ಹೊದಿಗೆರೆ (ಚನ್ನಗಿರಿ): ‘ಶಿವಾಜಿ ಮಹಾರಾಜರ ತಂದೆ ಷಹಾಜೀ ರಾಜೇ ಅವರ ಸಮಾಧಿ ಸ್ಥಳದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಬೇಕು’ ಎಂದು ಮರಾಠ ಸಮಾಜದ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಒತ್ತಾಯಿಸಿದರು.
ತಾಲ್ಲೂಕಿನ ಹೊದಿಗೆರೆ ಗ್ರಾಮದ ಷಹಾಜೀ ರಾಜೇ ಭೋಂಸ್ಲೆ ಸಮಾಧಿ ಸ್ಥಳದಲ್ಲಿ ಸೋಮವಾರ ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದಿಂದ ನಡೆದ ಷಹಾಜೀ ರಾಜೇ ಭೋಂಸ್ಲೆ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರದ ಅವಧಿಯ ಅಂತಿಮ ಬಜೆಟ್‌ನಲ್ಲಿ ಈ ಸಮಾಧಿ ಸ್ಥಳದ ಅಭಿವೃದ್ಧಿಗೆ ₹ 5 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಸ್ಥಳವನ್ನು ಪ್ರಸಿದ್ಧ ಯಾತ್ರಾ ಸ್ಥಳವನ್ನಾಗಿ ಮಾಡಲು ಹಾಗೂ ಸೈನಿಕ ಶಾಲೆಯೊಂದನ್ನು ತೆರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿಯಾದರೂ ಈ ಸ್ಥಳದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಜನಪತ್ರಿನಿಧಿಗಳು ಮುಂದಾಗಬೇಕು’ ಎಂದು ಹೇಳಿದರು.
ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮೂಳೆ, ಬೆಂಗಳೂರಿನ ಗೌರ್ವನಿಂಗ್ ಕೌನ್ಸಿಲ್ ಎಸ್.ಆರ್.ಶಿಂಧೆ, ಹೊದಿಗೆರೆ ರಮೇಶ್, ತೇಜಸ್ವಿ ಪಟೇಲ್, ಸ್ಮಾರಕ ಅಭಿವೃದ್ಧಿ ಘಟಕದ ಅಧ್ಯಕ್ಷ ವೈ. ಮಲ್ಲೇಶ್, ವೈ.ಎಂ.ರಾಮಚಂದ್ರರಾವ್ ಉಪಸ್ಥಿತರಿದ್ದರು.
ಕ್ಷತ್ರಿಯ ಮರಾಠ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಕೆಎಂಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.