ADVERTISEMENT

ಬೆಳೆಗೆ ಬೆಲೆ ಸಿಗದಿದ್ದರೂ ಕಾಣದ ಪ್ರಶ್ನಿಸುವ ಭಾವ

ರೈತ ಹುತಾತ್ಮರ ದಿನಾಚರಣೆಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:16 IST
Last Updated 14 ಸೆಪ್ಟೆಂಬರ್ 2021, 7:16 IST
ದಾವಣಗೆರೆ ತಾಲ್ಲೂಕಿನ ಆನಗೋಡು ಉಳಪನಕಟ್ಟೆ ಕ್ರಾಸ್‍ನಲ್ಲಿರುವ ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ಸೋಮವಾರ ನಡೆದ 29ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು (ಎಡಚಿತ್ರ). ಉಳಪನಕಟ್ಟೆ ಕ್ರಾಸ್‍ನಲ್ಲಿರುವ ರೈತ ಹುತಾತ್ಮರ ಸಮಾಧಿ
ದಾವಣಗೆರೆ ತಾಲ್ಲೂಕಿನ ಆನಗೋಡು ಉಳಪನಕಟ್ಟೆ ಕ್ರಾಸ್‍ನಲ್ಲಿರುವ ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ಸೋಮವಾರ ನಡೆದ 29ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು (ಎಡಚಿತ್ರ). ಉಳಪನಕಟ್ಟೆ ಕ್ರಾಸ್‍ನಲ್ಲಿರುವ ರೈತ ಹುತಾತ್ಮರ ಸಮಾಧಿ   

ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದನ್ನು ಪ್ರಶ್ನಿಸುವ ಮನಃಸ್ಥಿತಿ ಯಾರಲ್ಲೂ ಕಾಣುತ್ತಿಲ್ಲ. ಜನರಲ್ಲಿ ಹೋರಾಟದ ಪ್ರಜ್ಞೆ ಮಾಯವಾಗಿದೆ. ರಾಜೀ ಮನಃಸ್ಥಿತಿಯೇ ಕಾಣುತ್ತಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆನಗೋಡು ಸಮೀಪದ ಉಳಪನಕಟ್ಟೆ ಕ್ರಾಸ್‍ನಲ್ಲಿರುವ ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ಸೋಮವಾರ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯಿಂದ ನಡೆದ 29ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

29 ವರ್ಷಗಳ ಹಿಂದೆ ರಸಗೊಬ್ಬರ ಬೆಲೆ ಏರಿಕೆ ವಿರುದ್ಧದ ಹೋರಾಟದಲ್ಲಿ ಬಲಿಯಾದ ಇಬ್ಬರು ರೈತರನ್ನು ಸ್ಮರಣೆ ಮಾಡಿಕೊಳ್ಳುವ ಸಂದರ್ಭದಲ್ಲಾದರೂ ಜನರು ಎಚ್ಚೆತ್ತುಕೊಳ್ಳಬೇಕು. ಹೋರಾಟದ ಮನೋಭಾವ ಬೆಳೆಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು.

ADVERTISEMENT

ಮನುಷ್ಯ ಎಂದಿಗೂ ಸ್ಥಾವರವಾಗಬಾರದು, ಜಂಗಮ ಆಗಿರಬೇಕು. ರಾಜಕಾರಣಿಗಳು, ಅಧಿಕಾರಿಗಳು ಉನ್ನತ ಸ್ಥಾನಕ್ಕೇರಿದಂತೆಲ್ಲ ಜನಪರ ಕಾಳಜಿಯನ್ನು ಮರೆಯುತ್ತಿದ್ದಾರೆ. ಅದನ್ನು ನೆನಪಿಸುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು. ಗಣಾಚಾರದಂತೆ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಾಗ ಜನರಿಗೆ ಸೌಲಭ್ಯ ಸಿಗಲು ಸಾಧ್ಯ.ಅಧಿಕಾರ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಅಧಿಕಾರವಿದ್ದಾಗ ಜನರಿಗೆ ಸ್ಪಂದಿಸುವುದು ಮುಖ್ಯ. ಬಹಳಷ್ಟು ಅಧಿಕಾರಿಗಳು ಹಣ ಕಂಡಾಗ ಮಾತ್ರ ಸ್ಪಂದಿಸುತ್ತಾರೆ. ಹಣವೇ ಪ್ರಧಾನವಾಗಿದ್ದು, ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೌಲ್ಯಗಳು ಭಾಷಣಕ್ಕಷ್ಟೇ ಸೀಮಿತವಾಗಿವೆ. ಶರಣರ ವಚನಗಳನ್ನು ಮರೆತಿರುವುದರಿಂದ ದಾರಿದ್ರ್ಯ ಬಂದಿದೆ ಎಂದು ವಿಷಾದಿಸಿದರು.

ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಜೊತೆಗೆ ಕನಿಷ್ಠ ಒಂದಾದರೂ ಹಸು ಸಾಕಬೇಕು. ಆಗ ಕೃಷಿಕರ ಬದುಕು ಹಸನಾಗುತ್ತದೆ ಎಂದು ಸಲಹೆ
ನೀಡಿದರು.

ಸಮಿತಿ ಗೌರವಾಧ್ಯಕ್ಷ ಎಚ್. ನಂಜುಂಡಪ್ಪ, ‘ರಸಗೊಬ್ಬರ ಬೆಲೆ ಏರಿಕೆ ವಿರುದ್ಧದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ಧನೂರು ನಾಗರಾಜಾಚಾರ್ ಸಮಾಧಿ ಸ್ಥಳವನ್ನು ಎಲ್ಲರೂ ಸೇರಿ ಅಭಿವೃದ್ಧಿ ಪಡಿಸಬೇಕು. ಇಲ್ಲಿ ನಿರಂತರವಾಗಿ ರೈತಪರ ಕಾರ್ಯಕ್ರಮಗಳು ನಡೆಯುವಂತಾಗಬೇಕು’ ಎಂದರು.

ದಿಕ್ಕು ತಪ್ಪಿರುವ 22 ಕೆರೆಗಳ ಏತ ನೀರಾವರಿ ಯೋಜನೆಯಡಿ ಯಾವುದೇ ಕೆರೆಗೂ ನೀರು ಬರುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ದುರಸ್ತಿ ಕಾರ್ಯಕ್ಕೇ ಹಣ ಪೋಲಾಗುತ್ತಿದೆ. ಇದರ ವಿರುದ್ಧ ರೈತರು ಹೋರಾಟ ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರಣಕ್ಕೆ ರೈತರ ಸಮಾಧಿಯನ್ನು ಸ್ಥಳಾಂತರಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಸವರಾಜ ನಾಯ್ಕ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಬಿ.ಎನ್‌. ಗಿರೀಶ್‌, ರೈತ ಮುಖಂಡರಾದ ಆವರಗೆರೆ ರುದ್ರಮುನಿಸ್ವಾಮಿ, ಕೆ.ಪಿ. ಕಲ್ಲಿಂಗಪ್ಪ, ಹೊನ್ನೂರು ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ಶ್ಯಾಗಲೆ ದೇವೇಂದ್ರಪ್ಪ, ಆಲೂರು ಲಿಂಗರಾಜ, ಎಸ್.ಜಿ. ಕುಸುಮಶ್ರೇಷ್ಠಿ,
ಜಾವೇದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.