ADVERTISEMENT

ದಾವಣಗೆರೆ | ಮತದಾರರ ಪಟ್ಟಿ: ಜಿಲ್ಲೆಯ 82 ಸಾವಿರ ಹೆಸರು ರದ್ದು

ಭಾನುವಾರ ಮನೆಮನೆಗೆ ಭೇಟಿ ನೀಡಲಿರುವ ಬಿಎಲ್‌ಒಗಳು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 7:25 IST
Last Updated 4 ಡಿಸೆಂಬರ್ 2022, 7:25 IST
ಶಿವಾನಂದ ಕಾಪಶಿ
ಶಿವಾನಂದ ಕಾಪಶಿ   

ದಾವಣಗೆರೆ: ಎರಡೆರಡು ಕಡೆ ಹೆಸರು ಇದ್ದ 38,800 ಮತದಾರರು ಸೇರಿದಂತೆ ಒಟ್ಟು 82,000 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅದರಲ್ಲಿ ಮರಣ ಹೊಂದಿವರು, ಈ ಜಿಲ್ಲೆಯಿಂದ ಬೇರೆಡೆಗೆ ತೆರಳಿದವರು ಎಲ್ಲ ಸೇರಿದ್ದಾರೆ. 31,000 ಮಂದಿಯನ್ನು ಮತದಾರರ ಪಟ್ಟಿಗೆ ಸೇರ್ಪ‍ಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಮತದಾರರ ಪಟ್ಟಿಯ ಬಗ್ಗೆ ವಿಶೇಷ ಅಭಿಯಾನ ಶನಿವಾರ ನಡೆದಿದ್ದು, ಭಾನುವಾರವೂ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 13,88,434 ಮತದಾರರಿ
ದ್ದಾರೆ. ಯಾವುದೇ ಮತದಾರರ ಹೆಸರು ಬಿಟ್ಟು ಹೋಗಿದ್ದರೆ ಮಾಹಿತಿ ಸೇರ್ಪಡೆ ಮಾಡಲಾಗುವುದು. ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿದಾಗ ಎಲ್ಲ ಮಾಹಿತಿಗಳನ್ನು ನೀಡಬೇಕು. ಮನೆ ಭೇಟಿ ಕಾರ್ಯಕ್ರಮವು ಭಾನುವಾರ ಪೂರ್ಣಗೊಳ್ಳದೇ ಇದ್ದರೆ ಸೋಮವಾರವೂ ಅಭಿಯಾನ ಮುಂದುವರಿಸಲಾಗುವುದು’ ಎಂದು
ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು ಕೊನೆಯ ಅಭಿಯಾನ
ವಾಗಿದ್ದು, ಡಿ.6ರಂದು ಮಾಹಿತಿಯನ್ನು ಗೂಗಲ್‌ ಸ್ಪ್ರೆಡ್‌ಶೀಟ್‌ನಲ್ಲಿ ಇಂಡೀಕರಿಸಲಾಗುವುದು ಎಂದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 1,683 ಬೂತ್‌ಗಳಿವೆ. ಪ್ರತಿ ಬೂತ್‌ಗೆ ಒಬ್ಬರಂತೆ ಮತಗಟ್ಟೆ ಅಧಿಕಾರಿ ಇರುತ್ತಾರೆ. ಒಟ್ಟು 166 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜಗಳೂರು, ಹರಿಹರ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳಿಗೆ ಕಂದಾಯ ಉಪವಿಭಾಗಾಧಿಕಾರಿ, ದಾವಣಗೆರೆ ಉತ್ತರ ಮತ್ತು ದಕ್ಷಿಣಕ್ಕೆ ಪಾಲಿಕೆ ಆಯುಕ್ತ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳಿಗೆ ಹೊನ್ನಾಳಿ ಉಪವಿಭಾಗಾಧಿಕಾರಿ ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

2023ರ ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1ರ ಒಳಗೆ 18 ವರ್ಷ ಪೂರ್ಣಗೊಳ್ಳುವವರು ಈಗಲೇ ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷ ತುಂಬಿದ ಕೂಡಲೇ ಅದು ಸಕ್ರಿಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಸಹಾಯವಾಣಿ 1950ಕ್ಕೆ ಕರೆ ಮಾಡಬಹುದು. ಮಾಹಿತಿಯನ್ನು Voter helpline App, www.voterportal.eci.gov.in, www.ceo.karnataka.gov.inಗಳಲ್ಲಿ ಪಡೆಯಬಹುದು. ಹೊಸದಾಗಿ ಸೇರ್ಪಡೆಗೊಂಡ, ತಿದ್ದುಪಡಿ ಮಾಡಿಕೊಂಡ ಮತದಾರರಿಗೆ ಪಿವಿಸಿ ಎಪಿಕ್‌ ಕಾರ್ಡ್‌ಗಳನ್ನು ಅಂಚೆ ಮೂಲಕ ಉಚಿತವಾಗಿ ಕಳುಹಿಸಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ‍ಪಿ.ಎಸ್‌. ಲೋಕೇಶ್‌ ಇದ್ದರು.

ಆಧಾರ್‌ಲಿಂಕ್‌ ಶೇ 73.5 ಪೂರ್ಣ

ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಆಧಾರ್‌ಲಿಂಕ್‌ ಮಾಡುವ ಕಾರ್ಯ ನಡೆಯುತ್ತಿದೆ. ಶೇ 73.5ರಷ್ಟು ಮಂದಿ ಲಿಂಕ್‌ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದರು.

ಮಾಯಕೊಂಡದಲ್ಲಿ ಶೇ 95.7, ಜಗಳೂರಿನಲ್ಲಿ ಶೇ 80.93, ಹರಿಹರದಲ್ಲಿ ಶೇ 81.38, ಚನ್ನಗಿರಿಯಲ್ಲಿ ಶೇ 79.4, ಹೊನ್ನಾಳಿಯಲ್ಲಿ ಶೇ 77.88 ಆಧಾರ್‌ ಲಿಂಕ್‌ ಆಗಿದೆ. ದಾವಣಗೆರೆ ಉತ್ತರದಲ್ಲಿ ಶೇ 52.37, ದಾವಣಗೆರೆ ದಕ್ಷಿಣದಲ್ಲಿ ಶೇ 52.45 ಮಾತ್ರ ಲಿಂಕ್‌ ಆಗಿರುವುದರಿಂದ ಜಿಲ್ಲೆಯ ಒಟ್ಟು ಪ್ರಮಾಣ ಕಡಿಮೆ ತೋರಿಸುತ್ತಿದೆ ಎಂದರು.

‘ಹೆಸರು ಬಿಟ್ಟು ಹೋಗಿದ್ದರೆ ದೂರು ನೀಡಲಿ’

‘ಮತದಾರರ ಪಟ್ಟಿಯಿಂದ ಅರ್ಹರ ಹೆಸರು ತೆಗೆಯಲಾಗಿದೆ ಎಂದು ಹರಿಹರ ಶಾಸಕರು ಹೇಳಿದ್ದಾರೆ. ಯಾರ ಹೆಸರು ತೆಗೆಯಲಾಗಿದೆ ಎಂದು ಅಧಿಕೃತ ದೂರು ಪಡೆಯಬೇಕು. ಅವರು ದೂರು ನೀಡದೇ ಇದ್ದರೂ ಸ್ವಯಂ ತನಿಖೆ ನಡೆಸಬೇಕು ಎಂದು ಹರಿಹರ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಯಾವ ಪ್ರದೇಶದಲ್ಲಿ ಯಾರ ಹೆಸರು ತೆಗೆಯಲಾಗಿದೆ ಎಂದು ನಿರ್ದಿಷ್ಟವಾಗಿ ತಿಳಿಸಬೇಕು. ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಉಂಟು ಮಾಡಬಾರದು. ಅವರಿಗೆ ನೋಟಿಸ್‌ ನೀಡಿ ವಿವರ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.