಗಳು ಖಾಲಿಯಾದಾಗ ಮತ್ತೆ ತರಿಸಲಾಗುತ್ತದೆ. ಸದ್ಯ ತಿಂಗಳಿಗೆ ಆಗುವಷ್ಟು ಬಿ.ಪಿ. ಶುಗರ್ ಮಾತ್ರೆಗಳು ಇನ್ನಿತರ ಔಷಧಿ ಲಭ್ಯ ಇದೆ. ವೈದ್ಯರ ಕೊರತೆ ಇದ್ದರೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಂ.ಬಸವನಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸಲಾಗುತ್ತಿದೆ. ಹಳೆಯ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು 3 ತಿಂಗಳೊಳಗಾಗಿ ಮುಗಿಯಬಹುದು. ಆಗ ಮತ್ತಷ್ಟು ರೋಗಿಗಳಿಗೆ ವೈದ್ಯಕೀಯ ಸೌಲಭ್ಯ ದೊರೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.