ADVERTISEMENT

ಅಸ್ಪೃಶ್ಯತೆ ನಿವಾರಣಾ ಜ್ಯೋತಿ ದಾವಣಗೆರೆಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:40 IST
Last Updated 6 ಡಿಸೆಂಬರ್ 2021, 5:40 IST
ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಡಾ.ಬಿ.ಆರ್. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ಪ್ರಯುಕ್ತ ಅಸ್ಪಶ್ಯತಾ ನಿವಾರಣೆಗಾಗಿ ಅಂಬೇಡ್ಕರ್‌ ಜ್ಯೋತಿ ಯಾತ್ರೆಯನ್ನು  ಸ್ವಾಗತಿಸಿದರು
ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಡಾ.ಬಿ.ಆರ್. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ಪ್ರಯುಕ್ತ ಅಸ್ಪಶ್ಯತಾ ನಿವಾರಣೆಗಾಗಿ ಅಂಬೇಡ್ಕರ್‌ ಜ್ಯೋತಿ ಯಾತ್ರೆಯನ್ನು  ಸ್ವಾಗತಿಸಿದರು   

ದಾವಣಗೆರೆ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ ಅವರ 65ನೇ ಮಹಾ ಪರಿ ನಿರ್ವಾಹಣ ಅಂಗವಾಗಿ ಅಸ್ಪೃಶ್ಯತೆ ನಿವಾರಣೆಗಾಗಿ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕುದೂರಿನಿಂದ ಹೊರಟಿರುವ ‘ಅಸ್ಪೃಷ್ಯತೆ ನಿವಾರಣೆಗಾಗಿ ಅಂಬೇಡ್ಕರ್ ಜ್ಯೋತಿ’ ಯಾತ್ರೆಯು ಭಾನುವಾರ ದಾವಣಗೆರೆಗೆ ತಲುಪಿದೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜ್ಯೋತಿ ಯಾತ್ರೆ ಬಂದಾಗ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಸ್ವಾಗತಿಸಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿತು. ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ ಪಿಬಿ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಯತ್ತ ಜ್ಯೋತಿ ಸಾಗಿತು. ಈ ಜ್ಯೋತಿಯು ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‍ನ ಚೈತನ್ಯ ಭೂಮಿ ತಲುಪಲಿದೆ.

ಸ್ಮಾರ್ಟ್‌ಸಿಟಿಗೆ ತಕ್ಕಂತೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಕಂಚಿನ ಪುತ್ಥಳಿಯನ್ನು ಇದೇ ವೃತ್ತದಲ್ಲಿ ಸ್ಥಾಪಿಸಬೇಕು. ಪಾಲಿಕೆ ಅನುದಾನದಲ್ಲಿ ₹ 50 ಲಕ್ಷ ಇದಕ್ಕೆ ಮೀಸಲಿಡಬೇಕು ಎಂದು ಮುಖಂಡರು ಆಗ್ರಹಿಸಿದರು.

ADVERTISEMENT

ಅಂಬೇಡ್ಕರ್ ಜನಿಸಿದಾಗ ದೇಶದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿತ್ತು. ಶೋಷಿತ ವರ್ಗ, ದುರ್ಬಲ ವರ್ಗದವರ ಬದುಕು ಆಗ ಶೋಚನೀಯವಾಗಿತ್ತು. ಗೌರವಯುತವಾಗಿ ಬಾಳುವೆ ಮಾಡಲಾಗದ ಸ್ಥಿತಿ ಇತ್ತು. ಇಂದಿಗೂ ಅಂತಹ ಅಮಾನವೀಯ ಆಚರಣೆ ಮುಂದುವರಿದಿದೆ ಎಂದು ಖಂಡಿಸಿದರು.

‘ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಯನ್ನು ನಾವೆಲ್ಲರೂ ಬೆಂಬಲಿಸುತ್ತೇವೆ. ಇಡೀ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಬೆಂಬಲ ಇದೆ. ಹಂಸಲೇಖ ಹೇಳಿಕೆಯಲ್ಲಿ ಸತ್ಯವಿದೆ. ವಿರೋಧಿಸುವ ಬದಲು ಅವರ ಮಾತುಗಳನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಇರುವ ಮೌಢ್ಯವನ್ನು, ಅಂಧ ಆಚರಣೆ, ಅಸ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಬಸವರಾಜ, ಹರಿಹರದ ನೀಲಕಂಠಪ್ಪ, ವಕೀಲರಾದ ಮಂಜಪ್ಪ ಕಂದಗಲ್ಲು, ಹನುಮಂತಪ್ಪ, ಬಿ.ಆರ್. ಮಂಜುನಾಥ, ಬಿ.ಗುರುಮೂರ್ತಿ, ರುದ್ರಪ್ಪ ಶಿರಮಗೊಂಡನಹಳ್ಳಿ, ಪ್ರಶಾಂತ ಆನಗೋಡು, ಜಿ.ಎನ್. ಹೇಮಂತ ಚನ್ನಗಿರಿ, ಕೆಂಚಪ್ಪ, ಕೊಪ್ಪಳ ಮಂಜುನಾಥ ಹರಿಹರ, ಜಗಳೂರಿನ ರಾಜು ವ್ಯಾಸಗೊಂಡನಹಳ್ಳಿ, ಪ್ರಶಾಂತ ಆನಗೋಡು, ರಮೇಶ ಹೊನ್ನಾಳಿ, ಮಹಾಂತೇಶ ಪುಣಬಘಟ್ಟ, ಶಶಿಧರ ಪುಟಗನಾಳ್, ವಿಜಯ ಪುಟಗನಾಳ್, ಮಂಜಪ್ಪ ಪುಣಬಘಟ್ಟ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.