ADVERTISEMENT

ಚುನಾವಣೆ ಮುಗಿದ ಕೂಡಲೇ ಸಮಸ್ಯೆ ಸರಿಪಡಿಸುವೆ

ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಕರೂರು ಗ್ರಾಮಸ್ಥರ ಮನವೊಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:17 IST
Last Updated 2 ನವೆಂಬರ್ 2019, 14:17 IST
ಕರೂರು ಗ್ರಾಮಸ್ಥರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಪಾಲಿಕೆ ಆಯುಕ್ತರ ಜತೆಗೆ ಭೇಟಿ ನೀಡಲು ಹೋಗುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.
ಕರೂರು ಗ್ರಾಮಸ್ಥರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಪಾಲಿಕೆ ಆಯುಕ್ತರ ಜತೆಗೆ ಭೇಟಿ ನೀಡಲು ಹೋಗುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.   

ದಾವಣಗೆರೆ: ಯಾವುದೇ ಮೂಲ ಸೌಕರ್ಯ ಕಲ್ಪಿಸದ ಕಾರಣ ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಲು 45ನೇ ವಾರ್ಡ್ ವ್ಯಾಪ್ತಿಯ ಕರೂರು ಗ್ರಾಮಸ್ಥರು ನಿರ್ಧರಿಸಿ, ಶನಿವಾರ ಪ್ರತಿಭಟನೆಗೆ ಇಳಿದಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ‘ನಿಮ್ಮ ಬೇಡಿಕೆಗಳಿಗೆ ಚುನಾವಣೆ ಮುಗಿದ ಕೂಡಲೇ ಸ್ಪಂದಿಸುವೆ’ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ಕರೂರು ಗ್ರಾಮದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗೆ ಮನವಿ ಮಾಡಲು ಹಿಂದೆ ಹೋಗಿದ್ದಾಗ. ‘ಕರೂರು ಎಲ್ಲಿದೆ’ ಎಂದು ಆಗಿನ ಜಿಲ್ಲಾಧಿಕಾರಿ ಪ್ರಶ್ನಿಸಿದ್ದರು. ಹಾಗಾಗಿ ಜಿಲ್ಲಾಧಿಕಾರಿ ಬಂದು ಕರೂರು ಎಲ್ಲಿದೆ ಎಂದು ನೋಡಬೇಕು ಎಂದು ಪ್ರತಿಭಟನಕಾರರು ಕರೂರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರ ಮನವಿ ಸ್ವೀಕರಿಸಲು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಭಾರತಿ ಅವರು ಬಂದಾಗ, ‘ಇಷ್ಟು ಸಮಯ ಈ ಕಡೆ ಬಾರದೇ ಇದ್ದವರು ಈಗ ಯಾಕೆ ಬಂದ್ರಿ? ಜಿಲ್ಲಾಧಿಕಾರಿಯೇ ಬರಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ADVERTISEMENT

ಬಳಿಕ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಸ್ಥಳಕ್ಕೆ ಭೇಟಿ ನೀಡಿದರು. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದೇವೆ. ಸ್ಮಾರ್ಟ್‌ಸಿಟಿ ಕಾಮಗಾರಿ ನಿಧಾನವಾಗಿರುವುದರಿಂದ ಸ್ವಲ್ಪ ತೊಂದರೆಯಾಗಿದೆ. ಉಳಿದ ಬೇಡಿಕೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು. ಮತದಾನ ನಿಮ್ಮ ಹಕ್ಕು. ನಿಮಗೆ ಬೇಕಾದವರನ್ನು ಆರಿಸಿಕೊಳ್ಳುವ ನಿಮ್ಮ ಹಕ್ಕನ್ನು ಬಹಿಷ್ಕಾರದ ಮೂಲಕ ಕಳೆದುಕೊಳ್ಳಬೇಡಿ ಎಂದು ಆಯುಕ್ತರು ತಿಳಿಸಿದರು.

‘ನೀವು ಕರೂರನ್ನು ನೋಡಿಕೊಂಡು ಹೋಗಿ. ಜಿಲ್ಲಾಧಿಕಾರಿ ಬಾರದೇ ಇದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ. ವರ್ಷ ಕಳೆದರೂ ಅವರಿಗಾಗಿ ಕಾಯುತ್ತಾ ಇಲ್ಲೇ ಕುಳಿತುಕೊಳ್ಳುತ್ತೇವೆ’ ಎಂದು ಪ್ರತಿಭಟನಕಾರರು ಪಟ್ಟು ಮುಂದುವರಿಸಿದರು. ರಸ್ತೆಯಲ್ಲಿಯೇ ಒಲೆ ಹಾಕಿ ಅಡುಗೆ ಮಾಡಲು ಆರಂಭಿಸಿದರು.

ಕೊನೆಗೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಭೇಟಿ ನೀಡಬೇಕಾಯಿತು. ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿ, ಮನವಿ ಸ್ವೀಕರಿಸಿ ಅವರು ಮಾತನಾಡಿ, ‘ಪ್ರತಿ ಸೋಮವಾರ ಜನಸ್ಪಂದನ ಸಭೆ ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಬಹಳ ದೂರದ ಗ್ರಾಮಗಳಿಂದ ಜನ ಬಂದು ಸಮಸ್ಯೆ ಬಗೆಹರಿಸಿಕೊಂಡು ಹೋಗುತ್ತಿದ್ದಾರೆ. ನಾನು ಬಂದು ಎರಡು ತಿಂಗಳು ಕಳೆದರೂ ನೀವು ಒಮ್ಮೆಯೂ ಜನಸ್ಪಂದನಕ್ಕೆ ಬಂದಿಲ್ಲ. ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿಲ್ಲ’ ಎಂದರು.

25 ವರ್ಷಗಳಿಂದ ಮನವಿ ನೀಡುತ್ತಿದ್ದರೂ ಯಾವುದೇ ಕೆಲಸಗಳಾಗಿಲ್ಲ. ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಜಿಲ್ಲಾಡಳಿತಭವನ ಕಟ್ಟಲಾಗಿದೆ. ಇಲ್ಲಿರುವ ಶಾಲೆಗಳಿಗೆ ಶತಮಾನ ತುಂಬುತ್ತಾ ಬಂದರೂ ಸರಿಯಾದ ದಾಖಲೆಪತ್ರಗಳಿಲ್ಲ. ಶಾಲೆ ಸೋರುತ್ತಿದೆ. ಊರಲ್ಲಿ ರಸ್ತೆ ಸರಿ ಇಲ್ಲ. ಬಸ್‌ ಬರುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಪಾಲಿಕೆ 15 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಸುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.

‘ಚುನಾವಣೆ ಮುಗಿದ ಕೂಡಲೇ ನಿಮ್ಮ ಊರಿನ ಎಲ್ಲಾ ಕಡೆ ಸುತ್ತಾಡುವೆ. ನಿಮ್ಮ ಬೇಡಿಕೆಗಳನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಈಡೇರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಹನುಮಂತಪ್ಪ, ಸಚಿನ್‌, ನಾಗರಾಜ್‌, ಸಿಕಂದರ್‌, ಬಸವರಾಜಪ್ಪ, ನಾಗಪ್ಪ, ಮಂಜುಳಾ, ರತ್ನ, ಮುತ್ತಮ್ಮ, ಶಾಂತಮ್ಮ, ರಮೇಶ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.