ADVERTISEMENT

ರೇಣುಕಾಚಾರ್ಯ ಏನೇ ಹೇಳಿದರೂ ಜೀ ಹುಜೂರ್ ಎನ್ನಬೇಕೇ? –ಮಾಜಿ ಶಾಸಕ ಶಾಂತನಗೌಡ

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 13:15 IST
Last Updated 28 ಏಪ್ರಿಲ್ 2020, 13:15 IST
ಡಿ.ಜಿ. ಶಾಂತನಗೌಡ
ಡಿ.ಜಿ. ಶಾಂತನಗೌಡ   

ದಾವಣಗೆರೆ: ಹೊನ್ನಾಳಿ ತಾಲೂಕಿನಲ್ಲಿ ಏನೇ ಕಾರ್ಯಕ್ರಮ ಇದ್ದರೂ ಶಾಸಕ ರೇಣುಕಾಚಾರ್ಯರೇ ಉದ್ಘಾಟನೆ ಮಾಡಬೇಕು. ಅವರು ಹೇಳಿದ ವಿಷಯಗಳಿಗೆ ಅಧಿಕಾರಿಗಳು ‘ಜೀ ಹುಜೂರ್’ ಎನ್ನಬೇಕು. ದಾನಿಗಳಿಂದ ಕಿಟ್‌ ಪಡೆದು ಅದನ್ನು ಜನರಿಗೆ ನೀಡಿ ಪುಗ್ಸಟ್ಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಆರೋಪಿಸಿದರು.

ನಗರದ ಬಾಪೂಜಿ ಗೆಸ್ಟ್‌ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2 ಸಾವಿರ ಜನಕ್ಕೆ ನಿತ್ಯ ಉಪಾಹಾರ ವ್ಯವಸ್ಥೆ ಮಾಡಲಾಗುತ್ತಿದೆ. ತಮ್ಮ ಸ್ವಂತ ಖರ್ಚಿನಲ್ಲಿ 10 ಸಾವಿರ ಆಹಾರ ಕಿಟ್ ನೀಡುತ್ತೇನೆ ಎಂದು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್‌ ಕಚೇರಿಗೆ ತೆರಳಿ ಕೇಳಿದಾಗ ಸುಳ್ಳು ಎಂದು ತಿಳಿದಿದೆ. ಕೇವಲ ಪ್ರಚಾರಕ್ಕಾಗಿ ಶಾಸಕ ರೇಣುಕಾಚಾರ್ಯ ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ರೇಣುಕಾಚಾರ್ಯ ಅವರಿಗೆ ಪೋನ್‌ ಮಾಡಿದರೆ ನಾನೇಕೆ ಹೇಳಬೇಕು. ಬೇಕಾದರೆ ಪತ್ರಿಕೆಯವರನ್ನೇ ಕೇಳಿ, ನೀವ್ಯಾರು ನನಗೆ ಕೇಳೋದಕ್ಕೆ ನಿಮಗೆ ಏಕೆ ನಾನು ಉತ್ತರ ನೀಡಬೇಕು ಎಂಬ ಮಾತುಗಳನ್ನು ಆಡಿದ್ದಾರೆ. ದೂರವಾಣಿಯಲ್ಲಿ ನನಗೆ ಏಕವಚನದಲ್ಲಿ ನಿಂದಿಸುತ್ತಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಲೀಕರು ನೀಡಿದ್ದ ಕಿಟ್‌ಗಳನ್ನು ವಿತರಣೆ ಮಾಡಿ ಸುಳ್ಳು ಹೇಳುತ್ತಾ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಅನುದಾನ ಬಳಸಿಲ್ಲ. ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.

ADVERTISEMENT

ಶಾಸಕರು ಬೆಂಗಳೂರಿನಲ್ಲಿ 2 ದಿನ ದಾವಣಗೆರೆಯಲ್ಲಿ 2 ದಿನ ಇರುತ್ತಾರೆ. ಇವರನ್ನು ಯಾವುದೇ ವೈದ್ಯಕೀಯ ಪರೀಕ್ಷೆ ಮಾಡದೇ ಸಂಚರಿಸಲು ಅನುಮತಿ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರದ ಜನರು ಭಯಗೊಂಡಿದ್ದಾರೆ. ಆದರೆ ಸಾಮಾನ್ಯರು ಬೇರೆ ಜಿಲ್ಲೆಗಳಿಂದ ಬಂದರೆ ಅವರನ್ನು ಕ್ವಾರಂಟೈನ್‌ ಮಾಡುತ್ತಾರೆ. ಇದ್ಯಾವ ನ್ಯಾಯ ಎಂದರು.

‘ಆಶಾ ಕಾರ್ಯಕರ್ತೆಯರನ್ನು ಒಂದು ಸಣ್ಣ ರೂಮ್‌ನಲ್ಲಿ ಕೂಡಿ ಸಾಮಾಜಿಕ ಅಂತರ ಕಾಪಾಡದೇ ಕಾರ್ಯಕ್ರಮ ಮಾಡಿದ್ದರು. ಈ ಸಂಬಂಧ ಮುಖ್ಯಮಂತ್ರಿ ಪೋನ್‌ ಮಾಡಿ ಬೈದಿದ್ದಾರೆ. ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದರೂ, ಏನು ಕ್ರಮ ಕೈಗೊಳ್ಳುತ್ತಿಲ್ಲ. ಈ ಕೂಡಲೇ ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರ ತೆರೆಯಲು ಮುಖ್ಯಮಂತ್ರಿಗಳ ಅನುಮತಿ ತಂದರೆ, ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದಕ್ಕೂ ಸಾರ್ಥಕವಾಗುತ್ತಿದೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ .ಮಂಜಪ್ಪ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌, ಅಯ್ಯೂಬ್‌ ಪೈಲ್ವಾನ್‌, ಕೆ.ದಿನೇಶ್‌ ಶೆಟ್ಟಿ, ಉಮಾಪತಿ, ಬಿ.ಸಿದ್ದಪ್ಪ, ರಮೇಶ್‌, ಹರೀಶ್‌, ಶಿವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.