ADVERTISEMENT

ಆಸ್ಪತ್ರೆಯತ್ತ ಸುಳಿಯದ ವೈದ್ಯಾಧಿಕಾರಿ: ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯಕ್ಕೆ ಮುಸ್ಟೂರು ಗ್ರಾಮಸ್ಥರ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 2:41 IST
Last Updated 18 ಮೇ 2021, 2:41 IST
ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು
ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು   

ಮುಸ್ಟೂರು (ಜಗಳೂರು): ಮುಸ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಹಲವು ತಿಂಗಳಿಂದ ನಿರಂತರವಾಗಿ ಗೈರು ಹಾಜರಾಗುತ್ತಿದ್ದು, ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗಡಿಗ್ರಾಮವಾಗಿರುವ ಮುಸ್ಟೂರು ಆರೋಗ್ಯ ಕೇಂದ್ರದಲ್ಲಿ ವಾರದ ಬಹುತೇಕ ದಿನಗಳಲ್ಲಿ ವೈದ್ಯರು ಗೈರುಹಾಜರಾಗುತ್ತಾರೆ. ವೈದ್ಯರ ನಿರಂತರ ಗೈರು ಹಾಜರಿ ಕಾರಣ ಶುಶ್ರೂಷಕಿಯರು ಹಾಗೂ ಸಿಬ್ಬಂದಿಯೂ ಕೇಂದ್ರದತ್ತ ಸುಳಿಯುತ್ತಿಲ್ಲ. ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಪ್ರತಿನಿತ್ಯ ಬಂದು ಕೇಂದ್ರದ ಬಾಗಿಲು ಮಾತ್ರ ತೆರೆಯುತ್ತಾರೆ. ಮುಸ್ಟೂರು ಆಸುಪಾಸಿನ ಹತ್ತಾರು ಹಳ್ಳಿಗಳ ಸಹಸ್ರಾರು ರೋಗಿಗಳಿಗೆ ಆರೋಗ್ಯ ಕೇಂದ್ರದ ಅವ್ಯವಸ್ಥೆಯಿಂದ ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರತಿನಿತ್ಯ ಅಕ್ಕಪಕ್ಕದ ಹಲವು ಗ್ರಾಮಗಳಿಂದ ಮಹಿಳೆಯರು, ವೃದ್ಧರು ಸೇರಿ ರೋಗಿಗಳು ಕೇಂದ್ರಕ್ಕೆ ಬಂದು ತಾಸುಗಟ್ಟಲೇ ಕಾದು ವೈದ್ಯರು, ಸಿಬ್ಬಂದಿ ಇಲ್ಲದ ಕಾರಣ ಹಿಂದಿರುಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಹಾಗು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಕೊರೊನಾದಂತಹ ಸಂಕಷ್ಟದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಕೇಂದ್ರ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರಾದ ವಿರೂಪಾಕ್ಷ, ತಿಪ್ಪೇಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.