
ಪ
ದಾವಣಗೆರೆ: ವೈಕುಂಠ ಏಕಾದಶಿಯಂದು ಉತ್ತರ ದ್ವಾರದ ಮೂಲಕ ದೇವರ ದರ್ಶನ ಪಡೆದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜಿಲ್ಲೆಯ ಹಲವು ದೇಗುಲಗಳಲ್ಲಿ ವೆಂಕಟೇಶ್ವರಸ್ವಾಮಿ ಸ್ಮರಣೆ ಮಂಗಳವಾರ ನಡೆಯಿತು. ದೇಗುಲಗಳಿಗೆ ಮಂಗಳವಾರ ಭೇಟಿ ನೀಡಿದ ಭಕ್ತರು ದೇವರನ್ನು ಕಣ್ತುಂಬಿಕೊಂಡು ಪುಳಕಿತರಾದರು.
ವೈಕುಂಠ ಏಕಾದಶಿ ಅಂಗವಾಗಿ ವೆಂಕಟೇಶ್ವರಸ್ವಾಮಿ, ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇಗುಲಗಳಲ್ಲಿ ಇಡೀ ದಿನ ಭಕ್ತರ ದಂಡು ಕಂಡುಬಂದಿತು. ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದ ಭಕ್ತರು, ಪ್ರಸಾದ ಸ್ವೀಕರಿಸಿ ಧನ್ಯತಾ ಭಾವ ಪಡೆದರು.
ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಬೇತೂರು ರಸ್ತೆಯ ವೆಂಕಟೇಶ್ವರಸ್ವಾಮಿ ದೇಗುಲ, ಕೋಡಿಹಳ್ಳಿ ರಸ್ತೆಯಲ್ಲಿರುವ ತ್ರಿಕೂಟಾಚಲ ದೇವಾಲಯ ಸೇರಿದಂತೆ ಹಲವೆಡೆ ಶ್ರೀನಿವಾಸನನ್ನು ಸ್ಮರಿಸಲಾಯಿತು. ಸಂಕಷ್ಟಗಳನ್ನು ಪರಿಹರಿಸುವಂತೆ ಭಕ್ತಿಯಿಂದ ಕೋರಲಾಯಿತು.
ವೈಕುಂಠ ಏಕಾದಶಿಯ ಅಂಗವಾಗಿ ದೇಗುಲಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ತರಹೇವಾರಿ ಪುಷ್ಪ, ದೀಪಗಳಿಂದ ಅಲಂಕೃತಗೊಂಡಿದ್ದವು. ವಾರದಿಂದ ನಡೆಯುತ್ತಿದ್ದ ಸಿದ್ಧತೆಯನ್ನು ಸೋಮವಾರ ರಾತ್ರಿ ಪೂರ್ಣಗೊಳಿಸಲಾಗಿತ್ತು. ಮಂಗಳವಾರ ನಸುಕಿನಂದಲೇ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ನಾರಾಯಣ, ಗೋವಿಂದ, ಶ್ರೀಹರಿ, ಶ್ರೀವೆಂಕಟೇಶ, ಸಪ್ತಗಿರಿವಾಸ ಶ್ರೀನಿವಾಸ ಸೇರಿದಂತೆ ವಿಷ್ಣುವಿನ ಹಲವು ನಾಮಸ್ಮರಣೆಯ ಘೋಷಗಳು ಮೊಳಗಿದವು. ಆ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಲಾಯಿತು.
ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ನಸುಕಿನಿಂದಲೇ ಸರತಿ ಸಾಲು ಬೆಳೆದಿತ್ತು. ಬೆಳಿಗ್ಗೆ 6.30ಕ್ಕೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಯಿತು. ದೇಗುಲಕ್ಕೆ ಸಾಗುವ ಮಾರ್ಗದಲ್ಲಿ ಭಕ್ತರು ಕಾಯುತ್ತಿದ್ದರು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮಹಿಳೆಯರು, ವೃದ್ಧರು, ಮಕ್ಕಳು ಕೂಡ ಚಳಿಯಲ್ಲಿಯೇ ದೇವರ ದರ್ಶನ ಪಡೆದರು. ಸರತಿ ಸಾಲಿನಲ್ಲಿಯೇ ಹರಿನಾಮ ಸ್ಮರಣೆ ಮಾಡುತ್ತಿದ್ದರು. ದೇಗುಲದ ಉತ್ತರ ದ್ವಾರದಲ್ಲಿ ಶ್ರೀಮನ್ನಾರಾಯಣನನ್ನು ಕಣ್ತುಂಬಿಕೊಂಡ ಭಕ್ತರು, ದೇಗುಲ ಪ್ರವೇಶಿಸಿ ಪುಳಕಿತರಾದರು. ರಾತ್ರಿ 10 ಗಂಟೆಯವರೆಗೂ ದೇಗುಲದ ಬಳಿ ಜನಜಂಗುಳಿ ಕಾಣಿಸಿಕೊಂಡಿತು.
ವೈಕುಂಠ ಏಕಾದಶಿಯ ಪ್ರಯುಕ್ತ ಲೋಕಿಕೆರೆಯ ತ್ರಿಕೂಟಾಚಲ ದೇಗುಲದ ಲಕ್ಷ್ಮಿವೆಂಕಟೇಶ್ವರ ಮೂರ್ತಿಗೆ ಕೂಡಲಿ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಒಂದು ಲಕ್ಷದ ಒಂದು ತುಳಸಿ ಸಮರ್ಪಣೆ ನೆರವೇರಿತು. ಕ್ಷೀರಾಭಿಷೇಕ, ಜಲಾಭೀಷಕ, ಎಳನೀರು ಅಭಿಷೇಕ ಸೇರಿ ಹಲವು ಧಾರ್ಮಿಕ ಕೈಂಕರ್ಯಗಳು ನಡೆದವು. ವಿವಿಧ ಬಡಾವಣೆ, ಗ್ರಾಮಗಳಿಂದ ಭಕ್ತರು ಇಲ್ಲಿಗೆ ಧಾವಿಸಿದ್ದರು.
ಬೇತೂರು ರಸ್ತೆಯ ಅರಳಿಮರ ವೃತ್ತದ ಸಮೀಪದ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ನೆರವೇರಿತು. ದಾವಣಗೆರೆ ತಾಲ್ಲೂಕಿನ ಅಣಜಿ ಗೊಲ್ಲರಹಳ್ಳಿಯ ಲಕ್ಷ್ಮೀವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿಯ ಆಚರಣೆ ವೈಭವದಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.