ADVERTISEMENT

ದಾವಣಗೆರೆ: ಎಲ್ಲರಿಗೂ ತರಬೇತಿ ನೀಡಿ ಸಜ್ಜುಗೊಳಿಸಿದೆ

ತಾಯಿ, ಪತ್ನಿ, ಮಕ್ಕಳ ಭೇಟಿಯಾಗದೇ ತಿಂಗಳು ಕಳೆಯಿತು: ಎಡಿಸಿ ಪೂಜಾರಾ ವೀರಮಲ್ಲಪ್ಪ

ಬಾಲಕೃಷ್ಣ ಪಿ.ಎಚ್‌
Published 7 ಜೂನ್ 2020, 14:50 IST
Last Updated 7 ಜೂನ್ 2020, 14:50 IST
ಪೂಜಾರ ವೀರಮಲ್ಲಪ್ಪ
ಪೂಜಾರ ವೀರಮಲ್ಲಪ್ಪ   

ದಾವಣಗೆರೆ: ‘ಮೊದಲ ಬಾರಿ ಮಾರ್ಚ್‌ನಲ್ಲಿ ಕೊರೊನಾ ಕಾಣಿಸಿಕೊಂಡು ನಿಜಲಿಂಗಪ್ಪ ಬಡಾವಣೆಯನ್ನು ಕಂಟೈನ್‌ಮೆಂಟ್‌ ವಲಯ ಮಾಡಬೇಕಾದಾಗ ನಾನೇ ನಿಂತು ಮಾಡಿಸಿದೆ. ಪೊಲೀಸರು, ಆರೋಗ್ಯ ಇಲಾಖೆ ಸಹಿತ ಎಲ್ಲರಿಗೂ ತರಬೇತಿ ನೀಡಿದೆ. ಹಾಗಾಗಿ ಏಪ್ರಿಲ್‌ ಕೊನೆಯ ವಾರದ ನಂತರ ಒಂದೇ ಸಮನೇ ಸೋಂಕು ಪತ್ತೆಯಾದಾಗ ಕಂಟೈನ್‌ಮೆಂಟ್‌ ವಲಯಗಳನ್ನು ಪಟಪಟನೆ ಮಾಡಲು ಸಾಧ್ಯವಾಯಿತು’.

ಜಿಲ್ಲಾಧಿಕಾರಿಗೆ ಬೆನ್ನೆಲುಬಾಗಿ ಎಲ್ಲ ಆದೇಶಗಳನ್ನು ಅನುಷ್ಠಾನಕ್ಕೆ ತರುವ, ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ವಾರಿಯರ್‌ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮಾತಿದು.

ಎಲ್ಲವನ್ನು, ಎಲ್ಲರನ್ನು ಸೂಪರ್‌ವೈಸ್‌ ಮಾಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ತಿಳಿಯಬೇಕು. ಅದನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತರಬೇಕು. ವಿವಿಧ ತಂಡಗಳಿಗೆ ತರಬೇತಿ ನೀಡಬೇಕು. ಸರ್ಕಾರಕ್ಕೆ ವರದಿ ನೀಡಬೇಕು. ಇದು ನಿತ್ಯದ ಕೆಲಸ ಎಂದು ಮಾಹಿತಿ ನೀಡಿದರು.

ADVERTISEMENT

‘ಲಾಕ್‌ಡೌನ್‌ ಆದಾಗ ವಲಸೆ ಕಾರ್ಮಿಕರು ಎಷ್ಟಿದ್ದಾರೆ? ಎಲ್ಲಿದ್ದಾರೆ? ಅವರಿಗೆ ಅವಶ್ಯಕತೆ ಏನು? ಆರೋಗ್ಯದ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿದು, ಅವರಿಗೆ ಮನೋರೋಗ ತಜ್ಞರ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದೆ. ಕೊರೊನಾ ಸೋಂಕು ಪತ್ತೆಯಾಗತೊಡಗಿದಾಗ ಲಾಡ್ಜ್‌ಗಳನ್ನು ವಶಕ್ಕೆ ತೆಗೆದುಕೊಂಡು ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದೆ. ಒಂದೊಂದು ಲಾಡ್ಜ್‌ಗೆ ಒಬ್ಬೊಬ್ಬ ನೋಡಲ್‌ ಅಧಿಕಾರಿ, ಅವರ ನಡುವೆ ಒಬ್ಬ ಸಂವಹನಾಧಿಕಾರಿ ಸಮಸ್ಯೆ ಉಂಟಾದರೆ ನಾನೇ ನೇರವಾಗಿ ಮಾತಾಡಿ ಸರಿಪಡಿಸುವುದು ನಿತ್ಯದ ಕಾಯಕ’ ಎಂದರು.

‘ಬೇರೆ ರಾಜ್ಯಗಳಿಂದ ಬಂದರೆ ಅವರು ಬಾಪೂಜಿ ಸಮುದಾಯ ಭವನಕ್ಕೆ ಬಂದು ನೋಂದಣಿ ಮಾಡಿಕೊಳ್ಳಲೇಬೇಕು. ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ಹೋಂ ಕ್ವಾರಂಟೈನ್‌, ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌, ಆಸ್ಪತ್ರೆ ಅಗತ್ಯಕ್ಕೆ ಅನುಗುಣವಾಗಿ ಕಳುಹಿಸಲಾಗುತ್ತದೆ. ಪ್ರತಿಯೊಬ್ಬರನ್ನು ವಿಚಾರಿಸಿಕೊಳ್ಳಲಾಗುತ್ತದೆ. ಯಾರಾದರೂ ಕ್ವಾರಂಟೈನ್‌ ಬಿಟ್ಟು ಹೊರ ಬಂದರೆ ನನಗೆ ತಂಡ ಮಾಹಿತಿ ನೀಡುತ್ತದೆ. ನಾನೇ ಕರೆ ಮಾಡಿ ಎಫ್‌ಐಆರ್‌ ಮಾಡಬೇಕಾ ಎಂದು ಎಚ್ಚರಿಕೆ ಕೊಡುತ್ತೇನೆ. ಈ ರೀತಿ ನಗರದ ಎಲ್ಲ ವಾರ್ಡ್‌ ಮತ್ತು ಎಲ್ಲ ಗ್ರಾಮಗಳಲ್ಲಿ ಕಾರ್ಯನಿರ್ವಹಿಸಲು 450 ತಂಡಗಳನ್ನು ಮಾಡಲಾಗಿದೆ. ಪ್ರತಿ ತಾಲ್ಲೂಕಿಗೆ ಒಂದರಂತೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 743 ಮೆಡಿಕಲ್‌ ಶಾಪ್‌, 742 ಖಾಸಗಿ ಆಸ್ಪತ್ರೆಗಳಿವೆ. ಅಲ್ಲಿಗೆ ಒಂದು ಫಾರ್ಮೆಟ್‌ ನೀಡಿದ್ದೇವೆ. ಕೆಮ್ಮು, ನೆಗಡಿ, ಜ್ವರ ಹೀಗೆ ಯಾವುದೇ ರೋಗದ ಲಕ್ಷಣ ಇರುವವರು ಬಂದರೂ ಅದರಲ್ಲಿ ನಮೂದಾಗುತ್ತದೆ. ಅದು ವಾಟ್ಸ್‌ಆ್ಯಪ್‌ ಮೂಲಕ ನನಗೆ ಬರುತ್ತದೆ. ನನ್ನಿಂದ ಡಿಎಚ್‌ಒ, ಡಿಎಸ್‌ಒ, ಕರೆ ಮಾಡುವ ತಂಡಕ್ಕೆ ಹೋಗುತ್ತದೆ’ ಎಂದು ವಿವರಿಸಿದರು.

‘ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ತೆರಳಿ ಸರ್ವೆ ಮಾಡುತ್ತಾರೆ. ಹಿರಿಯರು, ಮಕ್ಕಳು, ರೋಗಿಗಳ ವಿವರ ನೀಡುತ್ತಾರೆ. ಯಾರೂ ನಮ್ಮ ಪಟ್ಟಿಯಿಂದ ತಪ್ಪಿ ಹೋಗದಂತೆ ಎಚ್ಚರ ವಹಿಸುವಂತೆ ತಂಡಗಳನ್ನು ಸಜ್ಜುಗೊಳಿಸಿದ್ದೇನೆ’ ಎಂದು ಹೇಳಿದರು.

ವಿಡಿಯೊ ಕಾಲ್‌ನಲ್ಲೇ ಹಾಯ್‌ ಬಾಯ್‌

‘ಹರಪನಹಳ್ಳಿಯಲ್ಲಿರುವ ನನ್ನ ಮನೆಗೆ ಹೋಗೇ ಇಲ್ಲ. ಅಲ್ಲಿ ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ವಿಡಿಯೊ ಕಾಲ್‌ ಮಾಡಿ ಹಾಯ್‌ ಬಾಯ್‌ ಹೇಳುತ್ತಿದ್ದೇನೆ. ಹರಿಹರದಲ್ಲಿರುವ ಅಕ್ಕನ ಮನೆಯಿಂದ ಓಡಾಡುತ್ತಿದ್ದೆ. ಅಲ್ಲಿಗೂ ಏಪ್ರಿಲ್‌ 29ರಿಂದ ಹೋಗಿಲ್ಲ. ಇಲ್ಲೇ ಎಲ್ಲಾದರೂ ಮನೆ ಮಾಡೋಣ ಅಂದರೆ ಈಗ ಮನೆ ಕೊಡುವವರೂ ಇಲ್ಲ. ಹೀಗಾಗಿ ಐಬಿಯಲ್ಲೇ ಉಳಿದುಕೊಂಡಿದ್ದೇನೆ. ಊಟ ಮಾತ್ರ ಅಕ್ಕನ ಮನೆಯಿಂದ ಬರುತ್ತಿದೆ. ಸಹೋದರ, ಸಹಪಾಠಿಗಳು, ಗೆಳೆಯರ ಮನೆಗಳಿವೆ. ಯಾರಿಗೂ ತೊಂದರೆ ಕೊಡುವುದು ಬೇಡ ಎಂದು ಎಲ್ಲೂ ಹೋಗಿಲ್ಲ’ ಎಂದು ಪೂಜಾರ ವೀರಮಲ್ಲಪ್ಪ ವೈಯಕ್ತಿಕ ಮಾಹಿತಿ ನೀಡಿದರು.

ದೆಹಲಿಯಿಂದ ಬಂತು ರೈಲು

‘ದೆಹಲಿಯಿಂದ ಶನಿವಾರ ರಾತ್ರಿ ರೈಲು ಬಂದಿದೆ. ಅದರಲ್ಲಿ 40 ಜನ ದಾವಣಗೆರೆಯಲ್ಲಿ ಇಳಿದಿದ್ದಾರೆ. ಕೆಲವರು ಬೆಂಗಳೂರಿಗೆ ಟಿಕೆಟ್‌ ಮಾಡಿ ಇಲ್ಲಿ ಇಳಿದಿದ್ದಾರೆ. ಎಲ್ಲರನ್ನೂ ನಮ್ಮ ತಂಡ ಪತ್ತೆ ಹಚ್ಚಿ ಬಾಪೂಜಿ ಸಮುದಾಯ ಭವನಕ್ಕೆ ಕರೆದೊಯ್ದು ನೋಂದಣಿ ಮಾಡಿಸಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಸ್ವ್ಯಾಬ್‌ ತೆಗೆದು ಕಳುಹಿಸಲಾಗುವುದು. ಅದೇ ರೀತಿ ಮುಂಬೈಯಿಂದ ಗದಗಕ್ಕೆ ಬಂದು ಇಳಿದವರಲ್ಲಿ 18 ಮಂದಿ ದಾವಣಗೆರೆಯವರು ಇದ್ದಾರೆ. ಅವರನ್ನೂ ಕ್ವಾರಂಟೈನ್‌ ಮಾಡಿ ಟ್ರ್ಯಾಕ್‌ ಮಾಡುತ್ತೇವೆ’ ಎಂದು ಪೂಜಾರ ವೀರಮಲ್ಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.