ADVERTISEMENT

ಮಹಿಳೆಯರಿಗೆ ಸವಾಲು, ಸಮಸ್ಯೆ ಹೆಚ್ಚು: ಪದ್ಮಾ ಶಿವಮೊಗ್ಗ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:53 IST
Last Updated 30 ಮಾರ್ಚ್ 2023, 4:53 IST
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಿದ್ದಗಂಗಾ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು       –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಿದ್ದಗಂಗಾ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು       –ಪ್ರಜಾವಾಣಿ ಚಿತ್ರ   

ದಾವಣಗೆರೆ: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಸವಾಲು, ಸಮಸ್ಯೆಗಳು ಜಾಸ್ತಿ. ಎಲ್ಲವನ್ನು ಎದುರಿಸಿ ಹಿಂದೆ ನೋಡದೇ ಮುನ್ನಡೆಯುವ ಶಕ್ತಿ ಮಹಿಳೆಗಿದೆ ಎಂದು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಹೇಳಿದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸಮಾಜದಲ್ಲಿ ಮಾಧ್ಯಮಗಳ
ಪಾತ್ರ ಮತ್ತು ಪತ್ರಕರ್ತೆಯರ ಸವಾಲುಗಳು’ ಕುರಿತು ಅವರು ಮಾತನಾಡಿದರು.

ಹಿಂದೆ ಪತ್ರಿಕೋದ್ಯಮದಲ್ಲಿ ನೈತಿಕತೆಯ ಜೊತೆಗೆ ಬದ್ಧತೆ ಇತ್ತು. ಪ್ರಚೋದನೆಗೆ ಅವಕಾಶ ಕೊಡದಂತೆ ಸತ್ಯ ಸಂಗತಿಯನ್ನು ಸಮಾಜಕ್ಕೆ ತಿಳಿಸಬೇಕಿತ್ತು. ಆದರೆ, ಈಗ ಕೆಲವು ವಿಚಾರಗಳಲ್ಲಿ ಸಮೂಹ ಸನ್ನಿಗೆ ಒಳಗಾಗಿದೆ. ರಾಜಕೀಯ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ. ರಾಜಕೀಯ ಮುಖವಾಣಿಯಾಗಿದೆ. ಪ್ರಚೋದನೆಗೆ ಎಡೆಮಾಡದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡದೇ ಸತ್ಯ ಹೇಳುವ ಕೆಲಸವನ್ನು ಪತ್ರಕರ್ತರು ಮಾಡಬೇಕಿದೆ. ಮನೆಯನ್ನು ಸಮತೋಲನವಾಗಿ ನಿರ್ವಹಿಸಲಬಲ್ಲ ಮಹಿಳೆ ಸಮಾಜದ ಸಮತೋಲನವನ್ನೂ ಕಾಪಾಡಬಲ್ಲಳು ಎಂದು ತಿಳಿಸಿದರು.

ADVERTISEMENT

ಇವತ್ತು ಎಲ್ಲ ಹೆಣ್ಣುಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆಧುನಿಕ ಭಾರತದಲ್ಲಿ ಮೊದಲ ಬಾರಿಗೆ ವಿದ್ಯೆ ನೀಡಿದವರು ಸಾವಿತ್ರಿಬಾಯಿ ಫುಲೆ ಅವರು. ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದು ಕಲಿಸಲು ಹೋಗುವಾಗ ಸಮಾಜವು ಅವರ ಮೇಲೆ ಸೆಗಣಿ ಎಸೆಯುತ್ತಿತ್ತು. ಬ್ಯಾಗಲ್ಲಿ ಪ್ರತ್ಯೇಕ ಸೀರೆ ಇಟ್ಟುಕೊಂಡು ಹೋಗಿ ಶಾಲೆಯಲ್ಲಿ ಸೀರೆ ಬದಲಾಯಿಸಿ ಪಾಠ ಮಾಡುತ್ತಿದ್ದರು. ಇಂದು ಅಂಥ ಸವಾಲುಗಳಿಲ್ಲ. ಅದಕ್ಕಾಗಿ ಸಾವಿತ್ರಿಬಾಯಿಯವರನ್ನು ನೆನಪಿಸಿಕೊಳ್ಳಬೇಕು ಎಂದರು.

ಮಹಿಳೆಗೆ ಮತದಾನದ ಹಕ್ಕು ಕೊಡಿಸಿದವರು, ಆಸ್ತಿಯಲ್ಲಿ ಸಮಾನ ಹಕ್ಕು ಕೊಡಿಸಲು ಹೋರಾಡಿದವರು ಡಾ. ಬಿ.ಆರ್‌. ಅಂಬೇಡ್ಕರ್‌ ಅವರು. ಇಂಥ ಮಹಿಳಾವಾದಿಯನ್ನು ನಾವು ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟೀನ್ ಡಿಸೋಜ ಮಾತನಾಡಿ,
‘ ನಾನು 5 ದಶಕಗಳ ಹಿಂದೆ ಜಿಲ್ಲೆಯ ಮೊದಲ ಪತ್ರಕರ್ತೆಯಾಗಿ ವರದಿ ಮಾಡಲು ಬಂದಾಗ ಅನೇಕರು ಕುಹಕವಾಡಿದ್ದರು. ಅಡತಡೆಗಳು ಎದುರಾಗಿದ್ದವು’ ಎಂದು ನೆನಪಿಸಿಕೊಂಡರು.

‘ಸಿದ್ಧಗಂಗಾ ವಿದ್ಯಾಸಂಸ್ಥೆಯ ಜತೆಗೆ ಶಿವಣ್ಣ ಅವರು ಸೌರಭ ವಾರಪತ್ರಿಕೆ ಮತ್ತು ಪ್ರಜಾಭಿಮತ ದಿನಪತ್ರಿಕೆ ಆರಂಭಿಸಿದ್ದರು. ಓದು ಮತ್ತು ಬರಹದ ಹವ್ಯಾಸ ಇದ್ದ ನನಗೆ ಅದನ್ನು ನಿರ್ವಹಿಸುವುದು ಕಷ್ಟವಾಗಲಿಲ್ಲ. ಸಮಾಜದ ಸವಾಲುಗಳನ್ನು ರಾಜಕಾರಣಿಗಳ ಬೆದರಿಕೆಗಳನನ್ನು ಎದುರಿಸಬೇಕಾಯಿತು. ಅವೆಲ್ಲವನ್ನು ಮೆಟ್ಟಿ ನಿಂತೆ. ಅಮ್ಮ ನೀನು ಪತ್ರಿಕೆ ಮಾಡಿದ ಮೇಲೆ ನೀನು ಸರಿಯಾಗಿ ಊಟ ಹಾಕುತ್ತಿಲ್ಲ ಎಂದು ಆಗ ಮಗ ಹೇಳಿದ್ದ ಮಾತು ಪತ್ರಿಕೋದ್ಯಮದ ಆಗಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು’ ಎಂದು ಸ್ಮರಿಸಿದರು.

ಸಂಘದ ಉಪಾಧ್ಯಕ್ಷೆ ಜೆ. ವಾಣಿಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ‘ಒಂದೇ ಸೂರಿನಡಿ ಪತ್ರಕರ್ತೆಯರನ್ನ ತರಬೇಕೆಂಬ ಚಿಂತನೆಯಿಂದ ಸಂಘ ಪ್ರಾರಂಭಿಸಲಾಯಿತು. ಇಲ್ಲಿ ಮುದ್ರಣ, ಎಲೆಕ್ಟ್ರಾನಿಕ್ಸ್, ವೆಬ್ ಮಾಧ್ಯಮದಲ್ಲಿ ಕಾರ್ಯ ನಿರ್ವಯಿಸುತ್ತಿರುವ ಪತ್ರಕರ್ತೆಯರು ನೋಂದಣಿ ಮಾಡಿಕೊಂಡಿದ್ದಾರೆ. ಪತ್ರಕರ್ತೆಯರಿಗೆ ಸ್ಪಂದಿಸುವ ಸಂಘವಾಗಿ ಬೆಳೆಸಲಾಗುವುದು’ ಎಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಎಸ್. ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕಾವ್ಯಶ್ರೀ ಇದ್ದರು. ಕಾವ್ಯ ಬಿ.ಕೆ. ಪ್ರಾರ್ಥಿಸಿದರು. ಎಚ್. ಅನಿತಾ ಸ್ವಾಗತಿಸಿದರು, ಸುಮಾ ಬಿ, ತೇಜಸ್ವಿನಿ ಮತ್ತು ಎ.ಬಿ. ರುದ್ರಮ್ಮ ಅತಿಥಿಗಳನ್ನು ಪರಿಚಯಿಸಿದರು, ಸ್ಮಿತಾ ಶಿರೂರು ಅತಿಥಿಗಳನ್ನು ಗೌರವಿಸಿದರು, ಭಾರತಿ ವಂದಿಸಿದರು. ದೇವಿಕಾ ಸುನೀಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.