ADVERTISEMENT

ಗಳಿಸಿದ ಜ್ಞಾನ, ಸಂಪತ್ತು, ಅನುಭವ ಬಳಸಿ

ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಮಕ್ಕಳ ವಿಜ್ಞಾನ ಸಮಾವೇಶವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಆಯೋಜಿಸಿದ್ದ ಮಕ್ಕಳ ವಿಜ್ಞಾನ ಸಮಾವೇಶವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ವಿದ್ಯಾರ್ಥಿಗಳು ಅಂಕದ ಬೆನ್ನತ್ತದೆ, ಜ್ಞಾನದ ಬೆನ್ನತ್ತಬೇಕು. ಗಳಿಸಿದ ಜ್ಞಾನ, ಸಂಪತ್ತು ಮತ್ತು ಅನುಭವವನ್ನು ಸಮಾಜಕ್ಕಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ವಿಜ್ಞಾನ ‍ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸ್ವಚ್ಛ ಭಾರತ ಮಿಷನ್‌ ಮತ್ತು ಲಯನ್ಸ್‌ ಕ್ಲಬ್‌ ಸಂಯುಕ್ತವಾಗಿ ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನದಾಹ ಯಾವತ್ತೂ ತೀರಬಾರದು. ಉತ್ಸಾಹ ಮತ್ತು ಹುಮ್ಮಸ್ಸು ಕಡಿಮೆಯಾಗದಂತೆ ನೋಡಿಕೊಂಡು ಪರಿಶ್ರಮಪಟ್ಟರೆ ಸಾಧನೆ ಮಾಡಲು ಸಾಧ್ಯ. ವಿಜ್ಞಾನದ ಆವಿಷ್ಕಾರಗಳು ಮಾನವೀಯ ಮೌಲ್ಯಗಳನ್ನು ಒಳಗೊಂಡರೆ ಅವರು ಸಮಾಜಕ್ಕೆ ಉಪಯೋಗವಾಗುವಂತಿರುತ್ತವೆ ಎಂದು ವಿಶ್ಲೇಷಿಸಿದರು.

ADVERTISEMENT

ವಿಜ್ಞಾನ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ.ಇ. ರಂಗಸ್ವಾಮಿ, ‘ಸ್ವಚ್ಛತೆ ಮತ್ತು ಹಸಿರಿಗೆ ಸಂಬಂಧಪಟ್ಟ ಆವಿಷ್ಕಾರಗಳನ್ನು ಮಾಡಲು ಯುವ ವಿಜ್ಞಾನಿಗಳು ಮುಂದಾಗಬೇಕು. ಕೃಷಿ ಕ್ಷೇತ್ರದಲ್ಲಿ ಈಗ ಅಗ್ರಿ ಫಾರೆಸ್ಟ್‌ ಮಾದರಿ ಎಂದು ಒತ್ತುಕೊಟ್ಟು ಹೇಳಲಾಗುತ್ತಿದೆ. ಅದನ್ನು ಹಿಂದಿನ ಕೃಷಿಕರು ಅಳವಡಿಸಿಕೊಂಡಿದ್ದರು. ಹಾಗಾಗಿ ಆಗ ಬರ ಬಂದರೂ, ಪ್ರವಾಹ ಉಕ್ಕಿದರೂ ಎದೆಗುಂದುತ್ತಿರಲಿಲ್ಲ. ಆಧುನಿಕ ಕೃಷಿಕರು ಇದನ್ನು ಮರೆತಿರುವುದರಿಂದಲೇ ಬರ ಬಂದಾಗ ಬೇಗ ಭೂಮಿ ಬರಡಾಗುತ್ತಿದೆ. ಪ್ರವಾಹ ಬಂದಾಗ ಎಲ್ಲ ಕೊಚ್ಚಿಕೊಂಡು ಹೋಗುತ್ತಿದೆ. ಹಾಗಾಗಿ ಈಗ ಆಗ್ರಿ ಫಾರೆಸ್ಟ್‌ ಮಾದರಿಗೆ ಪ್ರಾಮುಖ್ಯ ದೊರೆಯುತ್ತಿದೆ’ ಎಂದರು.

ವಿಜ್ಞಾನ ವಿಷಯ ಪರಿವೀಕ್ಷಕಿ ಆರ್‌.ಬಿ. ವಸಂತ ಕುಮಾರಿ, ‘ಮುಂದಿನ ಪೀಳಿಗೆಗೆ ಉಪಯೋಗವಾಗುವ ಆವಿಷ್ಕಾರಗಳು ನಡೆಯಬೇಕು. ಕಲಿಕೆಯಲ್ಲಿ ಮೂಲ ವಿಜ್ಞಾನಕ್ಕೆ ಒತ್ತುಕೊಡಬೇಕು’ ಎಂದು ಸಲಹೆ ನೀಡಿದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೈ.ಬಿ. ಸತೀಶ್‌ ಅಧ್ಯಕ್ಷತೆ ವಹಿಸಿದ್ದರು. ಯುವ ವಿಜ್ಞಾನಿ ಪ್ರಶಸ್ತಿ ವಿಜೇತೆ ಎಚ್‌.ಎಂ. ಜ್ಯೋತ್ಸ್ನಾ, ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಬೆಳ್ಳೂಡಿ ಶಿವಕುಮಾರ್‌, ಜಿಲ್ಲಾ ಮಾಜಿ ಗವರ್ನರ್‌ ಜಿ. ನಾಗನೂರು, ಎಚ್‌. ಚಂದ್ರಪ್ಪ, ವೆಂಕಟಾಚಲ, ಎ.ಎಸ್‌. ಮೃತ್ಯುಂಜಯ, ಉಳುವಯ್ಯ ಅವರೂ ಇದ್ದರು. ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಅಭಿಜ್ಞಾ ತನ್ವಿಗೆ ಬಾಲ ವಿಜ್ಞಾನ ಪ್ರಶಸ್ತಿ

ಮಕ್ಕಳ ಜಿಲ್ಲಾ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ‘ಬಯೋ ಆಕ್ಯುಮುಲೇಶನ್‌ ಆಫ್‌ ಮೈಕ್ರೋಪ್ಲಾಸ್ಟಿಕ್ಸ್‌ ಬೈ ಇಂಡೀಜೀನಿಯಸ್‌ ಬ್ಯಾಕ್ಟೀರಿಯಾ’ ಬಗ್ಗೆ ವಿವರ ಮತ್ತು ವಿಜ್ಞಾನ ಪ್ರದರ್ಶನ ನೀಡಿದ ಆರ್‌ವಿಕೆ ಶಾಲೆಯ ಅಭಿಜ್ಞಾ ತನ್ವಿ ಡಿ. ಜಿಲ್ಲಾ ಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ ಪಡೆದಳು.

ಸ್ಪರ್ಧೆಯಲ್ಲಿ ಗ್ರಾಮೀಣ 19 ಮತ್ತು ನಗರದ 29 ತಂಡಗಳು ಒಟ್ಟು 48 ತಂಡಗಳು ಭಾಗವಹಿಸಿದ್ದವು. ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ಒಟ್ಟು 10 ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.

ಹಿರಿಯರ ವಿಭಾಗ

ನಗರ: ಸೇಂಟ್‌ ಜಾನ್ಸ್‌ ರೋಶನ್‌ ರಾಘವ್‌, ಜಗಳೂರು ಎನ್‌ಎಂಕೆ ಶಾಲೆಯ ಎಚ್‌.ಬಿ. ಭೂಮಿಕಾ, ಕೀರ್ತಿ, ತರಳಬಾಳು ಸಿಬಿಎಸ್‌ಇಯ ಪ್ರಿಯಾ ಮತ್ತು ಸಂಜನಾ.

ಗ್ರಾಮೀಣ: ಹರಿಹರ ಗುತ್ತೂರು ಪ್ರೌಢಶಾಲೆಯ ಕಾವೇರಿ ಎಂ, ಅರಬಗಟ್ಟ ಪದವಿ ಪೂರ್ವ ಕಾಲೇಜಿನ ಎ.ಎಸ್‌. ಸಂಗೀತಾ, ದೊಣ್ಣೆಹಳ್ಳಿ ಶರಣಶ್ರೀ ಎಚ್‌ಪಿಎಸ್‌ ಶಾಲೆಯ ಎಸ್‌.ಎನ್‌. ಕೀರ್ತನಾ.

ಕಿರಿಯ ವಿಭಾಗ

ನಗರ: ದಾವಣಗೆರೆ ಆರ್‌ವಿಕೆಯ ಅಭಿಜ್ಞಾ ತನ್ವಿ ಡಿ, ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾಶ್ರೀ ವಿ. ಹಿರೇಮಠ್‌.

ಗ್ರಾಮೀಣ: ಅತ್ತಿಗೆರೆ ಎಂ.ಕೆ. ಇಂಗ್ಲಿಷ್‌ ಮಾಧ್ಯಮ ಶಾಲೆಯ ನಿಶನ್‌ಕೆ.ವಿ. ಪಾಟೀಲ್‌, ಶಿರಮಗೊಂಡನಹಳ್ಳಿ ಆನ್‌ಮೋಲ್‌ ಪಬ್ಲಿಕ್‌ ಸ್ಕೂಲ್‌ನ ಪ್ರಿಯಾಂಕ ಪೂಜಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.