ADVERTISEMENT

ಸದಸ್ಯರಿಗೆ ಅಗೌರವ, ಅಸಹಕಾರವಾದರೆ ಕ್ರಮ ಏನು?

ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರ ವ್ಯಾಪ್ತಿ ಬಗ್ಗೆ ನಡೆದ ಸಭೆಯಲ್ಲಿ ಸ್ವಾರಸ್ವಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 4:08 IST
Last Updated 1 ಡಿಸೆಂಬರ್ 2020, 4:08 IST
ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ದೀಪಾ ಜಗದೀಶ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ ನಾಯ್ಕ್, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೊಕೇಶ್ವರ, ಶಿಕ್ಷಣ ಮತ್ತು ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಇದ್ದರು –ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ದೀಪಾ ಜಗದೀಶ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ ನಾಯ್ಕ್, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೊಕೇಶ್ವರ, ಶಿಕ್ಷಣ ಮತ್ತು ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಇದ್ದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರ ವ್ಯಾಪ್ತಿ ಎಷ್ಟು? ಅವರು ನೀಡುವ ಸಲಹೆ, ಮಾರ್ಗದರ್ಶನಗಳಿಗೆ, ಆಗಬೇಕಾದ ಕೆಲಸಗಳ ಬಗ್ಗೆ ನೀಡುವ ಸೂಚನೆಗಳಿಗೆ ಸರಿಯಾದ ಸಹಕಾರವನ್ನು ಅಧಿಕಾರಿಗಳು ನೀಡದೇ ಇದ್ದರೆ ಹೋರಾಟ ಮಾಡುವುದು ಹೇಗೆ? ಹಕ್ಕುಚ್ಯುತಿ ಮಂಡಿಸಲು ಅವಕಾಶ ಇದೆಯೇ?

ಇದು ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದ ಸ್ವಾರಸ್ಯಕರ ಚರ್ಚೆ. ಈ ಪ್ರಶ್ನೆಗಳನ್ನು ಎತ್ತಿದ ಸದಸ್ಯ ತೇಜಸ್ವಿ ಪಟೇಲ್‌ ಅವರಿಗೆ ಮತ್ತು ಇದಕ್ಕೆ ಬೆಂಬಲವಾಗಿ ಮಾತನಾಡಿದ ಇತರ ಸದಸ್ಯರಿಗೆ ಕೊನೆಗೂ ಉತ್ತರ ದೊರೆಯಲಿಲ್ಲ.

‘ಜಿಲ್ಲಾ ಪಂಚಾಯಿತಿ ಸದಸ್ಯರಾದಾಗ ನಮಗೆ ತರಬೇತಿಯನ್ನು ನೀಡಲಾಗಿತ್ತು. ಅಲ್ಲಿ ತಿಳಿಸಿದ ನಮ್ಮ ಅಧಿಕಾರ ವ್ಯಾಪ್ತಿ ಇಲ್ಲಿ ಕಾಣುತ್ತಿಲ್ಲ. ತರಬೇತಿ ಎನ್ನುವುದು ಚೆಕ್‌ ಇದ್ದಂತೆ. ಜಿಲ್ಲಾ ಪಂಚಾಯಿತಿ ಎಂದರೆ ಬ್ಯಾಂಕ್‌ ಇದ್ದಂತೆ. ಆ ಚೆಕ್‌ ಇಲ್ಲಿ ಬೌನ್ಸ್‌ ಆಗುತ್ತಿದೆ’ ಎಂದು ತೇಜಸ್ವಿ ಪಟೇಲ್‌ ಮಾರ್ಮಿಕವಾಗಿ ತಿಳಿಸಿದರು.

ADVERTISEMENT

ಅಧಿಕಾರ ವಿಕೇಂದ್ರೀಕರಣ ಮಾಡಿದ ಕಾಲದಲ್ಲಿ ಅಂದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಧಿಕಾರ ಇತ್ತು. ಈಗ ಒಂದು ಆಶ್ರಯ ಮನೆ ನೀಡುವುದಕ್ಕೂ ಅಧಿಕಾರ ಇಲ್ಲ. ಆಶ್ರಯ ಮನೆ ಬಿಡಿ ತಾಡಪಾಲು ನೀಡಲೂ ಆಗುತ್ತಿಲ್ಲ ಎಂದು ವೀರಶೇಖರಪ್ಪ, ಲೋಕೇಶ್ವರ್‌, ಸವಿತಾ, ಕೆ.ಎಸ್‌. ಬಸವಂತಪ್ಪ, ವಿಶ್ವನಾಥ್‌, ನಿಂಗರಾಜ್‌ ಮುಂತಾದವರು ಮಾತನಾಡಿದರು.

ಅಧಿಕಾರ ಇಲ್ಲದ ಮೇಲೆ ಈ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು ಯಾಕೆ ಬೇಕು? ಅವುಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಹಕ್ಕುಚ್ಯುತಿ ಮಂಡಿಸಲು ಅವಕಾಶ ಇಲ್ಲ. ಉಳಿದ ನಿಮ್ಮ ಪ್ರಶ್ನೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.

ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಪಕ್ಷಾತೀತ ಹೋರಾಟ: ಮೆಕ್ಕೆಜೋಳ ಖರೀದಿ ಕೇಂದ್ರ ಯಾವಾಗ ಪ್ರಾರಂಭ ಮಾಡಲಾಗುತ್ತದೆ ಎಂದು ಬಿಜೆಪಿ ಸದಸ್ಯ ಸುರೇಂದ್ರನಾಯ್ಕ ಪ್ರಶ್ನೆ ಎತ್ತಿದರು. ಮೆಕ್ಕೆಜೋಳವು ಪಡಿತರವಲ್ಲ. ಹಾಗಾಗಿ ಅದನ್ನು ಖರೀದಿಸಲು ಆಗುವುದಿಲ್ಲ ಎನ್ನುವುದು ಯಾವ ನ್ಯಾಯ ಎಂದು ಸದಸ್ಯ ವಿಶ್ವನಾಥ ಪ್ರಶ್ನಿಸಿದರು. ಹಿಂದೆ ಮನಮೋಹನ್‌ ಸಿಂಗ್‌ ಸರ್ಕಾರ ಇರುವಾಗ ಬೆಂಬಲ ಬೆಲೆ ನೀಡಿ ಖರೀದಿಸಲಾಗಿತ್ತು ಎಂದು ಓಬಳಪ್ಪ ಮಾಹಿತಿ ನೀಡಿದರು. ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದು ಕೆ.ಎಸ್‌. ಬಸವಂತಪ್ಪ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳದಿಂದ ಉತ್ಪನ್ನ ತಯಾರಿಸುವ ಕಾರ್ಖಾನೆಗಳಿವೆ. ಅವುಗಳು ಬೇರೆ ಕಡೆಯಿಂದ ಮೆಕ್ಕೆಜೋಳ ಖರೀದಿ ಮಾಡುತ್ತಿವೆ. ಈ ಉದ್ಯಮಿಗಳು ಜಿಲ್ಲೆಯಲ್ಲಿ ಬೆಳೆಯಲಾದ ಮೆಕ್ಕೆಜೋಳವನ್ನೇ ಖರೀದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಬೇಕು ಎಂದುಕೆ.ಎಸ್. ಬಸವಂತಪ್ಪ ತಿಳಿಸಿದರು.

ಆಡಳಿತ ಮಾಡುವವರು ಬದಲಾದಾಗ ಸನ್ನಿವೇಶಗಳು ಕೂಡ ಬದಲಾಗುತ್ತವೆ. ಖರೀದಿ ಕೇಂದ್ರ ಬಗ್ಗೆ ಜಿಲ್ಲಾಧಿಕಾರಿ ಜತೆಗೆ ಮಾತನಾಡುತ್ತೇನೆ. ಸಕಾರಾತ್ಮಕ ಸ್ಪಂದನೆ ದೊರೆಯದೇ ಇದ್ದರೆ ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದು ಅಧ್ಯಕ್ಷೆ ದೀಪಾ ಜಗದೀಶ ಹೇಳಿದರು.

ಜಗಳೂರಿನಲ್ಲಿ ಎಂಜಿನಿಯರ್‌ಗಳು ಕೆಲಸ ಮಾಡುತ್ತಿಲ್ಲ. ಕೆಲಸ ಮಾಡಲು ಬಿಡುತ್ತಲೂ ಇಲ್ಲ. ಪಿಡಿಒಗೆ ಗೌರವಯುತವಾಗಿ ಮಾತನಾಡಲು ಬರುತ್ತಿಲ್ಲ. 14ನೇ ಹಣಕಾಸಿನ ಅನುದಾನದಲ್ಲಿ ಸ್ವಚ್ಛತೆಗೆ ಎಂದ ₹ 2 ಲಕ್ಷ ಬಿಡುಗಡೆಯಾಗಿದೆ. ಅದನ್ನು ಕೆಲವರು ಡ್ರಾ ಮಾಡಿದ್ದಾರೆ. ಆದರೆ ಕೆಲಸ ಆಗಿಲ್ಲ ಎಂದು ಸವಿತಾ ದೂರಿದರು.

ಸ್ವಚ್ಛಭಾರತ್‌ ಅಂದರೆ ಗ್ರಾಮೀಣ ಪ್ರದೇಶ ಬಿಟ್ಟು ಎಂದಿದೆಯೇ? ಅದೇ ಎರಡು ಲಕ್ಷವನ್ನು ವೇತನದಂತೆ ನೀಡಿ ನಗರದಲ್ಲಿ ಇರುವಂತೆ ಪಂಚಾಯಿತಿಗಳಲ್ಲೂ 800 ಮಂದಿಗೆ ಒಬ್ಬ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಕೆ.ಎಸ್‌. ಬಸವಂತಪ್ಪ, ಶೈಲಜಾ ಬಸವರಾಜ್‌ ಆಗ್ರಹಿಸಿದರು.

ನೇಮಕ ಮಾಡಿಕೊಳ್ಳಲು ಅವಕಾಶ ಇಲ್ಲ. ಟೆಂಡರ್ ಕರೆದು ಏಜೆನ್ಸಿಗಳ ಮೂಲಕ ಮಾಡಿಕೊಳ್ಳಬಹುದು ಎಂದು ಸಿಇಒ ತಿಳಿಸಿದರು.

ವಸತಿ ನೀಡಲು ವಸತಿರಹಿತರನ್ನು ಆಯ್ಕೆ ಮಾಡುವಾಗ ಪಟ್ಟಿಯಲ್ಲಿ ಇಲ್ಲದವರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ವಿಶ್ವನಾಥ
ಆರೋಪಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್‌, ಸಿಇಒ ಪದ್ಮ ಬಸವಂತಪ್ಪ, ವಿವಿಧ ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟೆಂಡರ್‌ ನಿಯಮ ಉಲ್ಲಂಘನೆ

ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ಈ ಬಾರಿ ಆಹಾರ ಸಾಮಗ್ರಿ ಪೂರೈಕೆಗಾಗಿ ಟೆಂಡರ್ ಕರೆಯಲಾಗಿದ್ದು, 2018–19ನೇ ಸಾಲಿನಲ್ಲಿ ನೀಡಿದ ಸಂಸ್ಥೆಯೊಂದಕ್ಕೆ ನೀಡಬೇಕು ಎಂಬ ಹುನ್ನಾರ ಇಟ್ಟುಕೊಂಡು, ಮಾಡಲಾಗಿದೆ. ಹೀಗಾಗಿ ಇದನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಟೆಂಡರ್ ಪ್ರಕ್ರಿಯೆ ನಿಯಮಬದ್ಧ ಹಾಗೂ ಪಾರದರ್ಶಕವಾಗಿರಬೇಕು. ₹ 68 ಲಕ್ಷ ನಷ್ಟವಾಗಿದೆ ಎಂದು ಆದಾಯ ತೆರಿಗೆ ಕಟ್ಟುವಾಗ ತಿಳಿಸಿದ ಸಂಸ್ಥೆಗೆ ಮತ್ತೆ ನೀಡುವುದು ಸರಿಯಲ್ಲ. ಮೂರು ವರ್ಷಗಳಲ್ಲಿ ಎಷ್ಟು ಮಂದಿ ಟೆಂಡರ್‌ ಹಾಕಿದ್ದಾರೆ. ಯಾರಿಗೆ ನೀಡಿದ್ದೀರಿ ಎಂದು ಮಾಹಿತಿ ನೀಡಬೇಕು ಎಂದು ಸದಸ್ಯ ಓಬಳಪ್ಪ ಆಗ್ರಹಿಸಿದರು.

ಆಹಾರ ಸಾಮಗ್ರಿ, ಹೊರಗುತ್ತಿಗೆ ಉದ್ಯೋಗ, ಔಷಧ ಪೂರೈಕೆ ಹೀಗೆ ಎಲ್ಲದಕ್ಕೂ ನಾಲ್ಕೈದು ಏಜೆನ್ಸಿಗಳು ಬಿಟ್ಟರೆ ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ. ಹೊಸಬರಿಗೆ ಅವಕಾಶ ನೀಡಬೇಕು. ಟೆಂಡರ್‌ಗಳನ್ನು ನಿಯಮ ಪ್ರಕಾರ ಮಾಡಬೇಕು ಎಂದು ಕೆ.ಎಸ್‌. ಬಸವಂತಪ್ಪ ಒತ್ತಾಯಿಸಿದರು.

ಕೊಟ್ಟವರಿಗೇ ಕೊಡಲು ನೀವು ಹುನ್ನಾರ ಮಾಡಿದ್ದೀರಿ. ನಿಯಮ ಪ್ರಕಾರ ಅವರು ಸರಿ ಇದ್ದರೆ ಕೊಡಿ. ಆದರೆ ನಿಯಮ ಪ್ರಕಾರ ಇಲ್ಲದೇ ಇದ್ದರೂ ನೀಡಲಾಗುತ್ತಿದೆ ಎಂದು ವಾಗೀಶಸ್ವಾಮಿ ಆರೋಪಿಸಿದರು.

ಬ್ಯಾಂಕ್ ಶಾಖೆ ಮುಚ್ಚಲು ಹುನ್ನಾರ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಬ್ಯಾಂಕ್ ಶಾಖೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಸದಸ್ಯ ವಿಶ್ವನಾಥ್, ಬಸವಂತಪ್ಪ ಹೇಳಿದರು.

ಕೆಲವು ಸಣ್ಣ ಪುಟ್ಟ ಬ್ಯಾಂಕ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು, ಕೆಲವು ಶಾಖೆಗಳನ್ನು ಆರ್‌ಬಿಐ ಅನುಮತಿ ಪಡೆದು ರದ್ದುಪಡಿಸಲು ಪ್ರಕ್ರಿಯೆ ಪ್ರಾರಂಭಿಸಿವೆ. ಹೀಗಾಗಿ ಇದಕ್ಕೆ ಜನಪ್ರತಿನಿಧಿಗಳ ಆಕ್ಷೇಪಣೆಯಿದ್ದು, ಬ್ಯಾಂಕ್ ಶಾಖೆಗಳನ್ನು ಮುಚ್ಚದಂತೆ ಶಿಫಾರಸು ಮಾಡಲಾಗುವುದು ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿ ಮಾಹಿತಿ ನೀಡಿದರು.

‘ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ’

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೂ ಹೊರರೋಗಿ ವಿಭಾಗವನ್ನು ಸರಿಯಾಗಿ ಪ್ರಾರಂಭಿಸಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ನಡೆಸುತ್ತಿಲ್ಲ. ಹೀಗಾಗಿ ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ದುಬಾರಿ ಬೆಲೆ ತೆರುತ್ತಿದ್ದಾರೆ. ಸಣ್ಣಪುಟ್ಟ ಕೆಲಸಕ್ಕೂ ಹಣ ನೀಡದೇ ಇದ್ದರೆ ವೈದ್ಯರು, ಸಿಬ್ಬಂದಿ ಸ್ಪಂದಿಸುವುದಿಲ್ಲ. ಇಲ್ಲಿ ಗೂಂಡಾಗಿರಿ ನಡೆಯುತ್ತಿದೆ, ಮಧ್ಯವರ್ತಿಗಳ ಹಾವಳಿ ಜಿಲ್ಲಾ ಆಸ್ಪತ್ರೆಯಲ್ಲಿ ತಾಂಡವವಾಡುತ್ತಿದೆ ಎಂದು ಸದಸ್ಯ ಬಸವಂತಪ್ಪ, ಸುರೇಂದ್ರನಾಯ್ಕ, ಇತರ ಸದಸ್ಯರು ಆಗ್ರಹಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿರುವ ದರಪಟ್ಟಿಯನ್ನು ಆಸ್ಪತ್ರೆಯಲ್ಲಿ ಎಲ್ಲರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂಬ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ಇದನ್ನು ಯಾರೂ ಪಾಲಿಸುತ್ತಿಲ್ಲ ಎಂದು ಸದಸ್ಯೆ ಮಂಜುಳಾ ಟಿ.ವಿ. ರಾಜು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.