ADVERTISEMENT

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ: ಭವ್ಯವಾಗಿ ನೆರವೇರಿದ ವಾಲ್ಮೀಕಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:15 IST
Last Updated 9 ಫೆಬ್ರುವರಿ 2026, 7:15 IST
<div class="paragraphs"><p>ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ: ಭವ್ಯವಾಗಿ ನೆರವೇರಿದ ವಾಲ್ಮೀಕಿ ರಥೋತ್ಸವ</p></div>

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ: ಭವ್ಯವಾಗಿ ನೆರವೇರಿದ ವಾಲ್ಮೀಕಿ ರಥೋತ್ಸವ

   

ಹರಿಹರ (ದಾವಣಗೆರೆ): ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ 8ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಮಹರ್ಷಿ ವಾಲ್ಮೀಕಿ ರಥೋತ್ಸವ ಸೋಮವಾರ ಬೆಳಿಗ್ಗೆ ಭವ್ಯವಾಗಿ ನೆರವೇರಿತು.

ತರಹೇವಾರಿ ಪುಷ್ಪಗಳಿಂದ‌ ಅಲಂಕೃತಗೊಂಡ ರಥಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರು ಚಾಲನೆ ನೀಡಿದರು. 63 ಅಡಿ ಎತ್ತರದ ರಿಮೋಟ್ ನಿಯಂತ್ರಿತ ರಥವನ್ನು ಭಕ್ತರು ಎಳೆದರು.

ADVERTISEMENT

ಮಠದ ಆವರಣದಿಂದ ಹೊರಟ ರಥದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಈ ಭವ್ಯ ದೃಶ್ಯವನ್ನು ಕಣ್ತುಂಬಿಕೊಂಡ ಭಕ್ತರು ವಾಲ್ಮೀಕಿ ಮಹರ್ಷಿಗೆ ಜೈಕಾರ ಮೊಳಗಿಸಿದರು. ರಥೋತ್ಸವದ ಮುಂದೆ ಜಗ್ಗಲಿಗೆ, ಮರಗಾಲು ಕುಣಿತ ಸೇರಿದಂತೆ ಕಲಾತಂಡಗಳು ಸಾಗಿದವು. ರಥವು ಸಂಜೆ ಸ್ವಸ್ಥಾನಕ್ಕೆ ಮರಳಲಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸೇರಿ ಅನೇಕ ಮಠಾಧೀಶರು ರಥೋತ್ಸವಕ್ಕೆ ಸಾಕ್ಷಿಯಾದರು.

ಶಾಸಕ ಬಿ.ಪಿ. ಹರೀಶ್, ‘ಮಠ ಈ ಹಂತಕ್ಕೆ ಬೆಳೆಯಲು ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ ಅವರೇ ಕಾರಣ. ಹಿರಿಯರಾದ ಓಬಳಪ್ಪ, ಜಾರಕಿಹೊಳಿ ಕುಟುಂಬ ಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದೆ. ಪರಿಶಿಷ್ಟ ಪಂಗಡ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಸಾಂಘಿಕವಾಗಿ ನಡೆಯುತ್ತಿದೆ’ ಎಂದು ಸ್ಮರಿಸಿದರು.

‘ವಾಲ್ಮೀಕಿ ಸಮುದಾಯನ್ನು ಮಠಾಧೀಶರು ಹೇಗೆ ಮುನ್ನಡೆಸಬಹುದು ಎಂಬ ಕುತೂಹಲವಿತ್ತು. ಈ ಕಾರ್ಯವನ್ನು ಪ್ರಸನ್ನಾನಂದ ಸ್ವಾಮೀಜಿ ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ. ಸಮುದಾಯದ ಏಳಿಗೆಗೆ ಪೀಠಾಧ್ಯಕ್ಷರು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ಸಂಸದ ಕುಮಾರ ನಾಯಕ, ಶಾಸಕರಾದ ಕೆ.ಎಸ್. ಬಸವಂತಪ್ಪ, ಕೃಷ್ಣನಾಯ್ಕ, ಅರವಿಂದ ಬೆಲ್ಲದ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಬುಲುಸೀಮೆ‌ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಸಂಸದ ಪ್ರತಾಪ ಸಿಂಹ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.