ADVERTISEMENT

ಹೈಟೆಕ್‌ ಆಗಲಿದೆ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ

ಧರೆಗೆ ಉರುಳಲಿದೆ 32 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ನಿಲ್ದಾಣ

ಬಾಲಕೃಷ್ಣ ಪಿ.ಎಚ್‌
Published 14 ಜನವರಿ 2021, 2:39 IST
Last Updated 14 ಜನವರಿ 2021, 2:39 IST
ದಾವಣಗೆರೆಯಲ್ಲಿ ನಿರ್ಮಾಣಗೊಳ್ಳಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಹೊರಮುಖ
ದಾವಣಗೆರೆಯಲ್ಲಿ ನಿರ್ಮಾಣಗೊಳ್ಳಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಹೊರಮುಖ   

ದಾವಣಗೆರೆ: 32 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ, ಈಗಲೂ ಹೊಸ ಬಸ್‌ನಿಲ್ದಾಣ ಎಂದೇ ಕರೆಯಲಾಗುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಧರೆಗೆ ಉರುಳಲು ಕೆಲವೇ ದಿನಗಳು ಉಳಿದಿವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿದೆ.

6 ಎಕರೆ 13 ಗುಂಟೆಯಲ್ಲಿ ನಿರ್ಮಾಣಗೊಳ್ಳುವ ಹೊಸ ಬಸ್‌ನಿಲ್ದಾಣಕ್ಕೆ ₹ 120 ಕೋಟಿ ಮೀಸಲಿಡಲಾಗಿದೆ. ಜ.18ರಂದು ಅದಕ್ಕೆ ಶಂಕುಸ್ಥಾಪನೆ ನೆರವೇರಲಿದೆ. 1988ರ ಡಿಸೆಂಬರ್‌ನಲ್ಲಿ ಕೆಎಸ್‌ಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣಗೊಂಡಿತ್ತು. 1991ರಲ್ಲಿ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗ ರಚನೆಗೊಂಡಿತ್ತು. ಈಗ ಈ ಬಸ್‌ನಿಲ್ದಾಣ ಜ.18ರಿಂದ ಹೈಸ್ಕೂಲ್‌ ಫೀಲ್ಡ್‌ಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲಿದೆ. ಎರಡು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಲಿದೆ. ಗಾಂಧಿ ಸರ್ಕಲ್‌ ಬಳಿ ರಾಜನಹಳ್ಳಿ ಹನುಮಂತಪ್ಪ ಬಿಲ್ಡಿಂಗ್‌ನಲ್ಲಿ ಕೆಎಸ್‌ಆರ್‌ಟಿಸಿ ಕಚೇರಿ ಇರಲಿದೆ.

ಏನೇನಿರಲಿದೆ?

ADVERTISEMENT

ಅಂಡರ್‌‌ಗ್ರೌಂಡ್‌ ಮತ್ತು ಮೂರು ಅಂತಸ್ತು ಇರುವ ಈ ಹೊಸ ಯೋಜನೆಯಲ್ಲಿ ನೆಲದೊಳಗಿನ ಅಂತಸ್ತಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರುತ್ತದೆ. ಸುಮಾರು 2000 ಬೈಕ್‌, 300 ಕಾರ್‌ ನಿಲ್ಲಿಸುವಷ್ಟು ದೊಡ್ಡ ಪಾರ್ಕಿಂಗ್‌ ವ್ಯವಸ್ಥೆ ಇದಾಗಿದೆ. ಅದರ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. ಸದ್ಯ ಇರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಒಮ್ಮೆಗೆ 32 ಬಸ್‌ಗಳು ನಿಲ್ಲುವ ಅವಕಾಶ ಇದೆ. ನೂತನವಾಗಿ ನಿರ್ಮಾಣಗೊಳ್ಳುವ ನಿಲ್ದಾಣದಲ್ಲಿ ಒಂದೇ ಬಾರಿಗೆ 52 ಬಸ್‌ ಬೇ
ಇರಲಿವೆ.

ಕೆಎಸ್‌ಆರ್‌ಟಿಸಿ ಕಚೇರಿ ಗಳಿಗೆ ಪ್ರತ್ಯೇಕ ಬ್ಲಾಕ್‌ ನಿರ್ಮಾಣಗೊಳ್ಳಲಿದೆ. ಮುಂದೆ ಎಲೆಕ್ಟ್ರಿಕಲ್‌ ಬಸ್‌ಗಳು ಬರುವ ಸಾಧ್ಯತೆ ಇರುವುದರಿಂದ ಈ ಬಸ್‌ನಿಲ್ದಾಣದಲ್ಲಿ ಎಲೆಕ್ಟ್ರಿಕಲ್‌ ವೆಹಿಕಲ್‌ ಚಾರ್ಜಿಂಗ್ ಯುನಿಟ್‌ ಸ್ಥಾಪನೆಗೊಳ್ಳಲಿವೆ. ಮಹಿಳೆಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇರಲಿವೆ. ವೈಫೈ ಬರಲಿದೆ. ಸೋಲಾರ್‌ ವ್ಯವಸ್ಥೆ ಕೂಡ ಇರಲಿದೆ.

ಶಾಪಿಂಗ್‌ ಮಾಲ್‌, ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳು, ಹೋಟೆಲ್‌, ರೆಸ್ಟೊರಂಟ್ ಒಳಗೊಂಡಂತೆ ವಿವಿಧ ವಾಣಿಜ್ಯ ವಹಿವಾಟುಗಳು ಇಲ್ಲಿರಲಿವೆ. ಬಸ್‌ಗಳಿಗೆ ಬೇರೆಯೇ ಪ್ರವೇಶ ಮತ್ತು ಈ ವಾಣಿಜ್ಯ ಸಂಕೀರ್ಣಕ್ಕೆ ಬರಲು ಬೇರೆಯೇ ಪ್ರವೇಶ ರಸ್ತೆಗಳು ಇರಲಿವೆ. ನೆಲಮಾಳಿಗೆ, ಮೊದಲ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿಯಲ್ಲಿ ವಾಣಿಜ್ಯ ವ್ಯವಹಾರಕ್ಕೆ ಎಷ್ಟು ಜಾಗ ಮೀಸಲಿಡಬೇಕು ಎಂಬ ನೀಲನಕ್ಷೆ ಯೋಜನೆಯಲ್ಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.