ADVERTISEMENT

ಮಹಿಳೆ ಆತ್ಮಹತ್ಯೆ: ಮಹಿಳಾ ಪಿಎಸ್‌ಐ ಸಹಿತ ಇಬ್ಬರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:10 IST
Last Updated 9 ಜುಲೈ 2019, 20:10 IST

ದಾವಣಗೆರೆ: ವಿವಾಹಿತ ಮಹಿಳೆಯ ಆತ್ಮಹತ್ಯೆಗೆ ಕಾರಣರಾದ ಆರೋಪದಲ್ಲಿ ಹುಬ್ಬಳ್ಳಿ ಮಹಿಳಾ ಠಾಣೆಯ ಪಿಎಸ್‌ಐ ಮತ್ತು ಅವರ ಮಗನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 7 ವರ್ಷ ಶಿಕ್ಷೆ, ₹ 18,000 ದಂಡ ವಿಧಿಸಿದೆ.

ಇಲ್ಲಿನ ಸರಸ್ವತಿ ಬಡಾವಣೆ ನಿವಾಸಿ, ನಿವೃತ್ತ ಎಂಜಿನಿಯರ್‌ ಎಂ.ಎಸ್‌. ಬಸಪ್ಪ ಅವರ ಮಗಳು ಶರ್ಮಿಳಾ ಅವರನ್ನು ಹುಬ್ಬಳ್ಳಿ ಮಹಿಳಾ ಠಾಣೆಯ ಪಿಎಸ್‌ಐ ಲೀಲಾವತಿ ಅವರ ಮಗ ನವೀನ್‌ ಕುಮಾರ್‌ಗೆ 2014ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಆಗ ವರದಕ್ಷಿಣೆಯಾಗಿ ₹ 10 ಲಕ್ಷ ನಗದು, 10 ತೊಲ ಬಂಗಾರ, 2 ಕೆ.ಜಿ. ಬೆಳ್ಳಿ ನೀಡಲಾಗಿತ್ತು. ಮದುವೆಯ ಬಳಿಕ ಮತ್ತಷ್ಟು ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 2015ರ ಸೆಪ್ಟೆಂಬರ್‌ನಲ್ಲಿ ಮನೆಯಿಂದ ಹೊರ ಹಾಕಿದ್ದರು. ಇದರಿಂದ ಮನನೊಂದು ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಎಂ.ಎಸ್‌. ಬಸಪ್ಪ ಅವರ ದೂರಿನಂತೆ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಡಿವೈಎಸ್‌ಪಿ ಅಶೋಕ್‌ ಕುಮಾರ್‌ ದೋಷಾರೋಪ ಪಟ್ಟಿ ಸಲ್ಲಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಅಂಬಾದಾಸ್‌ ಕುಲಕರ್ಣಿ ಆರೋಪ ಸಾಬೀತಾಗಿರುವುದಾಗಿ ತಿಳಿಸಿ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.

ADVERTISEMENT

ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.