ದಾವಣಗೆರೆ: ‘ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ. 2025ರ ನ.1ಕ್ಕೆ ಅನ್ವಯಿಸುವಂತೆ ಮೂರು ವರ್ಷಗಳ ಹಿಂದೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಅಂಕಪಟ್ಟಿ ಅಥವಾ ಉತ್ತೀರ್ಣ ಪ್ರಮಾಣ ಪತ್ರವನ್ನು ನಿಗದಿತ ನಮೂನೆಯೊಂದಿಗೆ ಮತದಾರರ ನೋಂದಣಿ ಅಧಿಕಾರಿಗೆ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
‘ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕುಗಳು ಒಳಪಡುತ್ತವೆ. ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕನಿಷ್ಠ 6 ತಿಂಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಕಾಯಂ ನಿವಾಸಿಯಾಗಿದ್ದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಅವಕಾಶ ಇದೆ. ನಮೂನೆ-18ರ ಅರ್ಜಿ ಭರ್ತಿ ಮಾಡಿ, ನಿವಾಸಿ ಸ್ಥಾನದ 11 ದಾಖಲೆಗಳಲ್ಲಿ ಒಂದನ್ನು ಹಾಗೂ ಪದವಿ ಉತ್ತೀರ್ಣರಾದ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿ ಅಥವಾ ಮಹಾನಗರ ಪಾಲಿಕೆ ಆಯುಕ್ತರ ಚುನಾವಣಾ ಶಾಖೆಗೆ ಸಲ್ಲಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಚುನಾವಣಾ ಆಯೋಗವು ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಗೆ ಸೆ. 30 ರಂದು ಅಧಿಸೂಚನೆ ಹೊರಡಿಸಿದ್ದು, ನ. 6 ರೊಳಗಾಗಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ನ. 25 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕರಡು ಮತದಾರರ ಪಟ್ಟಿಗೆ ಡಿ. 10 ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಡಿ. 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದರು.
‘2022ರ ನ.1 ಕ್ಕೂ ಪೂರ್ವ ಅಥವಾ 2025ರ ನ.1 ಕ್ಕೆ 3 ವರ್ಷಗಳ ಹಿಂದೆ ಪದವಿ ಉತ್ತೀರ್ಣರಾಗಿರಬೇಕು. ಇವರು ಮಾತ್ರ ಮತದಾರರಾಗಲು ಅರ್ಹತೆ ಪಡೆಯುತ್ತಾರೆ. ಪದವಿ ಪೂರೈಸಿದ ಅರ್ಹರೆಲ್ಲರೂ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಪದವಿ ಕಾಲೇಜುಗಳಿಗೆ ಪತ್ರ ಬರೆಯಲಾಗುವುದು’ ಎಂದರು.
ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಗುರಿ
‘ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸುವ ದೃಷ್ಟಿಯಿಂದ 7 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಜಾಗೃತಿಯ ಪರಿಣಾಮ ವಿದ್ಯಾರ್ಥಿಗಳು 3.5 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿ ಶಾಲೆಗೆ ನೀಡಿದ್ದಾರೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಆನಗೋಡು ಬಳಿ 30 ಎಕರೆ ಜಾಗ ಗುರುತಿಸಲಾಗಿದೆ. ಕಟ್ಟಡದ ತ್ಯಾಜ್ಯವನ್ನು ಮಾಲೀಕರೇ ನೇರವಾಗಿ ಅಲ್ಲಿಗೆ ರವಾನಿಸಬಹುದು. ಇಲ್ಲವೇ ಪಾಲಿಕೆಗೆ ನಿಗದಿತ ಶುಲ್ಕ ಪಾವತಿಸಿದರೆ ಪಾಲಿಕೆಯ ಸಿಬ್ಬಂದಿಯೇ ತ್ಯಾಜ್ಯ ಸಾಗಿಸುತ್ತಾರೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಚನ್ನಗಿರಿ ತಾಲ್ಲೂಕಿನಲ್ಲಿ ಸಮೀಕ್ಷರೊಬ್ಬರು ಒಂದೇ ದಿನ 76 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಚುರುಕಾಗಿ ಸಮೀಕ್ಷೆ ಮುಗಿಸಿದ ಪ್ರತೀ ತಾಲ್ಲೂಕಿನ 10 ಸಮೀಕ್ಷರಿಗೆ ಪ್ರಶಂಸನಾ ಪತ್ರ ನೀಡಲಾಗುತ್ತಿದೆ.– ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಶೇ 75 ರಷ್ಟು ಪೂರ್ಣ
ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಶೇ 75 ರಷ್ಟು ಪೂರ್ಣಗೊಂಡಿದೆ. ಸಮೀಕ್ಷೆ ಬೇಗ ಪೂರ್ಣಗೊಳಿಸುತ್ತಿರುವ ಪಟ್ಟಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸೋಮವಾರದೊಳಗೆ ಜಿಲ್ಲೆಯಲ್ಲಿ ಸಮೀಕ್ಷೆ ಪೂರ್ಣಗೊಳ್ಳಿದೆ ಎಂದು ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ ಸಮೀಕ್ಷೆಗೆ ಬಿಟ್ಟು ಹೋಗಿದ್ದ ಮನೆಗಳಿಗೆ 20 ಸಾವಿರ ಯುಎಚ್‍ಐಡಿ ಯನ್ನು ಹೊಸದಾಗಿ ನೀಡಲಾಗಿದೆ. ಈ ಮನೆಗಳ ಸಮೀಕ್ಷೆಯನ್ನೂ ಕೈಗೊಳ್ಳಲಾಗುತ್ತದೆ’ ಎಂದರು.
‘ಜಿಲ್ಲೆಯಲ್ಲಿ 4462 ಸಮೀಕ್ಷಕರು 500ಕ್ಕೂ ಹೆಚ್ಚು ಮೇಲ್ವಿಚಾರಕರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 4.76 ಲಕ್ಷ ಮನೆಗಳಿದ್ದು ಈಗಾಗಲೇ 3.51 ಲಕ್ಷ ಮನೆಗಳ ಸಮೀಕ್ಷೆ ಮುಗಿದೆ. ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ನಿಧಾನವಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ವೇಗವಾಗಿ ಸಮೀಕ್ಷೆ ನಡೆಯುತ್ತಿದೆ. ನಗರ ಪಟ್ಟಣ ವ್ಯಾಪ್ತಿಯಲ್ಲಿ ಮನೆಗಳನ್ನು ಗುರುತಿಸಲು ಪೌರಕಾರ್ಮಿಕರು ಆರೋಗ್ಯ ನಿರೀಕ್ಷಕರು ಮತ್ತು ಕಂದಾಯ ನಿರೀಕ್ಷಕರ ನೆರವು ಪಡೆಯಲಾಗುತ್ತಿದೆ’ ಎಂದರು.
‘ಸ್ವಯಂ ಸಮೀಕ್ಷೆಗೆ ಸಿಟಿಜನ್ ಆ್ಯಪ್’
ನಾಗರಿಕರು ಸ್ವಯಂ ಘೋಷಣೆಯ ಮೂಲಕವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಳಗಾಗಬಹುದು. ಇದಕ್ಕಾಗಿ ‘ಸಿಟಿಜನ್ ಆಪ್’ ನೀಡಲಾಗಿದೆ. ಸಮೀಕ್ಷೆಯ ಮಾಹಿತಿಯು ನೇರವಾಗಿ ಆಯೋಗಕ್ಕೆ ಹೋಗುತ್ತದೆ. ಇದರ ಮಾಹಿತಿ ಬೇರೆ ಯಾರಿಗೂ ಸಿಗುವುದಿಲ್ಲ ಗೋಪ್ಯವಾಗಿರುತ್ತದೆ. ನಾಗರಿಕರು ಸ್ವ ಇಚ್ಛೆಯಿಂದ ಮಾಹಿತಿ ನೀಡಬಹುದಾಗಿದೆ’ ಜಿ.ಎಂ.ಗಂಗಾಧರಸ್ವಾಮಿ ಎಂದರು.
ನಾಲ್ವರು ಅಮಾನತು: ಸಮೀಕ್ಷೆ ಕೈಗೊಳ್ಳದ ಮತ್ತು ನಿರ್ಲಕ್ಷ್ಯೆ ತೋರಿದ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈ ಪೈಕಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ಸಕಾರಣ ನೀಡಿದ ಕಾರಣ ಅವರ ಅಮಾನತು ವಾಪಸ್ ಪಡೆಯಲಾಗಿದೆ. ಉಳಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.