ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಗದ ಲಸಿಕೆ

ಜಗಳೂರು: ಕೊರೊನಾದಿಂದ ಇಬ್ಬರು ಸಿಬ್ಬಂದಿ ಸಾವು

ಡಿ.ಶ್ರೀನಿವಾಸ
Published 22 ಮೇ 2021, 4:01 IST
Last Updated 22 ಮೇ 2021, 4:01 IST
ಬಿ. ಮೈಲಾರಪ್ಪ
ಬಿ. ಮೈಲಾರಪ್ಪ   

ಜಗಳೂರು:ಅರಣ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್‌ ಆಗಿ ಪರಿಗಣಿಸಿಲ್ಲ. ಇದರಿಂದ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಸಿಗುತ್ತಿಲ್ಲ.

ತಾಲ್ಲೂಕಿನಲ್ಲಿ ಕೊರೊನಾದಿಂದ ವಲಯ ಅರಣ್ಯಾಧಿಕಾರಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಚುನಾವಣೆ ಹಾಗೂ ಕೋವಿಡ್ ಚೆಕ್‌ಪೋಸ್ಟ್ ಮತ್ತು ನೋಡಲ್ ಅಧಿಕಾರಿಗಳಾಗಿ ಕೆಲಸ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿ
ಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸದೆ ಸರ್ಕಾರ ಮಲತಾಯಿ ಧೋರಣೆ ತಾಳಿದೆ. ಇದರಿಂದ ರಾಜ್ಯದಾದ್ಯಂತ ಲಸಿಕೆ ಲಭ್ಯವಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇಲಾಖೆಯಲ್ಲಿ ಅಧಿಕಾರಿಗಳು ಸೇರಿ ಬಹುತೇಕ ಸಿಬ್ಬಂದಿ 45 ವರ್ಷದ ಒಳಗಿನವರಾಗಿದ್ದಾರೆ. ಬಹುತೇಕ ಸಿಬ್ಬಂದಿಗೆ ಲಸಿಕೆ ನಿರಾಕರಿಸಲಾಗಿದೆ. ಸರ್ಕಾರದ ಈ ತಾರತಮ್ಯ ನೀತಿಯಿಂದ ತಾಲ್ಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆಯ ಚಾಯಪ್ಪ ಶಿವಶರಣ (30) ಎರಡು ದಿನದ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೊಂಡುಕುರಿ ವನ್ಯಧಾಮದ ಅರಣ್ಯ ವೀಕ್ಷಕ ತಾಲ್ಲೂಕಿನ ಮಲೆಮಾಚಿಕೆರೆ ಗ್ರಾಮದ ಬಿ. ಮೈಲಾರಪ್ಪ ನಾಲ್ಕು ದಿನದ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ವಲಯ ಅರಣ್ಯಾಧಿಕಾರಿ ಟಿ.ಆರ್. ಪ್ರಕಾಶ್, ಉಪ ವಲಯ ಅರಣ್ಯಾಧಿಕಾರಿ ವಸಂತ ಬಡ್ಕರ್ ಅವರು ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕಾಶ್ ಅವರಿಗೆ ಕೋವಿಡ್ ನೋಡಲ್ ಅಧಿಕಾರಿಯಾಗಿ ಹಾಗೂ ವಸಂತ ಬಡ್ಕರ್ ಪ್ರಸ್ತುತ ದೊಣೆಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಕೋವಿಡ್ ಸೇವೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೋಂಕಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರಣ್ಯ ರಕ್ಷಕ ಚಾಯಪ್ಪ ಶಿವಶರಣ ಅವರು ಏಪ್ರಿಲ್ 30ರಂದು ಮದುವೆಯಾಗಿದ್ದು, ಕೇವಲ 19 ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.

ಇದರಿಂದ ಆತಂಕಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಲಸಿಕೆ ಹಾಕುವಂತೆ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ತೆರಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸರ್ಕಾರ ವಾರಿಯರ್ಸ್ ಎಂದು ಪರಿಗಣಿಸಿಲ್ಲ. 45 ವರ್ಷದ ಒಳಗಿನವರಿಗೆ ಲಸಿಕೆ ಹಾಕಲು ಅವಕಾಶ ಇಲ್ಲ ಎಂದು ವೈದ್ಯಾಧಿಕಾರಿ ಹಿಂದಕ್ಕೆ ಕಳಿಸಿದ್ದಾರೆ ಎಂದು ರಾಜ್ಯ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿ ಮತ್ತು ದಿನಗೂಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ. ಬಸವರಾಜಪ್ಪ ಹೇಳಿದರು.

ಅರಣ್ಯ ಸಂಪತ್ತನ್ನು ರಕ್ಷಿಸುವ ಹಾಗೂ ಕೋವಿಡ್ ಕಾರ್ಯಪಡೆಯಲ್ಲಿ ಮತ್ತು ಚುನಾವಣೆಗಳಲ್ಲಿ ವಾರಿಯರ್‌ಗಳಾಗಿ ಕೆಲಸ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನಿರಾಕರಿಸುವ ಮೂಲಕ ಅಪಾರ ಸಂಖ್ಯೆಯ ಸಿಬ್ಬಂದಿಯ ಸಾವಿಗೆ ಕಾರಣವಾಗುತ್ತಿರುವುದು ಅಮಾನವೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಿಬ್ಬಂದಿಯನ್ನು ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ಹಾಕಬೇಕು. ಸುರಕ್ಷಾ ಕಿಟ್ ನೀಡಬೇಕು. ಸೋಂಕಿಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.