ADVERTISEMENT

ಮಹಿಳೆಯರು ಸ್ವತಂತ್ರ ತೀರ್ಮಾನ ಕೈಗೊಳ್ಳಿ: ತೇಜಸ್ವಿ ಪಟೇಲ್‌

ಚುನಾವಣೆ ಜಾಗೃತಿ ಕಾರ್ಯಕ್ರಮದಲ್ಲಿ ತೇಜಸ್ವಿ ಪಟೇಲ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:43 IST
Last Updated 4 ನವೆಂಬರ್ 2022, 6:43 IST
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ದಾದಾಪೀರ್‌ ನವಿಲೇಹಾಳ್ ಮಾತನಾಡಿದರು.
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ದಾದಾಪೀರ್‌ ನವಿಲೇಹಾಳ್ ಮಾತನಾಡಿದರು.   

ದಾವಣಗೆರೆ: ಮಹಿಳೆಯರು ಇವತ್ತಿಗೂ ಮನೆಯಲ್ಲಿ ಪತಿ ಮತ್ತು ಗಂಡು ಮಕ್ಕಳ ತೀರ್ಮಾನದಂತೆ ಮತ ಚಲಾಯಿಸುತ್ತಾರೆ. ಇದು ಬದಲಾಗಬೇಕು. ಮಹಿಳೆಯರು ಸ್ವತಂತ್ರ ತೀರ್ಮಾನ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‌ ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ವತಿಯಿಂದ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಓಟು ಮಾರಾಟ ಮಾಡಬೇಡಿ. ಯಾರು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಶಾಂತಿ, ಸಹಬಾಳ್ವೆಗೆ ಒತ್ತು ನೀಡುವ ಪ್ರಾಮಾಣಿಕ ಅಭ್ಯರ್ಥಿಯನ್ನು ಅಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಉಪನ್ಯಾಸಕ ಡಾ. ದಾದಾಪೀರ್‌ ನವಿಲೇಹಾಳ್‌ ಮಾತನಾಡಿ, ‘ಕಾರ್ಮಿಕರು ಯಾವತ್ತೂ ಕಷ್ಟದಲ್ಲಿಯೇ ಇರುತ್ತಾರೆ. ಅದರಲ್ಲಿಯೂ ಮಹಿಳೆಯರು ಇನ್ನೂ ಹೆಚ್ಚಿನ ದುಡಿಮೆ ಮಾಡಬೇಕಾಗುತ್ತದೆ. ಹೊರಗೆ ದುಡಿಯುವ ಪುರುಷ ಮನೆಯೊಳಗೆ ದುಡಿಯುವುದಿಲ್ಲ. ಹೊರಗೆ ದುಡಿಯುವ ಮಹಿಳೆ ಮನೆಯಲ್ಲೂ ದುಡಿಯಬೇಕಾಗುತ್ತದೆ’ ಎಂದು ಹೇಳಿದರು.

ನಿಮ್ಮ ಮಕ್ಕಳಿಗೆ ಉರ್ದುವನ್ನು ಒಂದು ಭಾಷೆಯಾಗಿ ಕಲಿಸಿ. ಆದರೆ ಒಂದು ಮಾಧ್ಯಮವಾಗಿ ಕಲಿಸಬೇಡಿ. ಮಾಧ್ಯಮವಾಗಿ ಕಲಿಸಿದರೆ 7ನೇ ತರಗತಿಗೆ ವಿದ್ಯಾಭ್ಯಾಸ ನಿಂತು ಹೋಗುತ್ತದೆ. ಅಬ್ಬಬ್ಬ ಅಂದರೆ 10ನೇ ತರಗತಿವರೆಗೆ ಬರಬಹುದು. ಅದರ ನಂತರ ಕರ್ನಾಟಕದಲ್ಲಿ ಉರ್ದು ಕಲಿಕೆಯ ಕಾಲೇಜುಗಳು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಕನ್ನಡ ಮಾಧ್ಯಮ ಇಲ್ಲವೇ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಿ ಎಂದು ಸಲಹೆ ನೀಡಿದರು. ಧರ್ಮ ಮನೆಯೊಳಗೆ ಇರಬೇಕು. ಸಾರ್ವಜನಿಕವಾಗಿ ಸಂವಿಧಾನವನ್ನು ಪಾಲನೆ ಮಾಡಬೇಕು. ಸಂವಿಧಾನವೇ ನಮಗೆ ಸೌಹಾರ್ದ, ಸಹಬಾಳ್ವೆಯನ್ನು ನೀಡಿದೆ. ಹಕ್ಕುಗಳನ್ನು ನೀಡಿದೆ ಎಂದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ನಗೀನ ಬಾನು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.