ADVERTISEMENT

ನಾನು ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿದ್ದೇವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 16:58 IST
Last Updated 3 ಆಗಸ್ಟ್ 2022, 16:58 IST
   

ದಾವಣಗೆರೆ: ನಾನು ಮತ್ತು ಡಿ.ಕೆ. ಶಿವಕುಮಾರ್ ನಡುವೆ ಬಿರುಕು ಮೂಡಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿರುಕು ಇದೆ ಎನ್ನುವುದು ನಮ್ಮ ವಿರೋಧಿಗಳ ಭ್ರಮೆ, ಮಾಧ್ಯಮಗಳ ಸೃಷ್ಟಿ ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಬ್ಬರೂ ಒಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

‌ನಾನೆಂದಿಗೂ ಜನ್ಮ ದಿನ ಅಚರಿಸಿಕೊಂಡಿರಲಿಲ್ಲ. ‌ಹಿತೈಷಿಗಳು, ಅಭಿಮಾನಿಗಳು ಬಂದು 44 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ನಿಮಗೆ ಜ್ಞಾಪಕಾರ್ಥವಾಗಿ ಹುಟ್ಟು ಹಬ್ಬದ ಕಾರ್ಯಕ್ರಮ ಮಾಡಬೇಕೆಂದು ಒತ್ತಾಯ ಮಾಡಿದರು. ಅವರ ಒತ್ತಡಕ್ಕೆ ಮಣಿದು ಇಲ್ಲಿ ನಿಂತಿದ್ದೇನೆ. ನಿಮ್ಮ ಶುಭಾಶಯ, ಆಶೀರ್ವಾದ ಪಡೆದಿದ್ದೇನೆ. ಅವರ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ಅವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ADVERTISEMENT

ಕಾಂಗ್ರೆಸ್ ಸೇರಿದಾಗ ದಿನದಿಂದಲೂ ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿದ್ದಾರೆ. ನಾನು ಮುಖ್ಯಮಂತ್ರಿ ಆಗಲು ಜನರೇ ಕಾರಣಕರ್ತರು ಎಂಬುದನ್ನು ನೆನೆದುಕೊಳ್ಳುತ್ತೇನೆ. ಬಂಡೆಯಂತೆ ಸಹಕಾರ ನೀಡಿದ್ದನ್ನು ‌ಮರೆಯಲಾಗದು. ಸಕ್ರಿಯ ರಾಜಕಾರಣದಲ್ಲಿ ಐವತ್ತು ವರ್ಷಗಳ ಕಾಲ ಜನರೊಂದಿಗೆ ಇದ್ದೇನೆ. 1978ರಲ್ಲಿ ತಾಲ್ಲೂಕು ಬೋರ್ಡ್ ಮೆಂಬರ್, 1983ರಲ್ಲಿ ಶಾಸಕ, 1985ರಲ್ಲಿ ಮಂತ್ರಿಯಾದೆ. ಜನಪರವಾಗಿ‌ ಕೆಲಸ ಮಾಡಿಕೊಂಡು ಬಂದಿದ್ದೇನೆ. ಜನಶಕ್ತಿಯೇ ದೊಡ್ಡದು. ಜನರ ಆಶೀರ್ವಾದ ಇಲ್ಲದಿದ್ದರೆ ದೀರ್ಘಕಾಲದ ರಾಜಕೀಯ ಸೇವೆ ಮಾಡಲು ಸಾಧ್ಯವಿಲ್ಲ. ಕನ್ನಡ ನಾಡಿನ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾಡಿನ ಸಮಸ್ತ ಜನರಿಗೆ ಧನ್ಯವಾದ ಹೇಳುತ್ತೇನೆ. ದೈಹಿಕ ಮಾನಸಿಕವಾಗಿ ಸದೃಢವಾಗಿರುವ ತನಕ ಸಕ್ರಿಯ ರಾಜಕಾರಣ ದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.