
ದಾವಣಗೆರೆ: ವಚನಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಂಪೂರ್ಣ ಮಾನವರಾಗಲು, ಶರಣರಾಗಿ ಬದುಕಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ವಿಶ್ವವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ಅಖಿಲ ಭಾರತ ಶರಣರ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದಾವಣಗೆರೆ ಶೈಕ್ಷಣಿಕ ನಗರವಾಗಿ ಗುರುತಿಸಿಕೊಳ್ಳುವಲ್ಲಿ ಮಾಗನೂರು ಬಸಪ್ಪ ಅವರ ಕೊಡುಗೆ ಅಪಾರ’ ಎಂದರು.
‘ವಚನ ಸಾಹಿತ್ಯ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು. ಶರಣರನ್ನು ಬಿಟ್ಟರೆ ಜೀವನವಿಲ್ಲ. ವಚನ ಸಾಹಿತ್ಯವಿಲ್ಲದೆ ಜೀವನವನ್ನು ಚಂದವಾಗಿ ಕಟ್ಟಿಕೊಳ್ಳುವುದು ಅಸಾಧ್ಯ’ ಎಂದರು.
ಮಾಗನೂರು ಬಸಪ್ಪ ಟ್ರಸ್ಟ್ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ, ‘ಸಮಸಮಾಜ ನಿರ್ಮಾಣ ಮಾಡುವ ಶಕ್ತಿ ಇರುವುದು ವಿದ್ಯಾರ್ಥಿಗಳಿಗೆ ಮಾತ್ರ. ಜ್ಞಾನ ಸಂಪಾದನೆಯತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ವಿದ್ಯಾವಂತರಾಗಿ ಎಲ್ಲಿಗೆ ಹೋದರೂ, ಉನ್ನತ ಸ್ಥಾನಕ್ಕೆ ಏರಿದರೂ ಮಾತೃಭಾಷೆಯನ್ನು ಮರೆಯಬಾರದು’ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಕುರ್ಕಿ, ಸಹಾಯಕ ಪ್ರಾಧ್ಯಾಪಕ ಭೀಮಜೋಷಿ ಮಾತನಾಡಿದರು. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ವಿ. ಜಯರಾಮಯ್ಯ, ಶಾಂತರಾಜ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.