ದಾವಣಗೆರೆ: ‘ಜೀವನದಲ್ಲಿ ಮಹತ್ತಾದುದನ್ನು ಸಾಧಿಸಲೇಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ. ಅದನ್ನು ಈಗ ಹೇಳಲಾರೆ. ಸಾಧಿಸಿ ತೋರಿಸುವೆ’.
ಎಸ್ಸೆಸ್ಸೆಲ್ಸಿಯಲ್ಲಿ ಶೇ 98.56 ಅಂಕ ಗಳಿಸಿದ ದಾವಣಗೆರೆ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿ ಜಿ.ಟಿ. ಕಿರಣ್ ಅವರ ಆತ್ಮವಿಶ್ವಾಸದ ಮಾತುಗಳು ಇವು.
ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ತಿಪ್ಪೇಸ್ವಾಮಿ–ಪವಿತ್ರಾ ದಂಪತಿಗೆ ಮಕ್ಕಳು ಇಬ್ಬರಿಗೂ ಕಣ್ಣಿನ ದೋಷ. ಕಿರಣ್ ಈಗ ಎಸ್ಸೆಸ್ಸೆಲ್ಸಿ ಮುಗಿಸಿದರೆ, ಈತನ ತಂಗಿ ಜಿ.ಟಿ. ದೀಪಾ ಇನ್ನು 9ನೇ ತರಗತಿ. ಇದೇ ಶಾಲೆಯಲ್ಲಿ ಓದುತ್ತಿದ್ದಾಳೆ.
‘ತಂದೆ ತಾಯಿಯ ಬೆಂಬಲದಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಶೇ 95 ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಶಾಲೆಯ ಸೂಪರಿಟೆಂಡೆಂಟ್, ಎಲ್ಲ ಶಿಕ್ಷಕರು ಪ್ರೋತ್ಸಾಹ ನೀಡಿದರು. ಅತ್ತೆ, ಸಂಬಂಧಿಕರು ಪ್ರೋತ್ಸಾಹಿಸಿದರು. ಜತೆಗೆ ಬರಹ ಸಹಾಯಗಾರ್ತಿಯಾಗಿ ಸಹಕಾರ ನೀಡಿದ ಜಾಹ್ನವಿ ಅವರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದ.
‘ಜೀವನದ ಸವಾಲನ್ನು ಎದುರಿಸಿ ಗೆಲ್ಲಬೇಕು ಎಂಬುದು ನನ್ನ ತಾಯಿ ಯಾವಾಗಲೂ ಹೇಳುತ್ತಾರೆ. ಜೀವನದಲ್ಲಿ ಗೆದ್ದೇಗೆಲ್ಲಬೇಕು ಎಂದು ಹಠತೊಟ್ಟಿದ್ದೇನೆ. ನಾನು ಹಗಲು ಹೊತ್ತು ಓದುವುದಿಲ್ಲ. ಸಂಜೆ 6ರಿಂದ ರಾತ್ರಿ 12ರವರೆಗೆ ಓದುವ ಅಭ್ಯಾಸ ನನಗೆ’ ಎಂದು ವಿವರಿಸಿದ.
‘ನನ್ನ ತಂಗಿಗೂ ಶೇ 100 ಅಂಧತ್ವ ಇದೆ. ಅವಳಿಗೆ ಬೆನ್ನೆಲುಬು ಆಗಿ ನಾನು ನಿಲ್ಲುತ್ತೇನೆ. ಈಗ 9ನೇ ತರಗತಿಯಲ್ಲಿದ್ದಾಳೆ. ಅವಳು ಎಸ್ಸೆಸ್ಸೆಲ್ಸಿಯಲ್ಲಿ ನನಗಿಂತ ಹೆಚ್ಚು ಅಂಕ ಪಡೆಯುವಂತೆ ಅವಳಿಗೆ ಹೇಳಿಕೊಡುತ್ತೇನೆ’ ಎಂದು ತನ್ನ ಕನಸು ಬಿಚ್ಚಿಟ್ಟ.
‘ಮೂರನೇ ತರಗತಿವರೆಗೆ ಬೆಳಗಾವಿಯಲ್ಲಿ ಓದಿಸಿದೆವು. ಬಳಿಕ ಮಕ್ಕಳಿಗಾಗಿಯೇ ದಾವಣಗೆರೆಯಲ್ಲಿ ಮನೆ ಮಾಡಿಕೊಂಡು ಅಂಧ ಮಕ್ಕಳ ಶಾಲೆಗೆ ಸೇರಿಸಿದೆವು. ಇಲ್ಲಿ ಬ್ರೈಲ್‌ಲಿಪಿ ಕಲಿತ. ಅವನು ಕಠಿಣ ಪರಿಶ್ರಮಿ. ಸಂಶಯಗಳು ಬಂದಾಗ ಶಿಕ್ಷಕರು ಪರಿಹರಿಸುತ್ತಿದ್ದರು. ಸ್ನೇಹಿತರ ಜತೆಗೂ ಚರ್ಚೆ ನಡೆಸುತ್ತಿದ್ದ. ಬದುಕಿನಲ್ಲಿ ಏನಾಗಬೇಕು ಎಂಬ ಗುರಿ ಅವನು ಇಟ್ಟುಕೊಂಡಿದ್ದಾನೆ. ಅದನ್ನು ಹೇಳುತ್ತಿಲ್ಲ. ಅವನ ಗುರಿ ಸಾಧಿಸಲು ಬೇಕಾದ ಪ್ರೋತ್ಸಾಹವನ್ನು ನಾವು ಕೊಡುತ್ತೇವೆ. ಮುಂದೆ ಅಥಣಿ ಕಾಲೇಜಿಗೆ ಹಾಕಬೇಕು ಎಂದು ನಿರ್ಧರಿಸಿದ್ದೇವೆ. ಜೀವನದ ಪರೀಕ್ಷೆಯಲ್ಲಿ ಪಾಸಾಗಲಿ. ಸಮಾಜದ ಸವಾಲುಗಳನ್ನು ಅವನು ಎದುರಿಸಿ ಗೆಲ್ಲುವಂತಾಗಲಿ’ ಎಂದು ಭರಮಸಮುದ್ರದಲ್ಲಿ ಶಿಕ್ಷಕರಾಗಿರುವ ತಂದೆ, ಗೃಹಿಣಿ ತಾಯಿ ಹಾರೈಸಿದರು.
ತಾಯಿಯಾದ ಮೇಲೆ ಡಿಗ್ರಿ !
ಕಿರಣ್‌ನ ತಾಯಿ ಪವಿತ್ರಾ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಾರಕ್‌ಬಾವಿಯವರು. ಅವರು ಪಿಯುಸಿ ಮುಗಿದ ಬಳಿಕ ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆಮೇಲೆ ಮದುವೆಯಾಗಿ ಮಕ್ಕಳಿಬ್ಬರು ಹುಟ್ಟಿದ್ದರು. ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಪದವಿ ಪರೀಕ್ಷೆ ಕಟ್ಟಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.