ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆಯಾಗಲ್ಲ ವದಂತಿ ಬಿಡಿ, ಪರೀಕ್ಷೆ ಕಡೆ ನೋಡಿ

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಯು ಜಿ.ಸಿ. ನಿರಂಜನ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 9:00 IST
Last Updated 24 ಫೆಬ್ರುವರಿ 2020, 9:00 IST
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಯು ಜಿ.ಸಿ. ನಿರಂಜನ್‌, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಎ. ರಾಜೇಂದ್ರ ಕುಮಾರ್‌, ರಂಗನಾಥ ಆರ್‌, ಟಿ.ಎಸ್‌. ಕೂಸಗಟ್ಟಿ, ಎಚ್‌.ವಿ. ಶ್ರೀನಿವಾಸ್‌ ಭಾಗವಹಿಸಿದ್ದರು.
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಡಿಡಿಪಿಯು ಜಿ.ಸಿ. ನಿರಂಜನ್‌, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಎ. ರಾಜೇಂದ್ರ ಕುಮಾರ್‌, ರಂಗನಾಥ ಆರ್‌, ಟಿ.ಎಸ್‌. ಕೂಸಗಟ್ಟಿ, ಎಚ್‌.ವಿ. ಶ್ರೀನಿವಾಸ್‌ ಭಾಗವಹಿಸಿದ್ದರು.   

ದಾವಣಗೆರೆ: ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಕಳೆದ ಮೂರು ವರ್ಷಗಳಿಂದ ಪಿ.ಯು. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ. ಇನ್ನು ಮುಂದೆಯೂ ಆಗಲ್ಲ.

ದ್ವಿತೀಯ ಪಿಯು ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಗೊಂದಲ, ಪ್ರಶ್ನೆಗಳು, ಸಂಶಯಗಳನ್ನು ನಿವಾರಿಸಲು ಭಾನುವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಸಿ. ನಿರಂಜನ್‌ ಅವರು ವ್ಯಕ್ತಪಡಿಸಿದ ವಿಶ್ವಾಸದ ನುಡಿಗಳಿವು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಜಿಲ್ಲೆಯ ಆಡಳಿತಯಂತ್ರ ಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ. ಹಿಂದೆ ಪ್ರಶ್ನೆಪತ್ರಿಕೆಗಳನ್ನು ಟ್ರೆಷರಿಯಲ್ಲಿ ಇಡಲಾಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಮತಯಂತ್ರಗಳಿಗೆ ಹೇಗೆ ಸ್ಟ್ರಾಂಗ್‌ರೂಂ ವ್ಯವಸ್ಥೆ ಮಾಡುತ್ತಾರೋ ಅದೇ ಮಾದರಿಯಲ್ಲಿ ಈಗ ಪ್ರಶ್ನೆಪತ್ರಿಕೆಗೆ ಪ್ರತ್ಯೇಕ ಕೊಠಡಿಗಳು, ಬಂದೋಬಸ್ತ್‌ ಮಾಡಲಾಗುತ್ತದೆ. ಅದರ ವೀಕ್ಷಣೆಗೆ ತಹಶೀಲ್ದಾರ್‌, ಬಿಇಒ, ಉಪಪ್ರಾಚಾರ್ಯ ಅವರನ್ನೊಳಗೊಂಡ ತ್ರಿಸದಸ್ಯರ ಸಮಿತಿ ಇರುತ್ತದೆ. ಪರೀಕ್ಷಾ ದಿನ ಪ್ರಶ್ನೆಪತ್ರಿಕೆಯನ್ನು ಅತ್ಯಂತ ಭದ್ರತೆಯಲ್ಲಿ ಒಯ್ಯಲಾಗುತ್ತದೆ. ಪ್ರಶ್ನೆಪತ್ರಿಕೆ ಒಯ್ಯುವ ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ಆ ವಾಹನ ಒಮ್ಮೆ ಇಲ್ಲಿಂದ ಹೊರಟರೆ ಮಧ್ಯದಲ್ಲಿ ಎಲ್ಲಿಯೂ ನಿಲ್ಲುವಂತಿಲ್ಲ. ನಿಂತರೆ ಅಲರ್ಟ್‌ ಬರುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಆರಂಭಕ್ಕಿಂತ ಅರ್ಧ ಗಂಟೆ ಮೊದಲಷ್ಟೇ ಪ್ರಶ್ನೆಪತ್ರಿಕೆ ತಲುಪಲಿದೆ. ಹಾಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಯಾರೋ ಹಬ್ಬಿಸುವ ವದಂತಿಗಳಿಗೆ ಕಿವಿಕೊಡಬೇಡಿ. ಎಲ್ಲರಿಗೂ ಒಳಿತಾಗಲಿ ಎಂದು ಶುಭಹಾರೈಸಿದರು.

ADVERTISEMENT

ವಿದ್ಯಾರ್ಥಿಗಳು ಮೊಬೈಲ್‌ ಬಳಸುವಂತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅಷ್ಟು ಮಾತ್ರವಲ್ಲ, ಯಾವ ಸಿಬ್ಬಂದಿ, ಅಧಿಕಾರಿಯೂ ಬಳಕೆ ಮಾಡುವಂತಿಲ್ಲ. ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಮುಖ್ಯಸ್ಥರು ಇರುತ್ತಾರೆ. ಅವರು ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲರೇ ಆಗಿರುತ್ತಾರೆ.

ಖಾಸಗಿ ಕಾಲೇಜುಗಳಲ್ಲಿ ಕೂಡ ಅವರೇ ಮುಖ್ಯಸ್ಥರಾಗಿರುತ್ತಾರೆ. ಅವರೊಬ್ಬರು ಮೊಬೈಲ್‌ ಬಳಸಲು ಅವಕಾಶ ನೀಡಲಾಗಿದೆ. ಅದೂ ಬೇಸಿಕ್‌ ಸೆಟ್‌ ಆಗಿರಬೇಕು. ಅದರಲ್ಲಿ ಕರೆಗೆ ಉತ್ತರಿಸುವ ಮತ್ತು ಎಸ್‌ಎಂಎಸ್‌ ಕಳುಹಿಸುವ ಅನುಕೂಲ ಹೊರತುಪಡಿಸಿ ಬೇರೆ ಸಾಫ್ಟ್‌ವೇರ್‌ ಇರಬಾರದು. ಫೋಟೊ ತೆಗೆಯುವ, ಇಂಟರ್‌ನೆಟ್‌ ವ್ಯವಸ್ಥೆ ಇರುವ ಮೊಬೈಲ್‌ ತರುವಂತಿಲ್ಲ ಎಂದು ನಿಯಮ ಮಾಡಲಾಗಿದೆ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಸಹಿತ ಎಲ್ಲ ಇಲಾಖೆಗಳ ಅಧಿಕಾರಿಗಳು ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. 2016ರಲ್ಲಿ ಸೋರಿಕೆ ಹಗರಣ ನಡೆದ ಬಳಿಕ ಇಂಥ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮುಖ್ಯಸ್ಥರು, ಪ್ರಶ್ನೆಪತ್ರಿಕೆ ಪಾಲಕರು, ಹಿರಿಯ ಉಪನ್ಯಾಸಕರು, ಇಬ್ಬರ ವಿಚಕ್ಷಣ ದಳ, ಬೇರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿರುವ ವೀಕ್ಷಕರು ಇರುತ್ತಾರೆ. ಹಾಗಾಗಿ ಯಾವುದೇ ಲೋಪಗಳು ಆಗುವುದಿಲ್ಲ ಎಂದು ತಿಳಿಸಿದರು.

ವಾಚ್‌ ಇಲ್ಲ, ನೀರಿನ ಸೌಲಭ್ಯ: ಯಾವುದೇ ತರಹದ ವಾಚ್‌ ತರುವಂತಿಲ್ಲ. ಸಿಂಪಲ್‌ ಕ್ಯಾಲ್‌ಕ್ಯುಲೇಟರ್‌ ಹೊರತುಪಡಿಸಿ ಬೇರೇನನ್ನೂ ಇಟ್ಟುಕೊಳ್ಳುವಂತಿಲ್ಲ. ಮಕ್ಕಳಿಗೆ ಸಮಯ ನೋಡಲು ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರ ಹಾಕಲಾಗುತ್ತದೆ. ಅಲ್ಲದೇ ಆರಂಭದಲ್ಲಿ ಮೊದಲ ಬೆಲ್‌ ನಂತರ ಉತ್ತರ ಪ್ರಶ್ನೆಪತ್ರಿಕೆ ವಿತರಿಸಲಾಗುತ್ತದೆ. ಅದಾಗಿ 15 ನಿಮಿಷಕ್ಕೆ ಎರಡನೇ ಬೆಲ್‌ ಆಗುತ್ತದೆ. ಈ 15 ನಿಮಿಷಗಳು ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಲು ಇರುವ ಸಮಯವಾಗಿರುತ್ತದೆ. ಬಳಿಕ ಪ್ರತಿ ಅರ್ಧಗಂಟೆಗೊಮ್ಮೆ ಬೆಲ್‌ ಆಗುತ್ತದೆ. ಹಿಂದೆ ‘ವಾಟರ್‌ ಬಾಯ್ಸ್‌’ ಇದ್ದರು. ಅವರು ನೀರು ತಂದು ಕೊಡುತ್ತಿದ್ದರು. ಈಗ ಪ್ರತಿ ಟೇಬಲ್‌ ಮೇಲೆ ನೀರಿನ ಬಾಟಲ್‌ ಇಡಲಾಗುತ್ತದೆ. ಹೊರಗಿನಿಂದ ಯಾರೂ ನೀರು ತಂದು ಕೊಡುವುದಿಲ್ಲ. ಒಂದು ವೇಳೆ ಶೌಚಾಲಯಕ್ಕೆ ಅನಿವಾರ್ಯವಾಗಿ ಹೋಗಬೇಕಿದ್ದರೆ ಅವರ ಜತೆ ಇನ್ನೊಬ್ಬರನ್ನು ಕಳುಹಿಸಲಾಗುತ್ತದೆ ಎಂದು ನಿಯಮಗಳನ್ನು ವಿವರಿಸಿದರು.

ಅರ್ಧ ಗಂಟೆಗಿಂತ ಹೆಚ್ಚು ತಡವಾಗಿ ಬರುವಂತಿಲ್ಲ: ರೀಕ್ಷಾರ್ಥಿ ಪರೀಕ್ಷಾ ಕೇಂದ್ರಕ್ಕೆ ಬರುವಾಗ ಯಾವುದೋ ಕಾರಣಕ್ಕೆ ತಡವಾಗಿಬಿಡಬಹುದು. ಆದರೆ ಅದು ಅರ್ಧಗಂಟೆಗಿಂತ ಹೆಚ್ಚು ತಡವಾದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ಬೆಳಿಗ್ಗೆ 10.15ಕ್ಕೆ ಪರೀಕ್ಷೆ ಆರಂಭಗೊಂಡರೆ 10.45ರ ಒಳಗೆ ಬರುವವರಿಗಷ್ಟೇ ಅವಕಾಶ ನೀಡಲಾಗುತ್ತದೆ. ಇನ್ನು ಬೇಗ ಬರೆದು ಮುಗಿಸಿ ಹೋಗುವವರಿಗೂ ಅವಕಾಶ ಇದೆ. ಆದರೆ ಮೊದಲ ಅರ್ಧ ಗಂಟೆ ಆದ ಮೇಲಷ್ಟೇ ಈ ಅವಕಾಶ. ಹಾಗೆ ಹೋಗುವವರು ಉತ್ತರ ಪತ್ರಿಕೆಯ ಜತೆಗೆ ಪ್ರಶ್ನೆಪತ್ರಿಕೆಯನ್ನೂ ನೀಡಿ ಹೋಗಬೇಕು. ಅವರಿಗೆ ಪ್ರಶ್ನೆಪತ್ರಿಕೆ ಬೇಕು ಎಂದರೆ ಪರೀಕ್ಷಾ ಸಮಯ ಮುಗಿದ ಬಳಿಕ ಬಂದು ಪಡೆಯಬೇಕು ಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲರಾದ ಎ. ರಾಜೇಂದ್ರ ಕುಮಾರ್‌, ರಂಗನಾಥ ಆರ್‌, ಟಿ.ಎಸ್‌. ಕೂಸಗಟ್ಟಿ, ಎಚ್‌.ವಿ. ಶ್ರೀನಿವಾಸ್‌ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು ನೀಡಿದರು.

ಮೂರು ಪ್ರವೇಶಪತ್ರ

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪ್ರವೇಶಪತ್ರ (ಹಾಲ್‌ಟಿಕೆಟ್‌)ಗಳನ್ನು ಈ ಹಿಂದೆ ಆಯಾ ಕಾಲೇಜುಗಳಿಗೆ ಪರೀಕ್ಷೆ ಆರಂಭವಾಗುವ ನಾಲ್ಕೈದು ದಿನಗಳ ಮೊದಲು ತಲುಪಿಸಲಾಗುತ್ತಿತ್ತು. ಈ ಬಾರಿ ಈಗಾಗಲೇ ಆನ್‌ಲೈನ್‌ನಲ್ಲಿ ಪ್ರವೇಶಪತ್ರಗಳನ್ನು ನೀಡಲಾಗಿದೆ. ಆದರೆ ಅದನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ. ಆಯಾ ಕಾಲೇಜಿನ ಪ್ರಾಂಶುಪಾಲರ ಐಡಿಯಲ್ಲಿ ಲಾಗಿನ್‌ ಆಗಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮೂರು ಪ್ರತಿಗಳು ಇರುತ್ತವೆ. ಒಂದನ್ನು ಆ ಕಾಲೇಜಿನವರೇ ಇಟ್ಟುಕೊಳ್ಳುತ್ತಾರೆ. ಇನ್ನೊಂದನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಮೂರನೇಯದ್ದನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಯಾವುದೋ ಆತಂಕ, ಗೊಂದಲದಲ್ಲಿ ಒಂದು ವೇಳೆ ವಿದ್ಯಾರ್ಥಿ ಪ್ರವೇಶಪತ್ರ ಬಿಟ್ಟು ಬಂದರೂ ಪರೀಕ್ಷಾ ಕೇಂದ್ರದಲ್ಲಿರುವ ಪ್ರವೇಶಪತ್ರವನ್ನು ಪರೀಕ್ಷಿಸಿ ಅದೇ ವಿದ್ಯಾರ್ಥಿ ಎಂಬುದು ಖಚಿತ ಮಾಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಪ್ರವೇಶಪತ್ರದಲ್ಲಿ ಭಾವಚಿತ್ರ ಸಹಿತ ಹಲವು ಮಾಹಿತಿ ಇರುವುದರಿಂದ ಪರೀಕ್ಷಾರ್ಥಿಯ ಬದಲು ಇನ್ಯಾರೋ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಒಂದು ವೇಳೆ ಬರೆಯಲು ಬಂದರೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಜಿ.ಸಿ. ನಿರಂಜನ್‌ ಸ್ಪಷ್ಟಪಡಿಸಿದರು.

ಶೇ 10 ಫಲಿತಾಂಶ ಹೆಚ್ಚಳದ ಗುರಿ

ಪಿಯು ಫಲಿತಾಂಶದಲ್ಲಿ ಕಳೆದ ವರ್ಷ ಜಿಲ್ಲೆ ಶೇ 62 ಫಲಿತಾಂಶ ಪಡೆದು ರಾಜ್ಯದಲ್ಲಿ 21ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ 10ರಷ್ಟು ಫಲಿತಾಂಶ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆಗ 15 ಸ್ಥಾನಗಳ ಒಳಗೆ ಜಿಲ್ಲೆ ಬರಲಿದೆ ಎಂದು ಉಪನಿರ್ದೇಶಕ ಜಿ.ಸಿ. ನಿರಂಜನ್‌ ತಿಳಿಸಿದರು.

ಫೆ.25ರವರೆಗೂ ತರಗತಿಗಳು ನಡೆಯಲಿವೆ. ಡಿಸೆಂಬರ್‌ ಅಂತ್ಯದ ವರೆಗೆ ಪಠ್ಯಪೂರಕ ಪಠ್ಯೇತರ ಕಾರ್ಯಕ್ರಮಗಳಿಗೆ ಪ್ರತಿದಿನ ಎರಡು ಅವಧಿಗಳನ್ನು ಮೀಸಲಿಡಲಾಗಿತ್ತು. ಜನವರಿಯಿಂದ ಈ ಎರಡು ಅವಧಿ ಪರೀಕ್ಷೆ ತಯಾರಿಗಾಗಿ ಬಳಸಿಕೊಳ್ಳಲಾಗುತ್ತದೆ. ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಬೆಳಿಗ್ಗೆ ತರಗತಿ ಆರಂಭವಾಗುವುದಕ್ಕಿಂತ ಮುಂಚೆಯೇ ಒಂದು ಗಂಟೆ ಹೆಚ್ಚುವರಿಯಾಗಿ ತರಬೇತಿ ನೀಡಲಾಗಿದೆ ಎಂದರು.

ಪ್ರಮುಖ ಅಂಶಗಳು

* ಉತ್ತರ ಪತ್ರಿಕೆಗಳಿಗೆ ಯುನಿಕ್‌ ಕೋಡ್‌ ಇರುತ್ತದೆ. ಯಾವ ಪತ್ರಿಕೆ ಯಾವ ಪರೀಕ್ಷಾ ಕೇಂದ್ರಕ್ಕೆ ಹೋಗಿದೆ ಎಂ‌ಬುದು ಗೊತ್ತಾಗುತ್ತದೆ.

* ಯಾವುದೇ ಕಾಲೇಜಿನ ವಿದ್ಯಾರ್ಥಿಗೆ ಅದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯುವ ಅವಕಾಶ ಇರುವುದಿಲ್ಲ. ಹಾಗೆಯೇ ಒಂದೇ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಒಟ್ಟಿಗೆ ಇರುವುದಿಲ್ಲ.

* ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗಬೇಕಿರುವುದರಿಂದ ಅವರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬರುವುದಿದ್ದರೆ ಪ್ರವೇಶಪತ್ರ ತೋರಿಸಿದರೆ ಅವರಿಗೆ ಟಿಕೆಟ್‌ ದರ ಇರುವುದಿಲ್ಲ.

* 70 ಅಂಕ ಅಥವಾ 100 ಅಂಕ ಹೀಗೆ ಬೇರೆ ಬೇರೆ ವಿಷಯಗಳಿಗೆ ಅಂಕದ ವ್ಯತ್ಯಾಸ ಇದ್ದರೂ ಪರೀಕ್ಷಾ ಅವಧಿ 3 ಗಂಟೆ 15 ನಿಮಿಷವೇ ಇರುತ್ತದೆ.

* ಪುನರಾವರ್ತಿತ ಪರೀಕ್ಷೆ ಬರೆಯುವವರಿಗೆ 2017–18ರ ಸಾಲಿನ ಪ್ರಶ್ನೆ ಪತ್ರಿಕೆಯೂ ಇರುತ್ತದೆ. ಹೊಸ ಪ್ರಶ್ನೆ ಪತ್ರಿಕೆಯೂ ಇರುತ್ತದೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗೆ ನೀಡಲಾಗಿದೆ.

* ವಿದ್ಯಾರ್ಥಿಗಳು ಉತ್ತರ ಬರೆದ ಬಳಿಕ ನೋಂದಣಿ ಸಂಖ್ಯೆ ಸರಿ ಇದೆಯೇ ಎಂದು ನೋಡಿ ಸಹಿ ಮಾಡುವುದು ಸಹಿತ ಒಟ್ಟು ಮೂರು ಕಡೆ ಸಹಿ ಮಾಡಬೇಕಾಗುತ್ತದೆ.

* ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆದು ಮುಗಿಸಿದ ಮುಂದಿನ ಖಾಲಿ ಪುಟಕ್ಕೆ ಕೊಠಡಿ ಪರಿವೀಕ್ಷಕರು ‘ಮುಕ್ತಾಯವಾಗಿದೆ’ ಅಥವಾ ‘ದಿ ಎಂಡ್‌’ ಎಂಬ ಸೀಲ್ ಹಾಕಿ ಸಹಿ ಮಾಡಬೇಕು.

* ಹಿಂದಿನ ಸಿಲೆಬಸ್‌ ಸುಲಭ ಇತ್ತು. ಪ್ರಶ್ನೆಪತ್ರಿಕೆ ಕ್ರಮ ಕಷ್ಟ ಇತ್ತು. ಈಗ ಸಿಲೆಬಸ್‌ ಕಷ್ಟ ಇರುತ್ತದೆ. ಪ್ರಶ್ನೆ ಪತ್ರಿಕೆ ಸುಲಭ ಇರುತ್ತದೆ.

ಫೋಟೊ ತೆಗೆಯುವಂತಿಲ್ಲ

ಮಾಧ್ಯಮದವರು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಗೆ ಬಂದಿ ಫೋಟೊ ತೆಗೆಯುತ್ತಿದ್ದರು. ಇನ್ನು ಮುಂದೆ ಈ ಅವಕಾಶ ಇರುವುದಿಲ್ಲ. ಪರೀಕ್ಷೆ ಆರಂಭವಾಗುವ ಮುನ್ನ ಹೊರಗೆ ಮಕ್ಕಳು ಪರೀಕ್ಷೆಗೆ ತಯಾರಾಗುವ ಫೋಟೊ ತೆಗೆದುಕೊಳ್ಳಬಹುದು. ಆದರೆ ಪರೀಕ್ಷಾ ಕೊಠಡಿಗೆ ಪರೀಕ್ಷೆಗೆ ಮೊದಲೂ ಹೋಗುವಂತಿಲ್ಲ.

ಅಂಗವಿಕಲರಿಗೆ ವಿಶೇಷ ವ್ಯವಸ್ಥೆ

ದೃಷ್ಟಿ ದೋಷ, ಶ್ರವಣದೋಷ, ನರ ದೌರ್ಬಲ್ಯ ಮುಂತಾದ ಅಂಗವೈಕಲ್ಯ ಇರುವವರಿಗೆ ಹೆಚ್ಚುವರಿಯಾಗಿ ಒಂದು ಗಂಟೆ ಅವಧಿ ನೀಡಲಾಗುತ್ತದೆ. ಅವರು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಾರೆ. ಅವರಿಗೆ ಪರೀಕ್ಷೆ ಬರೆಯಲು ಸಹಾಯಕರು ಬೇಕಾಗಿದ್ದರೆ ಈ ಸಹಾಯಕರು ಅವರ ತರಗತಿಯವರು ಆಗಿರಬಾರದು. ಅವರಿಗಿಂತ ಹೆಚ್ಚು ಕಲಿತವರೂ ಆಗಿರಬಾರದು. ದ್ವಿತೀಯ ಪಿಯು ಗಿಂತ ಕೆಳಗಿನ ಕ್ಲಾಸ್‌ನವರು, ಇಲ್ಲವೇ ಬೇರೆ ವಿಭಾಗದವರು ಅಂದರೆ ಆರ್ಟ್ಸ್‌ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದರೆ ಅವರಿಗೆ ಬರೆಯಲು ಕಾಮರ್ಸ್‌ ಅಥವಾ ಸೈನ್ಸ್‌ ವಿಭಾಗದವರು ಸಹಾಯ ಮಾಡಬಹುದು. ದೃಷ್ಟಿ ದೋಷವುಳ್ಳವರ ಉತ್ತರ ಪತ್ರಿಕೆಗೆ ಹಸಿರು ಸ್ಟಿಕ್ಕರ್‌ ಅಂಟಿಸಲಾಗುತ್ತದೆ. ಅವರಿಗೆ ಮ್ಯಾಪ್‌, ಗ್ರಾಫ್‌ಗಳನ್ನು ನೀಡಿದರೆ ಗುರುತಿಸಲು ಆಗುವುದಿಲ್ಲ. ಹಾಗಾಗಿ ಅವರಿಗೆ ಭಿನ್ನ ಪ್ರಶ್ನೆಪತ್ರಿಕೆ ನೀಡಲಾಗಿರುತ್ತದೆ.

ಪ್ರಶ್ನೋತ್ತರ

* ಉತ್ತರ ಬರೆಯಲು ಹೆಚ್ಚುವರಿ ಶೀಟ್ ಕೊಡುವುದಿಲ್ಲ. ಏನು ಮಾಡುವುದು?

ಸಿಂಧು, ಸಹನಾ, ಮಂಜುನಾಥ, ಮಾಗನೂರು ಬಸಪ್ಪ ಕಾಲೇಜು

ಉತ್ತರ: ಈ ವರ್ಷದಿಂದ ಉತ್ತರ ಬರೆಯಲು ಹೆಚ್ಚುವರಿ ಹಾಳೆಗಳನ್ನು ನೀಡುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. 40 ಪುಟಗಳ ಮತ್ತೊಂದು ಬುಕ್‌ಲೆಟ್‌ ಅನ್ನೇ ನೀಡಲಾಗುತ್ತದೆ. ಆದರೆ ಮೊದಲ ಬುಕ್‌ಲೆಟ್‌ನ ಎಲ್ಲಾ ಪುಟಗಳಲ್ಲೂ ಉತ್ತರ ಬರೆದಿರಬೇಕು. ಎಲ್ಲೂ ಖಾಲಿ ಬಿಟ್ಟಿರಬಾರದು. ಗೆರೆಗಳ ನಡುವೆ ಹೆಚ್ಚಿನ ಅಂತರ ಬಿಡಬಾರದು.

ಹೆಚ್ಚುವರಿ ಹಾಳೆಗಳನ್ನು ತೆಗೆದುಕೊಂಡಾಗ ಟ್ಯಾಗ್ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಶೀಟ್‌ಗಳು ಕಳೆದುಹೋಗುವುದು ಇಲ್ಲವೇ ಅದಲು–ಬದಲಾಗುವ ಸಂಭವ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಸಮಯ ಉಳಿತಾಯವಾಗುವ ಜೊತೆಗೆ ಟ್ಯಾಗ್ ಮಾಡುವುದು ತಪ್ಪುತ್ತದೆ.

* ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ವಿಷಯಗಳಿಗೆ ಹೆಚ್ಚು, ಕೆಲವು ವಿಷಯಗಳಿಗೆ ತುಂಬಾ ಕಡಿಮೆ ಸಮಯವಿದೆಯಲ್ಲಾ?

ಸಿದ್ದೇಶ್, ಯಶಸ್ವಿನಿ, ಮಂಜುನಾಥ್ ಎನ್., ಮಾಗನೂರು ಬಸಪ್ಪ ಕಾಲೇಜು

ಉತ್ತರ: ಪರೀಕ್ಷಾ ವೇಳಾಪಟ್ಟಿ ತಯಾರಿಸುವುದು ಇಲಾಖೆಯ ಕಾರ್ಯ. ಹೆಚ್ಚು ದಿನಗಳ ಅಂತರ ಕೊಡುವ ಹಾಗಿಲ್ಲ. ಈಗ ಇರುವ ವೇಳಾಪಟ್ಟಿ ಪ್ರಕಾರ ಗಣಿತ ವಿಷಯಕ್ಕೆ ಮೂರು ದಿವಸ ಅಂತರವಿದೆ. ಹೆಚ್ಚು ದಿವಸ ಅಂತರ ಇರುವಂತೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ವಿಷಯಗಳಿಗೆ ಸಂಬಂಧಪಟ್ಟಂತೆ ಎಷ್ಟು ದಿವಸ ಅಂತರ ಬೇಕು ಎಂಬುದನ್ನು ನಿರ್ಧರಿಸಿ ಪತ್ರಿಕೆ ತಯಾರು ಮಾಡಲಾಗುತ್ತದೆ. ಆರಂಭದಿಂದಲೇ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಬೇಕು.

* ಗಣಿತ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆದರೆ ಭಯ ಹೆಚ್ಚಾಗುತ್ತಿದೆ. ಏನು ಮಾಡುವುದು? ಪರಿಹಾರ ತಿಳಿಸಿ.

ರೇವಂತ್, ಶ್ರೀರಕ್ಷಾ, ಮಾಗನೂರು ಬಸಪ್ಪ ಕಾಲೇಜು

ಉತ್ತರ: ಒತ್ತಡವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಶಿಕ್ಷಕರು ಹೇಳಿಕೊಟ್ಟಿರುತ್ತಾರೆ. ನೀವು ಮನೆಯಲ್ಲೇ ಅಭ್ಯಾಸ ಮಾಡಬೇಕು. ಪ್ರತಿ ದಿವಸ ಧ್ಯಾನ ಮಾಡುವ ಮೂಲಕ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಪತ್ರಿಕೆ ಕೊಟ್ಟ ತಕ್ಷಣ ನೋಡುವ ಬದಲು ಎರಡು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ನಿಮಗೆ ಆತ್ಮೀಯರಾಗಿರುವ ತಂದೆ–ತಾಯಿ, ಶಿಕ್ಷಕರು, ಸ್ನೇಹಿತರು ಹಾಗೂ ಧೈರ್ಯ ತುಂಬಿದವರನ್ನು ನೆನಪಿಸಿಕೊಂಡು ನಂತರ ಪ್ರಶ್ನೆಪತ್ರಿಕೆ ಓದಿ. ನಿಮಗೆ ಉತ್ತರಗಳು ಗೊತ್ತಿರುತ್ತವೆ. ಭಯ ಪಟ್ಟರೆ ನೆನಪಿಗೆ ಬರುವುದಿಲ್ಲ. ಪ್ರಶ್ನೆಪತ್ರಿಕೆ ಓದಿದ ತಕ್ಷಣ ಉತ್ತರ ಬರುತ್ತದೆ ಎಂದು ಬರೆಯಲು ಹೋಗಬೇಡಿ, ಏನು ಬರೆಯಬೇಕು ಎಂಬುದನ್ನು 5 ಸೆಕೆಂಡ್‌ಗಳಲ್ಲಿ ಮನಸ್ಸಿನಲ್ಲೇ ಸಿದ್ಧತೆ ಮಾಡಿಕೊಂಡು ನಂತರ ಬರೆಯಲು ಆರಂಭಿಸಿ. ಆಗ ತಪ್ಪುಗಳು ಆಗುವುದಿಲ್ಲ.

*ಪಿಯು ಬೋರ್ಡ್‌ ಫಲಿತಾಂಶ ಯಾವಾಗ ಬರುತ್ತದೆ, ಸಿಇಟಿಗೆ ಓದಲು ಸಮಯ ಸಿಗುತ್ತದೆಯೇ?

ಪ್ರಿಯಾಂಕ, ಮಾಗನೂರು ಬಸಪ್ಪ ಕಾಲೇಜು

ಉತ್ತರ: ಏಪ್ರಿಲ್ 22, 23ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಬೋರ್ಡ್‌ ಪರೀಕ್ಷೆಯ ನಂತರ ಸಿಇಟಿಗೆ ಪೂರ್ವ ಸಿದ್ಧತೆಗೆ ಒಂದು ತಿಂಗಳ ಕಾಲಾವಕಾಶ ಇರುತ್ತದೆ. ಸಿಇಟಿ ಪರೀಕ್ಷೆ ಆದ ಮೇಲೆ ಪಿಯು ರಿಸಲ್ಟ್ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ.

*ಒಂದು ಅಂಕದ ಪ್ರಶ್ನೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?

ಸಿದ್ದೇಶ್ ಆರ್‌.ವಿ. ಮಾಗನೂರು ಬಸಪ್ಪ ಕಾಲೇಜು

ಉತ್ತರ: ಒಂದು ಅಂಕದ ಪ್ರಶ್ನೆಗೆ ಎರಡು ಉತ್ತರ ಬರೆಯುವುದು ಸರಿಯಲ್ಲ. ಯಾವುದು ಸರಿಯೋ ಅದನ್ನು ಉಳಿಸಿಕೊಳ್ಳಬೇಕು. ಒಂದು ಪ್ರಶ್ನೆಗೆ ಎರಡು ಬಾರಿ ಉತ್ತರ ಬರೆದು, ಮೌಲ್ಯಮಾಪಕರಿಗೆ ಗೊಂದಲ ಮಾಡಬೇಡಿ.

* ಪರೀಕ್ಷೆ ಎಂದರೆ ಹೆದರಿಕೆಯಾಗುತ್ತಿದೆ. ಹೆದರದೇ ಹೇಗೆ ಉತ್ತರ ಬರೆಯಬೇಕು?

ಶ್ರೀರಕ್ಷಾ, ಮಾಗನೂರು ಬಸಪ್ಪ ಕಾಲೇಜು

ಉತ್ತರ: ಚೆನ್ನಾಗಿ ಓದಿದ್ದರೆ ಭಯಪಡುವ ಅಗತ್ಯವಿಲ್ಲ. ಉತ್ತರಗಳು ಗೊತ್ತಿದ್ದು, ಕೈಯಲ್ಲಿ ಪೆನ್ನು ಇದ್ದು, ಎದುರುಗಡೆ ಉತ್ತರ ಪತ್ರಿಕೆಗಳು ಇದ್ದರೆ ಪರೀಕ್ಷೆಗೆ ಏಕೆ ಹೆದರಬೇಕು? ಯಾರಾದರೂ ನಿಮ್ಮನ್ನು ಹೆದರಿಸುತ್ತಾರೆಯೇ? ಪಿಯು ಓದುತ್ತಿದ್ದೀರಿ, ನೀವು ಒಂದನೇ ತರಗತಿ ವಿದ್ಯಾರ್ಥಿನಿಯಲ್ಲ. ಹಿಂದಿನ ಪರೀಕ್ಷೆಯನ್ನೂ ಹೆದರಿಕೆಯಿಂದ ಬರೆದಿದ್ದೀರಾ, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗುತ್ತದೆ. ಸ್ನೇಹಮಯ ವಾತಾವರಣ ಇರುತ್ತದೆ. ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ.

* ಬ್ಲೂ ಪ್ರಿಂಟ್ ಎಂದರೇನು? ಅದು ಹೇಗೆ ಇರುತ್ತದೆ?

ಯಶಸ್ವಿನಿ, ಎಂಜಿಬಿ ಕಾಲೇಜು

ಉತ್ತರ: ಬ್ಲೂಪ್ರಿಂಟ್‌ ಇರುವುದು ಶಿಕ್ಷಕರಿಗೆ ಮಾತ್ರ, ವಿದ್ಯಾರ್ಥಿಗಳಿಗಲ್ಲ. ಇದನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಡಿ. ಬದಲಾಗಿ ಪಠ್ಯಕ್ರಮ (ಸಿಲಬಸ್‌)ನ ಪ್ರಕಾರ ಅಧ್ಯಯನ ಮಾಡಬೇಕು. ಒಂದೊಂದು ಪ್ರಶ್ನೆಪತ್ರಿಕೆಗೂ ಒಂದು ನೀಲನಕ್ಷೆ ಇರುತ್ತದೆ. ಪಠ್ಯಕ್ರಮ ಅನುಸರಿಸಿ ಯಾವ ಪಾಠಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ಮನಗಂಡು ಇಲಾಖೆ ನಿಯಮ ರೂಪಿಸಿರುತ್ತದೆ. ಆ ಪ್ರಕಾರ ಪ್ರಶ್ನೆಪತ್ರಿಕೆ ರಚಿತವಾಗಿರುತ್ತದೆ. ಎಲ್ಲಾ ಪಠ್ಯವನ್ನು ಓದಿದ್ದರೆ ಬ್ಲೂ ಪ್ರಿಂಟ್ ಪ್ರಕಾರವೇ ಪ್ರಶ್ನೆಗಳು ಬರುತ್ತವೆ. ವಿದ್ಯಾರ್ಥಿಗಳು ಬ್ಲೂಪ್ರಿಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಪಠ್ಯವನ್ನು ಓದಿ ಮನನ ಮಾಡಿಕೊಂಡು ಉತ್ತರ ಬರೆಯಿರಿ.

* ಪರೀಕ್ಷೆಯಲ್ಲಿ ಹೊಸ ಬದಲಾವಣೆ ಏನಾಗಿದೆ?

ವಿನಾಯಕ, ಎಸ್‌ಎಸ್‌ಎಚ್ ಜೈನ್ ಕಾಲೇಜು, ಹರಪನಹಳ್ಳಿ

ಉತ್ತರ: ಈ ಬಾರಿ 40 ಪುಟಗಳ ಉತ್ತರ ಪತ್ರಿಕೆಯ ಬುಕ್‌ಲೆಟ್‌ ಇರುತ್ತದೆ. ಇಷ್ಟು ಪುಟಗಳಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಬಹುದು. ಹೆಚ್ಚುವರಿ ಹಾಳೆಗಳನ್ನು ತೆಗೆದುಕೊಂಡು ಅದನ್ನು ನಮೂದಿಸುವುದನ್ನು ತಪ್ಪಿಸಲು, ಮೌಲ್ಯಮಾಪಕರಿಗೂ ಸುಲಭವಾಗಲಿ ಎನ್ನುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ತೀರಾ ಅನಿವಾರ್ಯವಾದಲ್ಲಿ ಮಾತ್ರ ಇನ್ನೊಂದು ಬುಕ್‌ಲೆಟ್‌ ಅನ್ನೇ ನೀಡಲಾಗುವುದು.

* ನನ್ನ ಮಗಳು ಪರೀಕ್ಷಾ ಭಯದಿಂದ ಓದಿದ್ದನ್ನೆಲ್ಲಾ ಮರೆತುಬಿಡುತ್ತಿದ್ದಾಳೆ, ಪರಿಹಾರ ತಿಳಿಸಿ.

ಪುಷ್ಪಲತಾ ಎ. ತ್ಯಾವಣಿಗೆ, ಸಿದ್ದಗಂಗಾ ಕಾಲೇಜು, ವಿನಾಯಕ, ಹರಪನಹಳ್ಳಿ

ಉತ್ತರ: ನಿದ್ದೆಗೆಟ್ಟು ಓದುವುದು ಬೇಡ. ಓದಿದ ನಂತರ ಪುಸ್ತಕ ಮುಚ್ಚಿಟ್ಟು ಮನನ ಮಾಡಬೇಕು. ವಿಜ್ಞಾನದ ‘ಡಿರೈವೆಟಿವ್‌’ಗಳನ್ನು ಇವತ್ತು ಓದಿ, ಮರುದಿನ ಪುನರ್‌ಮನನ ಮಾಡಬೇಕು. ಒಂದು ಅಂಕದ ಪ್ರಶ್ನೆಗೆ ಒಂದೇ ಸಾಲು ಉತ್ತರ ಬರೆದರೆ ಸಾಕು. ಹೆಚ್ಚು ಬರೆಯಬಾರದು. ಅಂಕಕ್ಕೆ ತಕ್ಕಷ್ಟೇ ಬರೆಯಿರಿ. ಗಣಿತದಲ್ಲಿ ಹಂತಗಳು ಸರಿಯಾಗಿದ್ದರೂ ಅಂಕ ಸಿಗುತ್ತದೆ.

ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ತಂತ್ರಗಾರಿಕೆಯ ಬಗ್ಗೆ ಶಿಕ್ಷಕರಿಂದ ಸಲಹೆ ಪಡೆಯಿರಿ, ಓದಿ ಬೇಸರವಾದಾಗ ಬರವಣಿಗೆಯಲ್ಲಿ ತೊಡಗಿಕೊಳ್ಳಿ. ಆರೋಗ್ಯ ಕಾಪಾಡಿಕೊಳ್ಳಬೇಕು. ಪರೀಕ್ಷೆಗೆ 10 ದಿವಸ ಮುಂಚೆ ಹಿತಮಿತವಾದ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ರಿಸಬೇಕು (ಓದುವುದನ್ನು ಬಿಟ್ಟು ನಿದ್ರಿಸುವುದಲ್ಲ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.