ದಾವಣಗೆರೆ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾದ ಇಬ್ಬರು 14 ವರ್ಷದ ಬಾಲಕಿಯರನ್ನು ಕರೆದುಕೊಂಡು ಹೋಗಿ ಗುಜರಾತ್‌ನ ಯುವಕರಿಗೆ ಮಾದುವೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಶಿಕ್ಷೆ ನೀಡಿ ತೀರ್ಪಿತ್ತಿದೆ.
ಹಾವೇರಿ ತಾಲ್ಲೂಕು ಹೊಸರಿತ್ತಿ ಗ್ರಾಮದ ಕೊಟ್ರಪ್ಪ (65), ಅವರ ಮಗಳು ಮಲ್ಲಮ್ಮ, ಅಳಿಯ ಭರತ್ ಅಲಿಯಾಸ್ ಗೋಪಾಲ್ ಅಪರಾಧಿಗಳು. 2011ರಲ್ಲಿ ರೈಲ್ವೆ ನಿಲ್ದಾಣಕ್ಕೆ ಕೊಟ್ರಪ್ಪ ಬಂದಿದ್ದರು. ಇದೇ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ವಸತಿನಿಲಯದಿಂದ ತಪ್ಪಿಸಿಕೊಂಡು ಬಂದಿದ್ದ ಇಬ್ಬರು ಬಾಲಕಿಯರು ಸಿಕ್ಕಿದ್ದರು. ಅವರನ್ನು ಕೊಟ್ರಪ್ಪ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ಅವರ ಮಗಳು ಮತ್ತು ಅಳಿಯ ಗುಜರಾತ್‌ನಲ್ಲಿದ್ದು, ಅವರ ಸಹಕಾರ ಪಡೆದು ಅಲ್ಲಿನ ಇಬ್ಬರು ಯುವಕರಿಗೆ ಈ ಬಾಲಕಿಯರನ್ನು ಮದುವೆ ಮಾಡಿ ಗುಜರಾತ್‌ಗೆ ಕಳುಹಿಸಿದ್ದರು.
ಮದುವೆಯಾಗಿರುವ ಗುಜರಾತಿನ ಇಬ್ಬರು ಆರೋಪಿಗಳು ಪತ್ತೆಯಾಗಿಲ್ಲ. ಕೊಟ್ರಪ್ಪ, ಮಲ್ಲಮ್ಮ, ಭರತ್ ಅಲಿಯಾಸ್ ಗೋಪಾಲ್ ಅವರ ಮೇಲಿನ ಆರೋಪ ಸಾಬೀತಾಗಿದೆ. ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 6 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎಪಿಪಿ ಎಸ್.ವಿ. ಪಾಟೀಲ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.