ADVERTISEMENT

ದಾವಣಗೆರೆ: ಮಹಿಳಾ ಪೊಲೀಸರ ಅಂಜಿಕೆ ಮೀರಿದ ಕರ್ತವ್ಯ ನಿರ್ವಹಣೆ

ಅನುಭವ ಬಿಚ್ಚಿಟ್ಟ ಇನ್‌ಸ್ಪೆಕ್ಟರ್‌ ನಾಗಮ್ಮ, ಮಹಿಳಾ ಪಿಎಸ್‌ಐಗಳು

ಬಾಲಕೃಷ್ಣ ಪಿ.ಎಚ್‌
Published 1 ಜುಲೈ 2020, 4:17 IST
Last Updated 1 ಜುಲೈ 2020, 4:17 IST
ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನಾಗಮ್ಮ ಕೆ. ಮತ್ತು ವಿವಿಧ ಠಾಣೆಗಳ ಮಹಿಳಾ ಪಿಎಸ್‌ಐಗಳು
ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನಾಗಮ್ಮ ಕೆ. ಮತ್ತು ವಿವಿಧ ಠಾಣೆಗಳ ಮಹಿಳಾ ಪಿಎಸ್‌ಐಗಳು   

ದಾವಣಗೆರೆ: ‘ನಮಗೆ ಎಲ್ಲಿ ಕೊರೊನಾ ಬರುತ್ತದೆಯೋ ಎಂಬ ಅಂಜಿಕೆ ಒಳಗೆ ಕಾಡುತ್ತಿತ್ತು. ಅದನ್ನು ಮೀರಿ ಧೈರ್ಯದಿಂದ ಮುನ್ನುಗ್ಗಿ ಕರ್ತವ್ಯ ನಿರ್ವಹಿಸಿದ್ದೇವೆ...’

ಮನೆಯನ್ನು ನಿಭಾಯಿಸಿಕೊಂಡು, ಕೊರೊನಾ ವಿರುದ್ಧದ ಹೋರಾಟದಲ್ಲೂ ಸಕ್ರಿಯರಾಗಿದ್ದ ಪೊಲೀಸ್ ಇಲಾಖೆಯ ಕೊರೊನಾ ಮಹಿಳಾ ವಾರಿಯರ್‌ಗಳಾದ ಇನ್‌ಸ್ಪೆಕ್ಟರ್‌ ನಾಗಮ್ಮ ಕೆ. ಹಾಗೂ ವಿವಿಧ ಠಾಣೆಗಳ ಪಿಎಸ್‌ಐಗಳು ಬಿಚ್ಚಿಟ್ಟ ಅನುಭವ ಇದು.

‘ತನಿಖಾ ತಂಡದಲ್ಲಿದ್ದುಕೊಂಡು ಕೊರೊನಾ ಸೋಂಕಿತರ ಸಂಪರ್ಕಗಳನ್ನು ಮತ್ತು ಅವರ ಟ್ರಾವೆಲ್‌ ಹಿಸ್ಟರಿಯನ್ನು ಪತ್ತೆ ಹಚ್ಚುವುದು, ಕ್ವಾರಂಟೈನ್‌ ಮಾಡುವುದು, ಕಂಟೈನ್‌ಮೆಂಟ್‌ ವಲಯಗಳಿಗೆ ಭೇಟಿ ನೀಡಿ ಬಂದೋಬಸ್ತ್‌ ಮಾಡುವುದು ಹೀಗೆ ಕೊರೊನಾಗೆ ಸಂಬಂಧಿಸಿದಂತೆ ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. 8 ವರ್ಷದ ಮಗಳು ಮನೆಯಲ್ಲಿದ್ದಾಳೆ. ಮನೆಯಲ್ಲಿಯೂ ಅಂತರ ಕಾಪಾಡಿಕೊಂಡೇ ಮನೆ ಕೆಲಸ ಮಾಡಬೇಕಿತ್ತು’ ಎಂದು ಇನ್‌ಸ್ಪೆಕ್ಟರ್‌ ನಾಗಮ್ಮ ವಿವರಿಸಿದರು.

ADVERTISEMENT

ಇದರ ಜೊತೆಗೆ ಪಿಎಸ್‌ಐಗಳಾದ ಕಿಲೋವತಿ, ಭಾರತಿ ಕಂಕಣವಾಡಿ, ಶೈಲಶ್ರೀ, ಆಶಾ, ರೂಪ್ಲಿಬಾಯಿ, ಪುಷ್ಪಲತಾ ವಿವಿಧೆಡೆ ಕಾರ್ಯನಿರ್ವಹಿಸಿದ್ದಾರೆ. 10 ಮಹಿಳಾ ಎಎಸ್‌ಐ, 50ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ, ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಎಸ್‌ಪಿ, ಡಿಸಿ ಸಹಿತ ಮೇಲಧಿಕಾರಿಗಳು ಉತ್ತಮ ಆಹಾರ, ಪೌಷ್ಟಿಕಾಂಶಗಳನ್ನು ಒದಗಿಸಿದರು ಎಂದು ಸ್ಮರಿಸಿದರು.

‘ಜಿಲ್ಲೆ ಹಸಿರು ವಲಯಕ್ಕೆ ಕಾಲಿಟ್ಟ ಮೇಲೆ ಮೊದಲ ಪ್ರಕರಣ ಬಾಷಾನಗರದಲ್ಲಿ ಬಂತು. ಅದಾದ ಮೇಲೆ ಇಮಾಂನಗರ, ಶಿವನಗರ, ದೇವರಾಜ ಕ್ವಾಟ್ರರ್ಸ್‌ ಹೀಗೆ ಒಂದರ ಮೇಲೆ ಒಂದು ಕಂಟೈನ್‌ಮೆಂಟ್‌ಗಳಾದವು. ನನಗೆ ಎಲ್ಲಿ ಕೊರೊನಾ ಬರುತ್ತೋ ಎಂದು ಹೆದರಿ ಪರೀಕ್ಷೆಯೇ ಮಾಡಿಸಲಿಲ್ಲ. ಸಣ್ಣ ಮನೆಗಳು, ಜನಸಂಖ್ಯೆ ಜಾಸ್ತಿ ಅವರನ್ನು ನಿಯಂತ್ರಿಸಲು ಬಲಪ್ರಯೋಗವೇ ಮಾಡಬೇಕಾಯಿತು. ಮನೆಯಲ್ಲಿ ಒಂದೂವರೆ ತಿಂಗಳು ಪ್ರತ್ಯೇಕ ಕೊಠಡಿಯಲ್ಲಿದ್ದೆ. ಮನೆಯವರು, ಹೈಸ್ಕೂಲ್‌ ಓದುತ್ತಿರುವ ಮಗಳು, ಮಗನೇ ಮನೆ ನಿರ್ವಹಣೆ ಮಾಡಬೇಕಾಯಿತು. ನಮ್ಮ ಪೊಲೀಸ್‌ ಠಾಣೆ ಬಾಷಾನಗರದಿಂದ ಆರ್‌ಎಂಸಿಗೆ ಸ್ಥಳಾಂತರಗೊಂಡು ಒಂದೂವರೆ ತಿಂಗಳು ಕಾರ್ಯನಿರ್ವಹಿಸಿತು. ಎಲ್ಲ ಸಿಬ್ಬಂದಿ ಪೂರ್ಣ ಸಹಕಾರದೊಂದಿಗೆ ಕೆಲಸ ಮಾಡಿದರು’ ಎಂದು ಆಜಾದ್‌ನಗರ ಠಾಣೆಯ ಪಿಎಸ್‌ಐ ಶೈಲಜಾ ನೆನಪಿಸಿಕೊಂಡರು.

‘ಮುಂಜಾನೆ 6ರಿಂದ ರಾತ್ರಿ 8.30ರವರೆಗೂ ರೌಂಡ್‌ಅಪ್‌ ಮಾಡಬೇಕಿತ್ತು. ಮಾರುಕಟ್ಟೆಯಲ್ಲಿ ಜನ ನಿಲ್ಲದಂತೆ ನೋಡಿಕೊಳ್ಳಬೇಕಿತ್ತು. ವಾಹನಗಳಲ್ಲಿ ಜಾಸ್ತಿ ಜನ ಸಂಚರಿಸದಂತೆ ನಿಗಾ ಇಡಬೇಕಿತ್ತು. ನಮ್ಮ ಪೊಲೀಸ್‌ಗೇ ಕೊರೊನಾ ಬಂದಾಗ ನಮ್ಮೆಲ್ಲ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಗಂಟಲು ದ್ರವ ತೆಗೆಸುವ ವ್ಯವಸ್ಥೆ ಮಾಡಿದೆ. ಮನೆಯವರು, ಎಂಜಿನಿಯರಿಂಗ್ ಓದುವ ಮಗ, ಅಣ್ಣನ ಕುಟುಂಬ ಒಟ್ಟಿಗೆ ಇದ್ದೇವೆ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಲಿಲ್ಲ’ ಎಂದು ದಕ್ಷಿಣ ಸಂಚಾರ ಠಾಣೆಯ ಪಿಎಸ್‌ಐ ಜಯಶೀಲ ವಿವರಿಸಿದರು.

‘ನಮ್ಮಲ್ಲಿಗೆ ತಡವಾಗಿ ಕೊರೊನಾ ಬಂತು. ವಿದ್ಯಾವಂತರೇ ಹೆಚ್ಚಿರುವುದರಿಂದ ಜಾಗೃತಿ ಮೂಡಿಸುವುದು ಕಷ್ಟವಾಗಲಿಲ್ಲ. ಆದರೆ, ವಾಕಿಂಗ್‌ ಹೋಗುವುದನ್ನು ತಪ್ಪಿಸುವುದೇ ಹರಸಾಹಸವಾಯಿತು. ಹೊರಗಿನಿಂದ ಬರುವವರನ್ನು ಬಾಪೂಜಿ ಸಮುದಾಯ ಭವನಕ್ಕೆ ಕರೆ ತಂದು ನೋಂದಣಿ ಮಾಡಿಸಬೇಕಿತ್ತು. ಠಾಣೆಯಲ್ಲಿ 50 ವರ್ಷ ಕೆಳಗಿನವರನ್ನು ಕೊರೊನಾ ಸಂಬಂಧಿಸಿದ ಕೆಲಸಕ್ಕೂ, ಮೇಲಿನವರನ್ನು ಠಾಣೆಯ ಇತರ ಕೆಲಸಗಳಿಗೂ ಮೀಸಲಿಡಲಾಯಿತು. ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಹೊರಗೆ ಕಾರ್ಯನಿರ್ವಹಿಸುತ್ತಿರುವೆ’ ಎಂದು ವಿದ್ಯಾನಗರ ಠಾಣೆ ಪಿಎಸ್‌ಐ ರೂಪಾ ತೆಂಬದ ತಿಳಿಸಿದರು.

‘ಕರ್ತವ್ಯದಲ್ಲಿರುವಾಗ ಬೇರೇನೂ ಯೋಚನೆ ಬರುತ್ತಿರಲಿಲ್ಲ. ಮನೆಗೆ ಹೋದ ಮೇಲೆ ಕೊರೊನಾ ನಮಗೂ ಬಂತೇನೋ ಎಂಬ ಚಿಂತೆ ಕಾಡುತ್ತಿತ್ತು. ಮನೆಯಲ್ಲಿ 74 ವರ್ಷದ ತಂದೆ, 68 ವರ್ಷದ ತಾಯಿ ಇದ್ದಾರೆ. ಶೇಖರಪ್ಪನಗರ, ಆನೆಕೊಂಡ ಕಂಟೈನ್‌ಮೆಂಟ್‌ ವಲಯ ನಿರ್ವಹಿಸಬೇಕಿತ್ತು. ಅದಕ್ಕಿಂತ ಮೊದಲು ಬಾಡಾ ಕ್ರಾಸ್‌ ಮೂಲಕ ಒಳ ಬರುವವರನ್ನು ಪರೀಕ್ಷಿಸಬೇಕಿತ್ತು’ ಎಂದು ಆರ್‌ಎಂಸಿ ಠಾಣೆಯ ಪಿಎಸ್‌ಐ ಜಿ.ಎಲ್‌. ಅನ್ನಪೂರ್ಣಮ್ಮ ಮಾಹಿತಿ ನೀಡಿದರು.

‘ಕಂಟೈನ್‌ಮೆಂಟ್‌ ವಲಯ, ಇತರ ಕಡೆಗಳಲ್ಲಿ ಕೆಲಸ ಮಾಡುವಾಗ ಜನರೇ ನೀರು, ಊಟ ನೀಡಿ ಸಹಕಾರ ನೀಡಿದ್ದಾರೆ. ಗಾಂಧಿನಗರ, ಶಿವನಗರಗಳಲ್ಲಿ ಅಂತರ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಾಗಲೂ ಜನ ಸ್ಪಂದಿಸಿದ್ದಾರೆ. ಮನೆಯಲ್ಲಿ ಪತಿ, ಅತ್ತೆ, ಮಕ್ಕಳಿಬ್ಬರು ಪೂರ್ಣ ಸಹಕಾರ ನೀಡಿದರು’ ಎಂದು ಮಹಿಳಾ ಠಾಣೆಯ ಪಿಎಸ್‌ಐ ಮಾಳಮ್ಮ ಹೇಳಿಕೊಂಡರು.

‘ಜಾಲಿನಗರ ಸೇರಿ 9 ಕಂಟೈನ್ಮೆಂಟ್‌ ವಲಯಗಳು ನಮ್ಮ ವ್ಯಾಪ್ತಿಯಲ್ಲಿತ್ತು. ಎಲ್ಲ ಕಡೆ ಓಡಾಡಿ ಜನರನ್ನು ನಿಯಂತ್ರಿಸಬೇಕಾಯಿತು. ನನ್ನ ಮೂವರು ಮಕ್ಕಳೇ ಅಡುಗೆ ಕೆಲಸವನ್ನು ನಿರ್ವಹಿಸಿದರು’ ಎಂದು ಬಸವನಗರ ಪಿಎಸ್‌ಐ ಪಿ.ಸಿ. ಲಲಿತಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.