ADVERTISEMENT

‘ಫೆ.1ರಿಂದ ವಕೀಲರಿಗೆ ಸಮವಸ್ತ್ರ ಕಡ್ಡಾಯ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:36 IST
Last Updated 21 ಜನವರಿ 2021, 2:36 IST
ಗೀತಾ ಕೆ.ಬಿ.
ಗೀತಾ ಕೆ.ಬಿ.   

ದಾವಣಗೆರೆ: ಕೊರೊನಾ ಕಾರಣದಿಂದ ವಕೀಲರಿಗೆ ಸಮವಸ್ತ್ರ ಕಡ್ಡಾಯವನ್ನು ಸಡಿಲಿಕೆ ಮಾಡಲಾಗಿತ್ತು. ಫೆಬ್ರುವರಿ 1ರಿಂದ ಎಲ್ಲರು ಕಡ್ಡಾಯವಾಗಿ ವಕೀಲರ ಸಮವಸ್ತ್ರ ಧರಿಸಿಕೊಂಡು ಬರಬೇಕು. ಕಚೇರಿಗಳಿಗೆ ಅನಗತ್ಯವಾಗಿ ಬರುವುದನ್ನು ತಪ್ಪಿಸಿ, ಫೈಲಿಂಗ್ ಕೌಂಟರ್‌ನಲ್ಲಿ ಫೈಲ್‌ಗಳನ್ನು ಇಟ್ಟು ಹೋಗಬೇಕು. ಆದಷ್ಟೂ ದೂರವಾಣಿ ಸಂಭಾಷಣೆಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಗೀತಾಕೆ.ಬಿ. ಹೇಳಿದರು.

ಜಿಲ್ಲಾ ವಕೀಲರ ಭವನದಲ್ಲಿ ಬುಧವಾರ ನಡೆದ ವಕೀಲರ ಸಂಘದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾಗೆ ಸಂಬಂಧಿಸಿದಂತೆ ಹೈಕೋರ್ಟ್‌ ಮಾರ್ಗ ಸೂಚಿಗಳನ್ನು ವಕೀಲರು ಕಡ್ಡಾಯವಾಗಿ ಪಾಲಿಸಬೇಕು. ಕಾಲಕಾಲಕ್ಕೆ ಬದಲಾಗುತ್ತಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಬಂದಿದ್ದೀರಿ. ಪ್ರಾಯಶಃ ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಮಾರ್ಗಸೂಚಿಗಳಿಗೆ ಮುಕ್ತಿ ಸಿಗಬಹುದು. ನೂತನ ಮಾರ್ಗಸೂಚಿ ಅನ್ವಯ ನ್ಯಾಯಾಲಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದೆ, ಒಂದೆಡೆ ಶಿಸ್ತಿನಿಂದ ಪಾರ್ಕಿಂಗ್ ಮಾಡಬೇಕು ಎಂದರು.

ADVERTISEMENT

ಬರುವ ಶನಿವಾರ ಆಡಳಿತಾತ್ಮಕ ನ್ಯಾಯಮೂರ್ತಿಗಳು ಬರುವ ನಿರೀಕ್ಷೆ ಇದೆ. ನಮಗಿಂತ ನೂರು ಪಟ್ಟ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸುವ ಅವರ ಮುಂದೆ ನಾವು ಶಿಸ್ತಿನಿಂದಿರಬೇಕು ಎಂದು ಸೂಚನೆ ನೀಡಿದರು.

ಈ ಹಿಂದಿನ ವಕೀಲರ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಹಾಕರ ನೀಡಿ, ಸಮಯದ ಇತಿ ಮಿತಿಯಲ್ಲಿ ಕೆಲಸ ಕಾರ್ಯಗಳು ಪೂರ್ಣವಾಗಲು ಸಹಕರಿಸಿದ್ದಾರೆ. ಅದೇ ರೀತಿಯ ಸಹಕಾರವನ್ನು ನೂತನ ಪದಾಧಿಕಾರಿಗಳೂ ನೀಡಲಿ ಎಂದರು.

ಅಂತರ ಕಾಯ್ದುಕೊಂಡು ನ್ಯಾಯಾಲಯ ಆವರಣದಲ್ಲಿನ ಕ್ಯಾಂಟಿನ್ ಬಳಸಿಕೊಳ್ಳಿ. ಹಾಳಾದ ಹಳೆಯ ನೋಟರಿ ಶೆಡ್‌ಗಳನ್ನು ಬದಲಿಸುವಂತೆ ಕಿವಿ ಮಾತು ಹೇಳಿದರು.

ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರಾದ ನಾಗಶ್ರೀ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆಂಗಬಾಲಯ್ಯ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಚಂದ್ರಕಲಾ, ಪ್ರಧಾನ ಮತ್ತು ಹಿರಿಯ ನ್ಯಾಯಾಧೀಶರಾದ ಪ್ರೀತಿ ಜೋಶಿ, ಸಂಘದ ನೂತನ ಅಧ್ಯಕ್ಷ ಡಿ.ಪಿ. ಬಸವರಾಜ್, ನಿಕಟ ಪೂರ್ವ ಅಧ್ಯಕ್ಷ ಎನ್.ಟಿ. ಮಂಜುನಾಥ್, ಕಾರ್ಯದರ್ಶಿ ಲೋಕಿಕೆರೆ ಪ್ರದೀಪ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.