ADVERTISEMENT

ಸೇವೆಗೆ ಸಿಕ್ಕ ಅವಕಾಶ ಇದು: ಗುತ್ತೆಪ್ಪ ಕಟ್ಟಿಮನಿ

ಬಾಲಕೃಷ್ಣ ಪಿ.ಎಚ್‌
Published 3 ಮೇ 2021, 3:37 IST
Last Updated 3 ಮೇ 2021, 3:37 IST
ಗುತ್ತೆಪ್ಪ ಕಟ್ಟಿಮನಿ
ಗುತ್ತೆಪ್ಪ ಕಟ್ಟಿಮನಿ   

ದಾವಣಗೆರೆ: ‘ಕೊರೊನಾ ಸೋಂಕು ಯಾರಿಗೂ ಬರಬಾರದು. ಆದರೆ ಬಂದು ಬಿಟ್ಟಿದೆ. ನಾನು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಇದನ್ನು ವೇತನಕ್ಕೆ ಮಾಡುವ ಕೆಲಸ ಎಂದು ಭಾವಿಸದೇ ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ಎಂದೇ ಪರಿಗಣಿಸಿದ್ದೇನೆ’ ಎಂದು ಸಿ.ಜಿ. ಆಸ್ಪತ್ರೆಯ ಕೊರೊನಾ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ಗುತ್ತೆಪ್ಪ ಕಟ್ಟಿಮನಿ ಅನುಭವ ತಿಳಿಸಿದ್ದಾರೆ.

ಗುತ್ತೆಪ್ಪ ಕಟ್ಟಿಮನಿ ಅವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಗೊಡಚಿಕೊಂಡ ಗ್ರಾಮದವರು. ಅವರು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಎ.ಆರ್‌. ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಕೊರೊನಾ ಬಂದು ಕೋವಿಡ್‌ ವಾರ್ಡ್‌ ಮಾಡಿದಾಗ ಕೋವಿಡ್‌ ಸ್ಟಾಫ್‌ ಆಗಿ ನೇಮಕಗೊಂಡಿದ್ದರು. ಸ್ವತಃ ಕೊರೊನಾ ಸೋಂಕು ಬಂದು ಗುಣಮುಖರಾಗಿ ಕೆಲಸ ಮಾಡುತ್ತಿರುವವರು.

‘ಎಂಐಸಿಯು, ವೆಂಟಿಲೇಟರ್‌ ವಾರ್ಡ್, ಡಿಸಿಎಚ್‌ಸಿ ವಾರ್ಡ್‌ ಹೀಗೆ ಯಾವುದೇ ವಾರ್ಡ್‌ಗಳಿಗೆ ಹಾಕಿದರೂ ಭಯಭೀತಿ ಇಲ್ಲದೇ ಕೆಲಸ ಮಾಡುತ್ತಿದ್ದೇನೆ. ಶಕ್ತಿಮೀರಿ ರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದೇನೆ. ಯಾವುದೇ ರೋಗಿಗಳನ್ನು ಆರೈಕೆ ಮಾಡಬೇಕಿದ್ದರೂ ಸಂಯಮ ಅಗತ್ಯ’ ಎನ್ನುತ್ತಾರೆ ಅವರು.

ADVERTISEMENT

‘ಪಿಪಿಇ ಕಿಟ್‌, ಫೇಸ್‌ಶೀಲ್ಡ್‌, ಮಾಸ್ಕ್‌, ಗ್ಲೌಸ್‌ ಹಾಕಿಕೊಂಡು ನಿರಂತರ ಕೆಲಸ ಮಾಡುವುದು ಕಷ್ಟ. ರೋಗಿಗಳ ಜತೆಗೆ ನಮ್ಮ ಆರೋಗ್ಯವೂ ಉಳಿಯಬೇಕಿದ್ದರೆ ಈ ಮುಂಜಾಗರೂಕತಾ ಕ್ರಮಗಳನ್ನು ವಹಿಸಲೇಬೇಕಾಗುತ್ತದೆ’ ಎಂದು ವಿವರಿಸಿದರು.

‘ಮನೆಯಲ್ಲಿ ಅಪ್ಪ, ಅಮ್ಮ, ಪತ್ನಿ, 8ನೇ ತರಗತಿಯಲ್ಲಿ ಓದುತ್ತಿರುವ ಮಗಳು, ಎರಡನೇ ತರಗತಿಯಲ್ಲಿ ಓದುತ್ತಿರುವ ಮಗ ಇದ್ದಾರೆ. ಕಳೆದ ವರ್ಷ ಕೊರೊನಾ ಬಂದಾಗ ಊರಿಗೆ ಹೋಗದೇ
ಇಲ್ಲೇ ಇದ್ದೆ. ಕೊರೊನಾ ಕಡಿಮೆಯಾದ ಬಳಿಕ ಹೋಗಿ ಬರುತ್ತಿದ್ದೆ. ಈಗ ಎರಡನೇ ಅಲೆ ಬಂದ ಬಳಿಕ ಊರಿಗೆ ಹೋಗಿಲ್ಲ.

ಯಾವಾಗ ಬರ್ತೀರಿ ಎಂದು ಮಕ್ಕಳು ಕೇಳುತ್ತಿರುತ್ತಾರೆ. ಅವರ ಜತೆ ವಿಡಿಯೊ ಕಾಲ್‌ ಮಾಡಿ ಮಾತನಾಡಿ ಸಮಾಧಾನ ಮಾಡುತ್ತಿದ್ದೇನೆ’ ಎಂದು ವೈಯಕ್ತಿಕ ವಿವರಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.