ADVERTISEMENT

ದಾವಣಗೆರೆ| ರೋಗಿಗಳಿಗೆ ಹೊರೆಯಾದ ವೆಂಟಿಲೇಟರ್ ಚಿಕಿತ್ಸೆ: ಶಾಸಕ ಬಸವಂತಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 9:08 IST
Last Updated 19 ನವೆಂಬರ್ 2025, 9:08 IST
   

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಚಿಕಿತ್ಸೆಗೆ ದಿನವೊಂದಕ್ಕೆ ಕನಿಷ್ಠ ₹ 22,000 ತೆರಬೇಕಾಗಿದೆ. ಬಡ ರೋಗಿಗಳಿಗೆ ಇದು ಹೊರೆಯಾಗಿದ್ದು, ದುಬಾರಿ ದರಕ್ಕೆ ಕಡಿವಾಣ ಹಾಕಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಾವಣಗೆರೆ ತಾಲ್ಲೂಕು ಪಂಚಾಯಿತಿಯ 20 ಅಂಶಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಪಘಾತ ಹಾಗೂ ಗಂಭೀರ ಸ್ವರೂಪದ ಕಾಯಿಲೆಗಳಿಗೆ ವೆಂಟಿಲೇಟರ್‌ ಚಿಕಿತ್ಸೆ ಅನಿವಾರ್ಯ. ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಚಿಗಟೇರಿ ಜಿಲ್ಲಾ ಅಸ್ಪತ್ರೆ ಶಿಫಾರಸು ಮಾಡಿದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ದುಬಾರಿ ವೆಚ್ಚ ಭರಿಸಲು ಸಾಧ್ಯವಾಗದೇ ಗ್ರಾಮೀಣ ಪ್ರದೇಶದ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

‘ತಾಲ್ಲೂಕಿನ 8 ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಚಿಕಿತ್ಸೆ ಲಭ್ಯವಿದೆ. ಇದರಲ್ಲಿ 3 ಆಸ್ಪತ್ರೆಗಳು ಮಾತ್ರ ಎಬಿಎಆರ್‌ಕೆ ಸೌಲಭ್ಯದಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಉಳಿದ ಆಸ್ಪತ್ರೆಗಳನ್ನು ಎಬಿಎಆರ್‌ಕೆ ಯೋಜನೆಯ ವ್ಯಾಪ್ತಿಗೆ ತರಲು ಏನು ಸಮಸ್ಯೆ? ಖಾಸಗಿ ಆಸ್ಪತ್ರೆಯಲ್ಲಿ ದರಪಟ್ಟಿ ಪ್ರದರ್ಶನ ಮಾಡುವುದು ಕಡ್ಡಾಯ. ಈ ನಿಯಮವನ್ನು ಬಹುತೇಕ ಆಸ್ಪತ್ರೆಗಳು ಗಾಳಿಗೆ ತೂರಿವೆ’ ಎಂದು ಕಿಡಿಕಾರಿದರು.

‘5ಕ್ಕಿಂತ ಹೆಚ್ಚು ವೆಂಟಿಲೇಟರ್‌ ಹೊಂದಿರುವ ಆಸ್ಪತ್ರೆಗಳು ಮಾತ್ರ ಎಬಿಎಆರ್‌ಕೆ ವ್ಯಾಪ್ತಿಗೆ ಒಳಪಡುತ್ತವೆ. ಪೂರ್ಣಾವಧಿಯ ತಜ್ಞ ವೈದ್ಯರನ್ನು ಹೊಂದಿರಬೇಕು ಎಂಬ ಷರತ್ತು ಕೂಡ ಇದೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು ದರಪಟ್ಟಿ ಹಾಗೂ ವೆಂಟಿಲೇಟರ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಸೂಚನೆ ನೀಡಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮೊಟ್ಟೆ ವಿತರಣೆಯಲ್ಲಿ ಲೋಪ:

‘ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೆ ಆರು ದಿನ ಮೊಟ್ಟೆ ನೀಡಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ. ಬಹುತೇಕ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಲ್ಲಿ ಲೋಪ ಕಂಡುಬಂದಿದೆ. ರಾಜ್ಯ ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ವತಿಯಿಂದ ನೀಡುವ ಮೊಟ್ಟೆಯನ್ನು ವಿದ್ಯಾರ್ಥಿಗಳಿಗೆ ವಿತರಿಸುವಲ್ಲಿ ಉಂಟಾಗುತ್ತಿರುವ ಈ ಸಮಸ್ಯೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬಸವಂತಪ್ಪ ಹರಿಹಾಯ್ದರು.

‘ಅನುದಾನಿತ ಶಾಲೆಗಳಲ್ಲಿ ಈ ಲೋಪ ಹೆಚ್ಚಾಗಿ ಕಂಡುಬಂದಿದೆ. ವಾರದ ಹಲವು ದಿನ ಎಲ್ಲ ಮಕ್ಕಳಿಗೆ ಬಾಳೆಹಣ್ಣು ಮಾತ್ರ ನೀಡಲಾಗುತ್ತಿದೆ. ಮೊಟ್ಟೆಯನ್ನು ಮಕ್ಕಳು ನಿರಾಕರಿಸುತ್ತಿದ್ದಾರೆ ಎಂಬುದಾಗಿ ಶಿಕ್ಷಕರು ಸುಳ್ಳು ಹೇಳುತ್ತಿದ್ದಾರೆ. ಮೊಟ್ಟೆ ದರದಲ್ಲಿ ವ್ಯತ್ಯಾಸವಾದರೆ ಒಂದು ದಿನದ ಮೊಟ್ಟೆಯ ಹಣವನ್ನು ಸಾಗಣೆ ವೆಚ್ಚಕ್ಕೆ ಸರಿದೂಗಿಸಿ’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಎಂ.ಬಿ. ಅಶ್ವತ್ಥ್‌ ಹಾಜರಿದ್ದರು.

ಫಲಾನುಭವಿ ಆಯ್ಕೆಗೆ ಕಿಡಿ

ಅಭಿವೃದ್ಧಿ ನಿಗಮಗಳು ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಸಮಿತಿಯ ಶಿಫಾರಸು ಪರಿಗಣಿಸುತ್ತಿಲ್ಲ ಎಂದು ಶಾಸಕ ಕೆ.ಎಸ್‌. ಬಸವಂತಪ್ಪ ಕಿಡಿಕಾರಿದರು.

‘ಶಾಸಕರ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ತಾಂತ್ರಿಕ ಕಾರಣಕ್ಕೆ ಬ್ಯಾಂಕ್‌ಗಳು ಫಲಾನುಭವಿ ಪಟ್ಟಿ ತಿರಸ್ಕರಿಸುತ್ತವೆ. ಈ ಸಂದರ್ಭದಲ್ಲಿ ಫಲಾನುಭವಿಗಳ ಮರು ಆಯ್ಕೆ ಮಾಡಬೇಕು. ಶಾಸಕರ ಗಮನಕ್ಕೆ ತರದೇ ನಿಗಮದ ಅಧಿಕಾರಿಗಳೇ ತೀರ್ಮಾನ ಕೈಗೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಲೋಪ ಉಂಟಾದರೆ ಸಂಬಂಧಿಸಿದ ನಿಗಮದ ಅಧಿಕಾರಿಗಳೇ ಹೊಣೆ. ಶಿಸ್ತುಕ್ರಮಕ್ಕೆ ಕೇಂದ್ರ ಕಚೇರಿಗೆ ಶಿಫಾರಸು ಮಾಡಲಾಗುವುದು
ರಾಮ ಭೋವಿ, ಇಒ , ತಾಲ್ಲೂಕು ಪಂಚಾಯಿತಿ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.