
ದಾವಣಗೆರೆ: ವೈಯಕ್ತಿಕ ಬದುಕನ್ನು ಶುದ್ಧವಾಗಿಟ್ಟುಕೊಳ್ಳುವುದು ಉತ್ತಮ ನಾಯಕತ್ವದ ಲಕ್ಷಣ. ದ್ವೇಷ, ಅಸೂಯೆ ಗೆಲ್ಲುವುದು ಸಹ ನಾಯಕತ್ವದ ಪ್ರಮುಖ ಗುಣ ಎಂದು ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ಹಮ್ಮಿಕೊಂಡಿರುವ ನಾಯಕತ್ವ ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಯಕತ್ವ ಎಂದಾಕ್ಷಣ ರಾಜಕೀಯ ಕ್ಷೇತ್ರವೊಂದೇ ಕಣ್ಮುಂದೆ ಬರುತ್ತದೆ. ಸಮಾಜದಲ್ಲಿ ಬೇರೆ ಬೇರೆ ಮಾದರಿಯ ನಾಯಕತ್ವಗಳಿವೆ. ಒಂದು ಸಂಸ್ಥೆಯ ಏಳಿಗೆಗೆ ಶ್ರಮಿಸುವುದು ಕೂಡ ನಾಯಕತ್ವ. ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ನಾಯಕತ್ವಕ್ಕೆ ಮಾದರಿ’ ಎಂದು ಹೇಳಿದರು.
‘ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆ ಸಲಹೆ ಮೇರೆಗೆ ಮೂರು ವರ್ಷ ದೇಶ ಸಂಚಾರ ಮಾಡಿದರು. ಜನರ ಅಗತ್ಯಗಳನ್ನು ಅರಿತುಕೊಂಡರು. ಉತ್ತಮ ನಾಯಕತ್ವಕ್ಕೆ ಮಾಡಬೇಕಾದ ಮೊದಲ ಕೆಲಸವೇ ಇದು. ಪ್ರತಿಕೂಲ ಪರಿಸ್ಥಿತಿಗಳನ್ನು ಸೋಲಿಸಿ ನಾಯಕರಾಗಿ ರೂಪುಗೊಂಡವರು ಅಂಬೇಡ್ಕರ್’ ಎಂದರು.
‘ಜಗತ್ತಿನಲ್ಲಿ ಭಾರತ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿದೆ. ಯುವಶಕ್ತಿಯನ್ನು ಹಾಳು ಮಾಡುವ ಅನೇಕ ವಿಚಾರಗಳು ಪ್ರಚಲಿತದಲ್ಲಿವೆ. ಉತ್ತಮ ನಾಯಕತ್ವಕ್ಕೆ ಮುಂದಾಲೋಚನೆ ಬಹಳ ಮುಖ್ಯ’ ಎಂದರು.
‘ರಾಷ್ಟ್ರಪ್ರೇಮ, ಸಮಾಜ ಸೇವಾ ಗುಣಗಳನ್ನು ಬೆಳೆಸುವಲ್ಲಿ ವಿಶ್ವವಿದ್ಯಾಲಯ ನಿರಂತರವಾಗಿ ಶ್ರಮಿಸುತ್ತಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಎಲ್ಲ ಸ್ವಯಂ ಸೇವಕರು ತರಬೇತಿ ಪಡೆದು ನಾಯಕತ್ವದ ಲಕ್ಷಣ ಬೆಳೆಸಿಕೊಳ್ಳಬೇಕು. ಕಾಲೇಜು, ಹಳ್ಳಿ, ಸಮುದಾಯಗಳಿಗೆ ಇದು ತಲುಪಬೇಕು’ ಎಂದು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ಪಾಳೇದ ಕಿವಿಮಾತು ಹೇಳಿದರು.
ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಪ್ರೊ.ಮಹಾಬಲೇಶ್ವರ, ಪ್ರೊ.ಮಂಜುನಾಥ್ ಜಿ., ಕಾರ್ಯಕ್ರಮ ಅಧಿಕಾರಿ ಪವಿತ್ರ, ನೋಡಲ್ ಅಧಿಕಾರಿ ಎಚ್.ಆರ್. ತಿಪ್ಪೇಸ್ವಾಮಿ, ಪ್ರೊ.ಪಿ. ಅಣ್ಣೇಶ್, ರಾಘವೇಂದ್ರ ಆರ್., ಬಿ. ತಿಪ್ಪೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.