
ದಾವಣಗೆರೆ: ‘ಜಮೀನಿನಲ್ಲಿ ಬೆವರು ಸುರಿಸಿ ತರಕಾರಿ ಬೆಳೆದರೆ ಲಾಭವೆಲ್ಲ ಮಧ್ಯವರ್ತಿಗಳ ಪಾಲಾಗುತ್ತದೆ. ನಮ್ಮ ಬೆವರಿಗೆ ಬೆಲೆಯೇ ಸಿಗುವುದಿಲ್ಲ. ಅದಕ್ಕೆಂದೇ ಬೆಳೆದ ತರಕಾರಿಯನ್ನು ನಾವೇ ನಗರಕ್ಕೆ ತಂದು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದೇವೆ’.
ಮಧ್ಯವರ್ತಿಗಳ ಹಾವಳಿಯಿಂದಾಗಿ ಲಾಭದ ಮುಖವನ್ನೇ ನೋಡದೆ ಅನಿವಾರ್ಯವಾಗಿ ಸ್ವತಃ ತಮ್ಮ ಉತ್ಪನ್ನಗಳನ್ನು ತಾವೇ ಮಾರಾಟಕ್ಕೆ ಅಣಿಗೊಳಿಸಿ ಲಾಭದ ಮುಖ ನೋಡುತ್ತಿರುವ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಯುವ ರೈತ ಗಂಗಾಧರ ‘ಪ್ರಜಾವಾಣಿ’ ಎದುರು ಹೀಗೆ ತಮ್ಮ ಅನುಭವ ಹಂಚಿಕೊಂಡರು.
ಗ್ರಾಮದಲ್ಲಿರುವ 3 ಎಕರೆ ಜಮೀನಿನಲ್ಲಿ ಸವತೆಕಾತಿ, ಹೀರೇಕಾಯಿ, ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿ, ಟೊಮೆಟೊ, ಕೊತ್ತಂಬರಿ ಸೇರಿದಂತೆ ಹಲವು ರೀತಿಯ ತರಕಾರಿ ಬೆಳೆಯುತ್ತಿರುವ ಗಂಗಾಧರ ಅವರು ಗ್ರಾಮದ ತೆಲಗಿ ಹನುಮಂತಪ್ಪ ಅವರ ಪುತ್ರ.
ತಂದೆಯೊಂದಿಗೆ ಕಳೆದ 30 ವರ್ಷಗಳಿಂದ ತರಕಾರಿ ಬೆಳೆಯುತ್ತಿರುವ ಇವರ ಕುಟುಂಬ ಇತ್ತೀಚಿನ ವರ್ಷಗಳಲ್ಲಿ ತಾವು ಬೆಳೆದ ತರಕಾರಿಯನ್ನು ದಾವಣಗೆರೆ ನಗರಕ್ಕೆ ಹೊತ್ತುತಂದು ಮುಖ್ಯರಸ್ತೆಗಳ ಬದಿಯಲ್ಲಿ ಸ್ವತಃ ಮಾರಾಟ ಮಾಡುತ್ತ ಲಾಭ ಕಂಡುಕೊಳ್ಳುತ್ತಿದೆ.
‘ಪ್ರತಿ ಕಿಲೋ ತರಕಾರಿಗೆ ಕನಿಷ್ಠ ₹ 5ರಿಂದ ಗರಿಷ್ಠ ₹ 12 ಸಿಕ್ಕರೆ ಹೆಚ್ಚು. ಆದರೆ, ಮಾರುಕಟ್ಟೆಯಲ್ಲಿ ನಾವು ಬೆಳೆದ ತರಕಾರಿ, ₹ 60ರಿಂದ ₹ 100ರವರೆಗೂ ಬಿಕರಿಯಾಗುತ್ತದೆ. ಬೆವರು ಹರಿಸುವವರು ನಾವು. ಲಾಭ ಪಡೆಯುವವರು ಇನ್ನೊಬ್ಬರು. ನಮಗೂ ಇಲ್ಲ, ಮಾರುಕಟ್ಟೆಗೆ ತಂದು ಸಗಟು ರೂಪದಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೂ ಲಾಭವಿಲ್ಲ, ಗ್ರಾಹಕರಿಗೂ ಯಾವುದೇ ರೀತಿಯ ಲಾಭ ಆಗುವುದಿಲ್ಲ. ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ. ಅದಕ್ಕೇ ನಾವು ನಗರಕ್ಕೆ ಬಂದು ಸ್ವತಃ ಒಂದು ದರ ನಿಗದಿಪಡಿಸಿ ಮಾರಾಟ ಮಾಡುತ್ತೇವೆ. ಮುಕ್ತ ಮಾರುಕಟ್ಟೆಯಲ್ಲಿ ತರಕಾರಿ ದರದ ಬಗ್ಗೆ ಅರಿತ ಗ್ರಾಹಕರು ಕಡಿಮೆ ಬೆಲೆಗೆ ಸಿಗುವ ನಮ್ಮ ತರಕಾರಿಯನ್ನು ಮುಗಿಬಿದ್ದು ಖರೀದಿಸುತ್ತಾರೆ’ ಎಂದು ಗಂಗಾಧರ ಹೇಳಿದರು.
‘ಬೀಜ, ಗೊಬ್ಬರ, ಕೂಲಿ, ಆಟೊ ಬಾಡಿಗೆ, ಕಮೀಷನ್, ಹಮಾಲಿ ಎಂದೆಲ್ಲ ಹಣ ಖರ್ಚಾಗುತ್ತಲೇ ಇರುತ್ತದೆ. ತರಕಾರಿ ಮಾರಾಟ ಮಾಡಿ ಮನೆಗೆ ಹೋಗುವಾಗ ನಮ್ಮ ಬಳಿ ಇರುವುದು ಅಲ್ಪ ಪ್ರಮಾಣದ ಹಣ. ಅದಕ್ಕೇ ನಾವೇ ಸ್ವತಃ ಮಾರಾಟಕ್ಕೆ ಇಳಿದಿದ್ದೇವೆ. ಪರಿಶ್ರಮ ಇದೆ. ನಮ್ಮ ತಂದೆ ಹಾಗೂ ಕುಟುಂಬ ಸದಸ್ಯರೂ ದುಡಿಯುವುದರಿಂದ ಅನುಕೂಲವಿದೆ’ ಎಂದು ಅವರು ವಿವರಿಸಿದರು.
ಆಯಾ ಸೀಸನ್‌ಗೆ ಅನುಗುಣವಾಗಿ ತರಕಾರಿ ಬೆಳೆಯುತ್ತೇವೆ. ತಾಜಾ ಮತ್ತು ಜವಾರಿ ತರಕಾರಿ ಇರುವುದರಿಂದ ಗ್ರಾಹಕರು ಚೌಕಾಸಿ ಮಾಡದೇ ಖರೀದಿಸುತ್ತಾರೆ ಎಂದೂ ಅವರು ತಿಳಿಸಿದರು.
ರೈತರೆಲ್ಲ ಈ ರೀತಿ ಮಾಡಿದರೆ ಅವರಿಗೂ ಲಾಭ, ಕೊಳ್ಳುವ ಗ್ರಾಹಕರಿಗೂ ಲಾಭ. ಆದರೆ, ಪರಿಸ್ಥಿತಿ ಅನೇಕ ರೈತರನ್ನು ಕೈಗೆ ಸಿಕ್ಕಷ್ಟು ಹಣಕ್ಕೆ ಮಾರುವ ಅನಿವಾರ್ಯತೆಗೆ ಒಳಪಡಿಸಿದೆ ಎಂದು ಶಾಲೆಯ ಮುಖವನ್ನೇ ನೋಡದ ಗಂಗಾಧರ ಮಾರ್ಮಿಕವಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.