ADVERTISEMENT

ಪಡಿತರ ಧಾನ್ಯಗಳ ಸ್ವಾವಲಂಬನೆಗೆ ಚಿಂತನೆ

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 14:43 IST
Last Updated 3 ನವೆಂಬರ್ 2019, 14:43 IST
ಹನುಮಗೌಡ ಬೆಳಗುರ್ಕಿ
ಹನುಮಗೌಡ ಬೆಳಗುರ್ಕಿ   

ದಾವಣಗೆರೆ: ಪಡಿತರ ಅಕ್ಕಿಗೆ ಹೆಚ್ಚಾಗಿ ಉತ್ತರದ ರಾಜ್ಯಗಳನ್ನು ಅವಲಂಬಿಸಿದ್ದು, ಪಡಿತರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಬೆಳೆಗಳನ್ನು ಬೆಳೆಯಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಹೇಳಿದರು.

ದಾವಣಗೆರೆಯ ಎಪಿಎಂಸಿಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿ, ‘ಪಡಿತರಕ್ಕೆ ತಿಂಗಳಿಗೆ 3 ಲಕ್ಷ ಟನ್‌ ಆಹಾರ ಬೇಕಾಗಿದೆ. ರಾಜ್ಯದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಸಂಸ್ಕೃತಿ ಇದ್ದು, ಉತ್ತರ ಕರ್ನಾಟಕದಲ್ಲಿ ಶೇ 50ರಷ್ಟು ಜೋಳ, ಮಲೆನಾಡಿನಲ್ಲಿ ಭತ್ತ, ದಕ್ಷಿಣ ಭಾಗದಲ್ಲಿ ಶೇ 50ರಷ್ಟು ರಾಗಿ ಬೆಳೆಯುವಂತಹ ಬೆಳೆ ಯೋಜನೆಯನ್ನು ತಯಾರು ಮಾಡಲು ಶಿಫಾರಸು ಮಾಡಲಾಗುವುದು’ ಎಂದರು.

‘ರಾಜ್ಯದಲ್ಲಿ 2 ಕೋಟಿ ಎಕರೆಯಲ್ಲಿ ಆಹಾರ ಬೆಳೆಯನ್ನು ಬೆಳೆಯುತ್ತಿದ್ದು, 50 ಲಕ್ಷ ಎಕರೆಯಲ್ಲಿ ಪಡಿತರ ಧಾನ್ಯಗಳನ್ನು ಬೆಳೆದರೆ ಶೇ 25ರಷ್ಟು ಭೂಮಿ ಬೆಳೆ ಯೋಜನೆಗೆ ತಂದಂತೆ ಆಗುತ್ತದೆ. ಧಾನ್ಯಗಳನ್ನು ಸಂಗ್ರಹಿಸಲು ಉಗ್ರಾಣ ಬೇಕು. ರೈತರು ಬದ್ಧರಾಗಿ ರಾಜ್ಯ ಸರ್ಕಾರ ಒಪ್ಪಿದರೆ ಸ್ವಾವಲಂಬನೆ ಸಾಧಿಸಬಹುದು’ ಎಂದರು.

ADVERTISEMENT

ಮೆಕ್ಕೆಜೋಳ ಪ್ರದೇಶ ಹೆಚ್ಚಳ:‘ಈ ಬಾರಿ ಮೆಕ್ಕೆಜೋಳ ಬೆಳೆಯುವ ಪ್ರದೇಶ ಶೇ 3ರಷ್ಟು ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ಬಾರಿ ಶೇ 34ರಷ್ಟು ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಲಿದೆ. ಮುಂದಿನ ಎರಡು ತಿಂಗಳಿನಲ್ಲಿ ಮಾರುಕಟ್ಟೆಗೆ ಮೆಕ್ಕೆಜೋಳ ಆವಕ ಹೆಚ್ಚಾಗಲಿದ್ದು, ಕೇಂದ್ರ ನೀಡಿದ ಬೆಂಬಲ ಬೆಲೆಗೆ ವ್ಯಾಪಾರಸ್ಥರು ಖರೀದಿ ಮಾಡಬೇಕು. ಅಲ್ಲದೇ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದರೆ ಸರ್ಕಾರ ಮಧ್ಯಪ್ರವೇಶಿಸುತ್ತದೆ’ ಎಂದು ವಿಶ್ವಾಸ ನೀಡಿದರು.

‘ಮೆಕ್ಕೆಜೋಳ ಒಂದು ಆಹಾರೋತ್ಪನ್ನವಾಗಿದ್ದು, ಉತ್ತರ ಭಾರತದಲ್ಲಿ ಇದನ್ನು ಆಹಾರವನ್ನಾಗಿ ಸಾಕಷ್ಟು ಜನರು ಬಳಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಕುಕ್ಕುಟೋದ್ಯಮಕ್ಕೆ ಮಾತ್ರ ಬಳಸುತ್ತಿದ್ದಾರೆ. ಮೆಕ್ಕೆಜೋಳ ಖರೀದಿಸಿ ಸಾರ್ವತ್ರಿಕವಾಗಿ ಹಂಚುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆಸಲಹೆ ನೀಡಿದೆ. ಆದರೆ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಆಹಾರ ಪದ್ದತಿ ಬೇರೆ ಇರುವುದರಿಂದ ಮೆಕ್ಕೆಜೋಳವನ್ನು ಸಾರ್ವತ್ರಿಕ ಪಡಿತರದಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಈ ಬಾರಿ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹1,760 ಬೆಂಬಲ ಬೆಲೆ ನೀಡಿದ್ದು, ಬೆಂಬಲ ಬೆಲೆ ಕಡಿಮೆಯಾದರೆ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಆದರೆ ಮುಸುಕಿನ ಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹1,800 ರಿಂದ ₹2,200 ಇದೆ. ಜಿಲ್ಲೆಯ ಕೃಷಿ ಮಾರುಕಟ್ಟೆಯಲ್ಲಿ ಬೆಳೆಗಳನ್ನು ದಾಸ್ತಾನು ಮಾಡಲು ಉಗ್ರಾಣಗಳಿವೆ. ಖರೀದಿ ಕೇಂದ್ರವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಧ್ಯಸ್ಥಿಕೆಯಲ್ಲಿರುವುದರಿಂದ ಕೇಂದ್ರದ ಸ್ಥಾಪನೆ ಸಾಧ್ಯವಾಗುತ್ತಿಲ್ಲ’ ಎಂದರು.

ರಾಣೆಬೆನ್ನೂರು, ಹಾವೇರಿ, ಚಿತ್ರದುರ್ಗ ಸೇರಿ ಇತರೆ ಎಪಿಎಂಸಿಗಳಿಗೆ ಭೇಟಿ ನೀಡಿ, ಬೆಲೆ ಕಡಿಮೆಯಾಗಿರುವುದಕ್ಕೆ ಕಾರಣ ತಿಳಿದುಕೊಂಡರು. ಅಲ್ಲದೇ ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ರೈತ ಮುಖಂಡರಾದ ಆರ್.ಜಿ. ಬಸವರಾಜ್ ರಾಂಪುರ, ಅವರಗೆರೆಯ ಇಟಗಿಬಸಪ್ಪ, ಈಚಗಟ್ಟದ ಕರಿಬಸಪ್ಪ, ಅವರಗೆರೆಯ ಕಲ್ಲಪ್ಪ, ಜಯಣ್ಣ, ಸಹಾಯಕ ಕೃಷಿ ನಿರ್ದೇಶಕ ರೇವಣ ಸಿದ್ದನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.