
ದಾವಣಗೆರೆ: ‘ಶಾಲೆ – ಕಾಲೇಜಿನ ಪಠ್ಯದಲ್ಲಿ ವಚನ ಸಾಹಿತ್ಯವನ್ನು ಪ್ರತ್ಯೇಕ ವಿಷಯವನ್ನಾಗಿ (ಸಬ್ಜೆಕ್ಟ್) ಬೋಧಿಸುವ ಅಗತ್ಯವಿದೆ. ಈ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘12ನೇ ಶತಮಾನದ ವಚನಕಾರರಲ್ಲಿ ಹೆಚ್ಚಿನವರು ಹಿಂದುಳಿದ ವರ್ಗಗಳಿಗೆ ಸೇರಿದವರು. ಆ ಕಾಲದಲ್ಲೇ ಅವರಲ್ಲಿ ಅಪಾರ ಜ್ಞಾನ ಭಂಡಾರವಿತ್ತು. ಅಂಬಿಗರ ಚೌಡಯ್ಯನವರ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ’ ಎಂದರು.
‘ಸಮಾಜದಲ್ಲಿ ಹಲವು ಶ್ರಮಿಕ ಸಮುದಾಯಗಳಿದ್ದು, ಗಂಗಾಮತ ಸಮುದಾಯವೂ ಅದರಲ್ಲಿ ಒಂದಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ‘ಸಮಾಜದ ಅಂಕು ಡೊಂಕುಗಳನ್ನು ನಿರ್ಭೀತಿಯಿಂದ ಟೀಕಿಸಿದ ಅಂಬಿಗರ ಚೌಡಯ್ಯ ಅವರು ಸಮ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದವರು. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ’ ಎಂದರು.
ಉಪನ್ಯಾಸ ನೀಡಿದ ಪ್ರಾಧ್ಯಾಪಕಿ ಕಾವ್ಯಾಶ್ರೀ, ‘ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದ ಅಂಬಿಗರ ಚೌಡಯ್ಯ ಅವರು ಮೌಢ್ಯ, ಕಂದಾಚಾರದ ವಿರುದ್ಧ ಸಿಡಿದೆದ್ದರು. ಅನನ್ಯ ಸಿಟ್ಟು, ಆಕ್ರೋಶದಲ್ಲೂ ತಾಯಿ ಗುಣ ಅವರಲ್ಲಿತ್ತು’ ಎಂದರು.
ವಿಜಯಕುಮಾರ್ ಮತ್ತು ಸಂಗಡಿಗರು ಅಂಬಿಗರ ಚೌಡಯ್ಯನವರ ಗೀತೆಗಳನ್ನು ಪ್ರಸ್ತುತಪಡಿಸಿದರು.
‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಕೌಸರ್ ರೇಷ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಗಂಗಾಮತ ಸಮುದಾಯದ ಮಾಗಾನಹಳ್ಳಿ ಮಂಜುನಾಥ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.