ADVERTISEMENT

ಹೊನ್ನಾಳಿಗೆ ಬಂತು ಜಂಬೋ ಸಿಲಿಂಡರ್

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:12 IST
Last Updated 21 ಮೇ 2021, 4:12 IST
ದೇವನಾಯಕನಹಳ್ಳಿಯ ಕನಕದಾಸ ವೃತ್ತದಲ್ಲಿ ಪೊಲೀಸರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಉಪಾಹಾರ ವಿತರಿಸಿದರು
ದೇವನಾಯಕನಹಳ್ಳಿಯ ಕನಕದಾಸ ವೃತ್ತದಲ್ಲಿ ಪೊಲೀಸರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಉಪಾಹಾರ ವಿತರಿಸಿದರು   

ಹೊನ್ನಾಳಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಆಮ್ಲಜನಕ ಬೆಡ್‍ಗಳಿದ್ದು, ಪ್ರತಿ ಬೆಡ್‍ಗೂ ಅಮ್ಲಜನಕ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಗುರುವಾರ ಬೆಂಗಳೂರಿನಿಂದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ 18 ಆಮ್ಲಜನಕ ಕಾನ್ಸನ್‍ಟ್ರೇಟರ್‌ಗಳು, 5 ಜಂಬೋ ಸಿಲಿಂಡರ್ಗಳು, ಮಾಸ್ಕ್ ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನು ಪರಿಶೀಲಿಸಿ ಮಾತನಾಡಿದರು.

‘ಮುಖ್ಯಮಂತ್ರಿಗೆ 25 ಕಾನ್ಸನ್‍ಟ್ರೇಟರ್‌ಗಳನ್ನು ಕಳುಹಿಸಿ
ಕೊಡುವಂತೆ ಮನವಿ ಮಾಡಿದ್ದೆ. ಈಗ 18 ಕಳುಹಿಸಿಕೊಟ್ಟಿದ್ದಾರೆ. ನಾಲ್ಕೈದು ದಿನಗಳಲ್ಲಿ ಇನ್ನೂ 25 ಕಾನ್ಸನ್‍ಟ್ರೇಟರ್‌ಗಳನ್ನು ತರುವ ವ್ಯವಸ್ಥೆ ಮಾಡುತ್ತೇನೆ’ ಎಂದರು.

ADVERTISEMENT

ಲಸಿಕೆ ಬಂದ ಆರಂಭದಲ್ಲಿ ಪ್ರತಿಪಕ್ಷದವರು ಅಪಪ್ರಚಾರ ಮಾಡಿದ್ದರಿಂದ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಹೀಗಾಗಿ ಲಸಿಕೆ ಉತ್ಪಾದನೆ ಕಡಿಮೆ ಮಾಡಲಾಯಿತು. ಆದರೀಗ ಲಸಿಕೆಯ ಮಹತ್ವ ತಿಳಿದ ಸಾರ್ವಜನಿಕರು ತಾವಾಗಿಯೇ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವುದು ದಿಢೀರನೇ ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದರು.

ಗುರುವಾರದಿಂದ ಶನಿವಾರದವರೆಗೆ ಲಾಕ್‍ಡೌನ್ ಮಾಡುವಂತೆ ನಗರ ಸೇರಿ ಅವಳಿ ತಾಲ್ಲೂಕಿನ ಜನತೆಗೆ ಸೂಚಿಸಿದ್ದರಿಂದ ಇಂದು ಸಾರ್ವಜನಿಕರು ಬೀದಿಗಿಳಿದಿಲ್ಲ. ವರ್ತಕರು ಅಂಗಡಿ ಬಂದ್ ಮಾಡಿ ಸಹಕರಿಸಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕೊರೊನಾ ವಾರಿಯರ್ಸ್‍ಗಳಿಗೆ ಉಪಾಹಾರ: ಅವಳಿ ತಾಲ್ಲೂಕು ಸಂಪೂರ್ಣ ಲಾಕ್‍ಡೌನ್ ಆದ ಕಾರಣ ಪೊಲೀಸರು, ವೈದ್ಯರು, ನರ್ಸ್‍ಗಳು, ಸಿಬ್ಬಂದಿ ಹಾಗೂ ಕೊರೊನಾ ಸೋಂಕಿತರಿಗೆ ಬೆಳಗಿನ ಉಪಾಹಾರ ವಿತರಿಸಿದರು.

ಭದ್ರಾವತಿಯಿಂದ 25 ಸಿಲಿಂಡರ್: ಮಂಗಳವಾರ ರಾತ್ರಿ ಆಮ್ಲಜನಕ ಸಮಸ್ಯೆ ತಲೆದೋರಿದ ಕಾರಣ ಶಾಸಕರು ಖುದ್ದು ಭದ್ರಾವತಿಯ ವಿಐಎಸ್‍ಎಲ್ ಫ್ಯಾಕ್ಟರಿಗೆ ತೆರಳಿ 21 ಆಮ್ಲಜನಕ ಸಿಲಿಂಡರ್‌ಗಳನ್ನು ತಂದುಕೊಟ್ಟರು.

ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಮುಖಂಡರಾದ ನೆಲವೊನ್ನೆ ಮಂಜುನಾಥ್, ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ, ಡಾ. ಸುದೀಪ್, ಡಾ. ರಾಜ್‍ಕುಮಾರ್, ಡಾ. ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.