ADVERTISEMENT

ಅಸಂಘಟಿತ ಕಾರ್ಮಿಕರ ಹಿತ ಕಾಯಲು ಬದ್ಧ: ಸಂತೋಷ್ ಲಾಡ್

ಸ್ಮಾರ್ಟ್‌ ಕಾರ್ಡ್‌ ವಿತರಣೆ, ಕಾನೂನು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 6:30 IST
Last Updated 13 ಜುಲೈ 2025, 6:30 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ದಾವಣಗೆರೆ: ಅಸಂಘಟಿತ ಕಾರ್ಮಿಕರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅವರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಅಸಂಘಟಿತ ಕಾರ್ಮಿಕರು ಇವುಗಳ ಸದುಪಯೋಗ ಪಡೆಯಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದರು.

ಇಲ್ಲಿನ ದೊಡ್ಡಬೂದಿಹಾಳ್‌ ರಸ್ತೆಯ ತಾಜ್‌ ಪ್ಯಾಲೇಸ್‌ನಲ್ಲಿ ಶನಿವಾರ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿ‌ಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್‌ ಕಾರ್ಡ್‌ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಈ ಕಾಮರ್ಸ್‌ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ತಲಾ ₹2 ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ₹4 ಲಕ್ಷ ಮೊತ್ತದ ಸೌಲಭ್ಯ ಒದಗಿಸುವ ‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ’ ಜಾರಿಗೊಳಿಸಲಾಗುತ್ತಿದೆ. ಗಿಗ್ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

‘ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಂಪನ್ಮೂಲ ಕ್ರೂಢೀಕರಿಸಲು ‘ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ–2024’ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ವರ್ಷಕ್ಕೆ ಅಂದಾಜು 4 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ. ಈ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುತ್ತಿದೆ’ ಎಂದು ತಿಳಿಸಿದರು.

‘ದೇಶದ ದುಡಿಯುವ ವರ್ಗದಲ್ಲಿ ಶೇ 83ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಇವರು ಶಾಸನಬದ್ಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 843 ಮಹಿಳೆಯರು ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಗರ್ಭಕೋಶ ತೆಗೆಸಿದ್ದಾರೆ. ಇದು ದೇಶದ ದುರ್ದೈವವಾಗಿದೆ’ ಎಂದರು.

‘ಕೇಂದ್ರ ಬಿಜೆಪಿ ಸರ್ಕಾರ ಇದುವರೆಗೂ ಅಂಗವಿಲಕರು, ವೃದ್ಧರು, ವಿಧವೆಯರಿಗೆ ನೀಡುವ ಮಾಸಾಶನದಲ್ಲಿ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ. ಬಿಜೆಪಿ ನಾಯಕರಿಗೆ ಉದ್ಯಮಿಗಳ ಮೇಲೆ ಇರುವ ಪ್ರೀತಿ ಬಡವರ ಮೇಲಿಲ್ಲ’ ಎಂದು ದೂರಿದರು.

ಕಾರ್ಮಿಕರಿಗೆ ಸಾಂಕೇತಿಕವಾಗಿ ಸ್ಮಾರ್ಟ್‌ಕಾರ್ಡ್‌, ಮೃತ ಕಾರ್ಮಿಕರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

ಶಾಸಕ ಶಾಂತನಗೌಡ ಡಿ.ಜಿ., ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಧೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ., ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಜಂಟಿ ಕಾರ್ಮಿಕ ಆಯುಕ್ತ ಎಸ್.ಬಿ.ರವಿಕುಮಾರ್, ಕಾರ್ಮಿಕ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.