ADVERTISEMENT

ದಾವಣಗೆರೆ: ಕೆರೆ ಕೋಡಿ ಹೆಚ್ಚಾಗಿ ಕೃಷಿಭೂಮಿ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 11:30 IST
Last Updated 19 ಡಿಸೆಂಬರ್ 2021, 11:30 IST
ಹೊನ್ನೂರು ಕೆರೆಯ ಹಿನ್ನೀರಿನಲ್ಲಿ ಮುಳುಗಿರುವ ನಿವೇಶನಗಳು
ಹೊನ್ನೂರು ಕೆರೆಯ ಹಿನ್ನೀರಿನಲ್ಲಿ ಮುಳುಗಿರುವ ನಿವೇಶನಗಳು   

ದಾವಣಗೆರೆ: ಹೊನ್ನೂರು ಕೆರೆಯ ಕೋಡಿ ಎತ್ತರಿಸಿರುವ ಕಾರಣ ನೂರಾರು ಎಕರೆ ಕೃಷಿ ಭೂಮಿ, ನಿವೇಶನಗಳಿಗೆ ನೀರು ನುಗ್ಗಿದೆ. ಹೆಚ್ಚುವರಿಯಾಗಿ ಏರಿಸಿರುವ 4 ಅಡಿಯನ್ನು ಇಳಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಮತ್ತು ನರಸೀಪುರ ಗ್ರಾಮಸ್ಥರು ಒತ್ತಾಯಿಸಿದರು.

‘ಒಂದೂವರೆ ವರ್ಷಗಳ ಹಿಂದೆ ಹೊನ್ನೂರು ಕೆರೆಯ 2 ತೂಬುಗಳನ್ನು ಮುಚ್ಚಿ, ಕೋಡಿಯನ್ನು 3–4 ಅಡಿ ಎತ್ತರ ಮಾಡಲಾಗಿದೆ. ಇದರಿಂದಾಗಿ 3 ತಿಂಗಳಿಂದ ಹೊನ್ನೂರು ಕೆರೆಯ ಮುಂಭಾಗ, ಅಕ್ಕಪಕ್ಕದಲ್ಲಿರುವ ಹಿಡುವಳಿದಾರರ ನೂರಾರು ಎಕರೆ ಜಮೀನುಗಳಲ್ಲಿ 5-6 ಅಡಿಯಷ್ಟು ಕೆರೆಯ ನೀರು ನಿಂತಿದೆ. ನಿವೇಶನ ಬಡಾವಣೆಯಲ್ಲೂ 3-4 ಅಡಿಯಷ್ಟು ನೀರು ನಿಂತಿದೆ. ಜಮೀನುಗಳಲ್ಲಿನಬೆಳೆ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಹೊನ್ನೂರು ಕೆರೆ 1974-75ರಲ್ಲಿ ತುಂಬಿದಾಗ ಇಷ್ಟೊಂದು ನೀರು ಹಿಡುವಳಿದಾರರ ಜಮೀನಿನಲ್ಲಿ ನಿಂತಿರಲಿಲ್ಲ. ಕಡಿಮೆ ಆಳ ಇದ್ದುದರಿಂದ ಕೋಡಿ ಬಿದ್ದಾಗ 15-20 ದಿನದೊಳಗೆ ನೀರು ಜಮೀನಿನಿಂದ ಹಿಂದಕ್ಕೆ ಸರಿಯುತ್ತಿತ್ತು. ಈಗ ಸಾಕಷ್ಟು ಮಳೆಯಾಗಿ ಕೊಗ್ಗನೂರು, ಆನಗೋಡು, ಸಿದ್ಧನೂರು ಕೆರೆಗಳ ಕೋಡಿ ಬಿದ್ದ ನೀರು, ಹಳ್ಳದ ನೀರು ಕೂಡ ಹೊನ್ನೂರು ಕೆರೆಗೆ ಸೇರುತ್ತಿದೆ. ಸುಮಾರು 3 ತಿಂಗಳಾದರೂ ಹಿಡುವಳಿ ಜಮೀನುಗಳಲ್ಲಿ ನೀರು ಕಡಿಮೆಯಾಗದೆ, ರಾಷ್ಟ್ರೀಯ ಹೆದ್ದಾರಿ-48ರ ಸಮೀಪದ ನಿವೇಶನಗಳವರೆಗೂ ನೀರು ನಿಂತಿದೆ ಎಂದು ಅವರು ದೂರಿದರು.

ADVERTISEMENT

ರಾಜನಹಳ್ಳಿ ತುಂಗಭದ್ರಾ ನದಿಯಿಂದ 22 ಕೆರೆ ನೀರನ್ನು ಹೊನ್ನೂರು ಕೆರೆ ಮೂಲಕಹರಿಸುತ್ತಿರುವುದೂ ಸಮಸ್ಯೆಗೆ ಕಾರಣವಾಗಿದೆ. ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಜನರಿಗಾಗುತ್ತಿರುವ ತೊಂದರೆ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಹಿಡುವಳಿ ಜಮೀನುಗಳಿಗೆ ನೀರು ನುಗ್ಗದಂತೆ ಕೆರೆಯ ಅಂಗಳದಲ್ಲಿ ಮಾತ್ರ ನೀರು ನಿಲ್ಲುವಂತೆ ಮಾಡಬೇಕು. ಕೋಡಿ ಎತ್ತರವನ್ನು 4 ಅಡಿ ಕಡಿಮೆ ಮಾಡಿ, ಹೆಚ್ಚಿನ ನೀರನ್ನು ಹೊರಗೆ ಬಿಡುವ ವ್ಯವಸ್ಥೆಯಾಗಬೇಕು. ಈ ಮೂಲಕ ಸ್ಥಳೀಯ ಹಿಡುವಳಿದಾರರು, ನಿವೇಶನದಾರರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಜಿ.ಎಸ್. ರೇವಣ ಸಿದ್ದಪ್ಪ ದಳಪತಿ, ಜಿ.ಎಂ. ಗಿರೀಶ, ರತ್ನಮ್ಮ, ಟಿ.ಬಸವರಾಜಪ್ಪ, ಚಂದ್ರು, ಹರೀಶ ಬಸಾಪುರ, ಸಂಪತ್, ಬಸವರಾಜಪ್ಪ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.