ADVERTISEMENT

ವೀರೇಶ್‌ ಹನಗವಾಡಿ ಬಿಜೆಪಿಯ ನೂತನ ಸಾರಥಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:37 IST
Last Updated 29 ಜನವರಿ 2020, 9:37 IST
ವೀರೇಶ್‌ ಹನಗವಾಡಿ
ವೀರೇಶ್‌ ಹನಗವಾಡಿ   

ದಾವಣಗೆರೆ: ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಎಸ್‌.ಎಂ. ವೀರೇಶ್‌ ಹನಗವಾಡಿ ಆಯ್ಕೆಯಾಗಿದ್ದಾರೆ.

ರಾಜ್ಯದ 18 ಜಿಲ್ಲೆಗಳ ಅಧ್ಯಕ್ಷರ ಘೋಷಣೆ ತಿಂಗಳ ಹಿಂದೆಯೇ ನಡೆದಿತ್ತು. ಉಳಿದ 12 ಜಿಲ್ಲೆಗಳಲ್ಲಿ ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಆಯ್ಕೆ ನಡೆದಿರಲಿಲ್ಲ. ಮಂಗಳವಾರ ಎಲ್ಲ 12 ಜಿಲ್ಲೆಗಳ ಅಧ್ಯಕ್ಷರ ಹೆಸರು ಅಂತಿಮಗೊಳಿಸಲಾಗಿದೆ. ದಾವಣಗೆರೆಯಲ್ಲಿ ಕೆ.ಎಂ. ಸುರೇಶ್‌, ಧನಂಜಯ ಕಡ್ಲೇಬಾಳ್‌ ಮತ್ತು ವೀರೇಶ್‌ ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವೀರೇಶ್‌ ಹನಗವಾಡಿ ಹೆಸರನ್ನು ಘೊಷಣೆ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿಯ ಹರಿಹರ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಕೆಲಸ ಮಾಡಿ ಅನುಭವ ಇರುವ ವೀರೇಶ್‌ ಹನಗವಾಡಿ 2013ರ ವಿಧಾನಸಭೆ ಚುನಾವಣೆಯಲ್ಲಿ ಹರಿಹರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ADVERTISEMENT

ಪಕ್ಷ ಸಂಘಟನೆಗೆ ಆದ್ಯತೆ: ‘ಪಕ್ಷದ ಕೇಂದ್ರ ಮತ್ತು ರಾಜ್ಯ ಘಟಕಗಳ ಅಧ್ಯಕ್ಷರು ಆಯಾ ಕಾಲಕ್ಕೆ ಏನು ಮಾಡಬೇಕು ಎಂದು ಸೂಚನೆಗಳು ನೀಡುತ್ತಾರೆ. ಅದನ್ನು ಸಮರ್ಥವಾಗಿ ನಿರ್ವಹಿಸುವೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರಗಳಿವೆ. ಅವುಗಳ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಕೆಲಸ ಮಾಡುವೆ. ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಅದನ್ನು ಬೂತ್‌ ಮಟ್ಟದಿಂದಲೇ ಇನ್ನಷ್ಟು ಸದೃಢಗೊಳಿಸಲು ಪ್ರಯತ್ನಿಸುವೆ’ ಎಂದು ವೀರೇಶ್‌ ಹನಗವಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಧ್ಯಕ್ಷರ ಅವಧಿ ಮೂರು ವರ್ಷಗಳಾಗಿರುತ್ತದೆ. ಈವರೆಗೆ ಯಶವಂತರಾವ್‌ ಜಾಧವ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.