ADVERTISEMENT

ದಾವಣಗೆರೆ: ಅಂತರಂಗದ ಉತ್ಸವ ನಿಲ್ಲಬಾರದು

ಶಿವಯೋಗಿ ಸಿದ್ಧರಾಮೇಶ್ವರ ರಥೋತ್ಸವದಲ್ಲಿ ಭೋವಿ ಗುರುಪೀಠದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:25 IST
Last Updated 10 ಆಗಸ್ಟ್ 2021, 3:25 IST
ದಾವಣಗೆರೆಯ ಭೋವಿ ಕಾಲೊನಿಯಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ರಥೋತ್ಸವ ಜರುಗಿತು
ದಾವಣಗೆರೆಯ ಭೋವಿ ಕಾಲೊನಿಯಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ರಥೋತ್ಸವ ಜರುಗಿತು   

ದಾವಣಗೆರೆ: ಬಹಿರಂಗದ ಉತ್ಸವಗಳು ನಿಂತಿರಬಹುದು. ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಭೋವಿ ಕಾಲೊನಿಯಲ್ಲಿ ಸೋಮವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥೋತ್ಸವ ಹಾಗೂ ಲಿಂಗೈಕ್ಯ ಸಿದ್ಧರಾಮೇಶ್ವರ ಸ್ವಾಮೀಜಿಯವರ 19ನೇ ಸಂಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಶರಣರು ಕಾಯಕ ಜೀವಿಗಳು. ಶ್ರಮ ಜೀವಿಗಳ ನಿಜವಾದ ಸಂಸ್ಕೃತಿ ಕಾಯಕ-ಸಂಸ್ಕೃತಿ. ಶ್ರಮದಿಂದ ಕೂಡಿದ ಸತ್ಯಶುದ್ಧ ಕಾಯಕ ಜೀವಿಗಳಿಗೆ ವಚನ ಸಂಸ್ಕೃತಿ ದೊರೆಯಿತು. ಮೌಢ್ಯಾಚರಣೆಯಿಂದ ಮುಕ್ತವಾದ ಮೌಲ್ಯಚಾರಣೆ ಯುಕ್ತವಾದ ಶೋಷಣೆ ಮುಕ್ತ ಧಾರ್ಮಿಕತೆ ಮತ್ತು ಅಧ್ಯಾತ್ಮ ದೊರೆಯಿತು. ಇದಕ್ಕೆ ಅದ್ಭುತ ಉದಾಹಣೆ ಕರ್ಮಯೋಗಿ ಸಿದ್ಧರಾಮೇಶ್ವರರು ಶಿವಯೋಗಿ-ಕಾಯಕಯೋಗಿ ಸಿದ್ಧರಾಮೇಶ್ವರ ಆಗಿ ಪರಿವರ್ತನೆಯಾಗಿರುವುದು ಎಂದು ತಿಳಿಸಿದರು.

ADVERTISEMENT

ಸಿದ್ಧರಾಮೇಶ್ವರಕಾಯಕ ವರ್ಗದವರ ಅಸ್ಮಿತೆ. ಮೌಢ್ಯ, ಸಂಪ್ರದಾಯಗಳಿಗೆ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಮಾನವ ಸಮಾಜದ ಚಿಂತಕ ಸಿದ್ಧರಾಮೇಶ್ವರ. ಅವರು ಜಲತಜ್ಞರು, ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು ಎಂದು ವಿಶ್ಲೇಷಿಸಿದರು.

ಚಿತ್ರದುರ್ಗ ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ‘ಶಿವಯೋಗಿ ಸಿದ್ದರಾಮರನ್ನು ನೆನೆದರೆ ಮನ ಶುದ್ಧವಾಗುವುದು. ಎಲ್ಲವೂ ಸಿದ್ದಿಯಾಗುವುದು’ ಎಂದು ಸ್ಮರಿಸಿದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಮೌಢ್ಯಯಗಳನ್ನು ಕಿತ್ತು ಹಾಕಿ ಸಮಸಮಾಜವನ್ನು ಕಟ್ಟಿದ ಆದರ್ಶ ವ್ಯಕ್ತಿ ಸಿದ್ದರಾಮೇಶ್ವರರು. ನಾವು ನಮಗಾಗಿ ಜೀವನ ಮಾಡದೇ ಮತ್ತೊಬ್ಬರಿಗಾಗಿ ಬದುಕಬೇಕು. ಅವರ ಕಷ್ಟಗಳನ್ನು ನಿವಾರಿಸಬೇಕು. ಆಗ ಬದುಕು ಸಾರ್ಥಕ ಎಂದು ಸಾಧಿಸಿ ತೋರಿಸಿದ ಮಾನವ ತಾವಾದಿ ಅವರು’ ಎಂದು ಹೇಳಿದರು.

ಮೈಸೂರಿನ ಬಸವಲಿಂಗಮೂರ್ತಿ ಸ್ವಾಮೀಜಿ, ‘ವಚನಸಾಹಿತ್ಯವನ್ನು ಸಂರಕ್ಷಣೆ ಮಾಡುವಲ್ಲಿ ಸಿದ್ದರಾಮೇಶ್ವರರ ಪಾತ್ರ ಬಹಳ ದೊಡ್ಡದು ಕಲ್ಯಾಣ ಕ್ರಾಂತಿಯ ನಂತರ ಎಲ್ಲಾ ಶರಣರನ್ನು ರಕ್ಷಣೆ ಮಾಡುವ ಮೂಲಕ ಬಸವತತ್ವಗಳನ್ನು ಉಳಿಸಿದ ಕೀರ್ತಿ ಸಿದ್ದರಾಮೇಶ್ವರರಿಗೆ ಸಲ್ಲುತ್ತದೆ ಎಂದರು.

ರಥೋತ್ಸವದಲ್ಲಿ ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ ಭಾಗವಹಿಸಿದ್ದರು. ಮುಖಂಡರಾದ ಡಿ.ಬಸವರಾಜ್, ಆನಂದಪ್ಪ, ಜಯಣ್ಣ, ಶ್ರೀನಿವಾಸ್, ಬ್ಯಾಂಕ್ ರಾಮಣ್ಣ, ಶ್ರೀನಿವಾಸ, ಚಟ್ನಹಳ್ಳಿ ರಾಜಣ್ಣ, ವೆಂಕಟೇಶ್, ಚಂದ್ರಪ್ಪ, ಮೂರ್ತ್ಯಪ್ಪ, ಶಶಿಕುಮಾರ್, ನಾಗರಾಜು, ಕರಾಟೆ ತಿಮ್ಮೇಶ, ಕ್ರಿಕೆಟ್ ತಿಮ್ಮೇಶ, ಚಿಕ್ಕಮ್ಮಣ್ಣಿ ಬಡಾವಣೆ ಶ್ರೀನಿವಾಸ್, ಪೂಜಾರ ಹನುಮಂತಪ್ಪ, ಶಾಮಸುಂದರ, ಶೇಖರಪ್ಪ, ಮಹೇಶ್, ರುದ್ರೇಶ್, ಮೌನೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.