ADVERTISEMENT

ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿ: ಜಿ.ಪಂ. ಅಧ್ಯಕ್ಷೆ ಜಯಶೀಲಾ

ಗ್ರಾ.ಪಂ ಬಲವರ್ಧನೆ– ಮಕ್ಕಳ ರಕ್ಷಣೆ ಸಮಾಲೋಚನಾ ಸಭೆಯಲ್ಲಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 9:32 IST
Last Updated 3 ಸೆಪ್ಟೆಂಬರ್ 2018, 9:32 IST
ದಾವಣಗೆರೆಯ ಡಾನ್‌ ಬಾಸ್ಕೊ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗ್ರಾಮ ಪಂಚಾಯಿತಿ ಬಲವರ್ಧನೆ ಮತ್ತು ಮಕ್ಕಳ ರಕ್ಷಣೆ’ ಕುರಿತ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಉದ್ಘಾಟಿಸಿದರು
ದಾವಣಗೆರೆಯ ಡಾನ್‌ ಬಾಸ್ಕೊ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗ್ರಾಮ ಪಂಚಾಯಿತಿ ಬಲವರ್ಧನೆ ಮತ್ತು ಮಕ್ಕಳ ರಕ್ಷಣೆ’ ಕುರಿತ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಉದ್ಘಾಟಿಸಿದರು   

ದಾವಣಗೆರೆ: ‘ಮೂರು ಸ್ತರಗಳ ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಜಾತ್ಯತೀತ, ಪಕ್ಷಾತೀತ ಮತ್ತು ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಸಲಹೆ ನೀಡಿದರು.

ಡಾನ್‌ ಬಾಸ್ಕೊ ಬಾಲಕಾರ್ಮಿಕರ ಮಿಷನ್‌, ಬೆಂಗಳೂರಿನ ಸಿಡಬ್ಲ್ಯುಸಿ ಸಂಸ್ಥೆ, ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಆಶ್ರಯದಲ್ಲಿ ಡಾನ್‌ ಬಾಸ್ಕೊ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗ್ರಾಮ ಪಂಚಾಯಿತಿ ಬಲವರ್ಧನೆ ಮತ್ತು ಮಕ್ಕಳ ರಕ್ಷಣೆ’ ಕುರಿತ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ವಸತಿರಹಿತರ ಸಂಖ್ಯೆ ಇನ್ನೂ ಬಹಳಷ್ಟಿದೆ. ಹೋರಾಟ ನಡೆಸಿ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಸದಸ್ಯರು ಪಡೆದುಕೊಂಡಿದ್ದಾರೆ. ಆದರೆ, ಕೆಲವೆಡೆ ಮನೆ ಮಂಜೂರು ಮಾಡಿಸಲು ಫಲಾನುಭವಿಗಳಿಂದ ₹ 20 ಸಾವಿರದಿಂದ ₹ 30 ಸಾವಿರದವರೆಗೆ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಷ್ಟು ಹಣ ಕೊಡುವ ಶಕ್ತಿ ಬಡವರಿಗೆ ಇದ್ದರೆ ಅವರೇಕೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು; ಬಾಡಿಗೆ ಮನೆಯಲ್ಲೇ ನೆಲೆಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಮಹಾತ್ಮ ಗಾಂಧಿ ಸಹ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು. ಇಂದು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ ನೀಡಲಾಗಿದೆ. ಸ್ವಚ್ಛತೆ, ಶಿಕ್ಷಣ, ಕುಡಿಯುವ ನೀರು, ಸರ್ಕಾರದ ಯೋಜನೆಗಳು ಜನರಿಗೆ ಸರಿಯಾಗಿ ತಲುಪಿಸುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಜವಾಬ್ದಾರಿ ಹೆಚ್ಚಿದೆ. ವಿಶೇಷವಾಗಿ ಮಹಿಳೆಯರಿಗೆ ಜೀವನಾಧಾರಕ್ಕೆ ಅನುಕೂಲ ಆಗುವಂತಹ ತರಬೇತಿಗಳನ್ನು ಕೊಡಿಸುವ ಮೂಲಕ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದರೆ ನಿಮ್ಮದು ಮಾದರಿ ಗ್ರಾಮ ಪಂಚಾಯಿತಿ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಹಿಂದೆ ಹಳ್ಳಿಗಳಲ್ಲಿ ತೋಳ್ಬಲ ಬಾರದ ಮಕ್ಕಳನ್ನೂ ಜೀತಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಕಾನೂನು ರೂಪಿಸಿದ ನಂತರ ಜೀತಪದ್ಧತಿ ಕಡಿಮೆಯಾಗಿದ್ದರೂ, ಆಗಾಗ ಇಂಥ ಪ್ರಕರಣಗಳು ವರದಿಯಾಗುತ್ತಿರುವುದು ಬೇಸರದ ಸಂಗತಿ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಡಬ್ಲ್ಯು.ಸಿ ಸಂಸ್ಥೆಯ ಶ್ರೀನಿವಾಸ ಗಾಣಿಗ, ‘‍ಪಂಚಾಯತ್‌ರಾಜ್‌ ಕಾಯ್ದೆಯ 44ನೇ ಕಲಂನಲ್ಲಿ ದುರ್ಬಲ ಹಾಗೂ ಅಸುರಕ್ಷಿತರಿಗೆ ರಕ್ಷಣೆ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ಮಕ್ಕಳ ರಕ್ಷಣೆ ಮಾಡುವುದು ಸದಸ್ಯರ ಕರ್ತವ್ಯ. ಹೀಗಾಗಿ ಪ್ರತಿ ವರ್ಷ ಗ್ರಾಮ ಸಭೆ ನಡೆಸುವ ಮೊದಲು ಮಕ್ಕಳ ಸಭೆ ಹಾಗೂ ಮಹಿಳೆಯರ ಸಭೆಯನ್ನು ನಡೆಸಿ ಅಹವಾಲುಗಳನ್ನು ಆಲಿಸಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಗ್ರಾಮ ನಮ್ಮ ಯೋಜನೆ’ ಜಾರಿಗೊಳಿಸಲು ಕಾಯ್ದೆಯು ಅವಕಾಶ ನೀಡಿದೆ. ಆಯ್ಕೆಯಾದ ಸದಸ್ಯರಿಗೆ ಮುಂದಿನ ಐದು ವರ್ಷಗಳಿಗೆ ಗ್ರಾಮದ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸುವ ಅಧಿಕಾರ ನೀಡಲಾಗಿದೆ. ಹೀಗಾಗಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಡಾನ್‌ ಬಾಸ್ಕೊ ಸಂಸ್ಥೆಯ ಕ್ರೀಂ ಯೋಜನೆಯ ಸಂಯೋಜಕ ಬಿ. ಮಂಜಪ್ಪ ಸ್ವಾಗತಿಸಿದರು. ಡಾನ್‌ ಬಾಸ್ಕೊ ಸಂಸ್ಥೆಯ ಉಪನಿರ್ದೇಶಕ ಜೋಸ್‌ ಜೋಸೆಫ್‌, ಸಿ.ಡಬ್ಲ್ಯು.ಸಿ ಸಂಸ್ಥೆಯ ಕೃಪಾ ಹಾಜರಿದ್ದರು. ರಿಚರ್ಡ್‌ ತಂಡದವರು ಪ್ರಾರ್ಥಿಸಿದರು.

‘ಆಡಳಿತ ನಿಷ್ಕ್ರಿಯ ಗೊಳಿಸುವ ಪಿಡಿಒ’

‘ಇಂದು ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ವಿದ್ಯಾವಂತರಿದ್ದರೂ ಪಿಡಿಒಗಳು ಯೋಜನೆಗಳ ಬಗ್ಗೆ ಮಾಹಿತಿ ನೀಡದೇ ಆಡಳಿತವನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ’ ಎಂದು ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಕಾರ್ಯದರ್ಶಿ ವಿಶ್ವನಾಥ ಬಿ.ಸಿ ದೂರಿದರು.

‘ಪಿಡಿಒಗಳು ತಾವು ಹೇಳಿದಲ್ಲಿ ಅಧ್ಯಕ್ಷರು ಸಹಿ ಹಾಕಬೇಕು. ಯಾವುದೇ ಮಾಹಿತಿಯನ್ನೂ ಕೇಳಬಾದರು ಎಂಬಂತಹ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಅವರನ್ನು ಪ್ರಶ್ನಿಸಿದರೆ ಪಿಡಿಒ ಸಂಘಟನೆಗಳ ಮೂಲಕ ಜಿಲ್ಲಾ ಪಂಚಾಯಿತಿ ಮೇಲೆ ಒತ್ತಡ ತಂದು ಆಡಳಿತವನ್ನೇ ನಿಷ್ಕ್ರಿಯಗೊಳಿಸುತ್ತಿದ್ದಾರೆ. ಸಾವಿರ ಜನರನ್ನು ಪ್ರತಿನಿಧಿಸುವ ಸದಸ್ಯರಿಗೆ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ಪಿಡಿಒ ಹಾಗೂ ಅಧ್ಯಕ್ಷೆ ನಡುವಿನ ಘರ್ಷಣೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ‘ನೀವು ಯಾರೂ ತಮ್ಮನ್ನು ಪರಕೀಯರೆಂದು ಭಾವಿಸಬೇಕಾಗಿಲ್ಲ. ಪಂಚಾಯಿತಿಯಲ್ಲಿ ತೊಂದರೆಯಾದಾಗ ಒಕ್ಕೂಟದ ಗಮನಕ್ಕೆ ತನ್ನಿ. ನಾವು ನೆರವಿಗೆ ಬರುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.