ADVERTISEMENT

ಮನೆಯಲ್ಲಿ ಬೆಂಬಲವಿದ್ದರೆ ಆಸ್ಪತ್ರೆಯಲ್ಲಿ ಕೆಲಸ ಸುಲಭ: ಗಾಯತ್ರಿ

ಬಾಲಕೃಷ್ಣ ಪಿ.ಎಚ್‌
Published 7 ಮೇ 2021, 4:14 IST
Last Updated 7 ಮೇ 2021, 4:14 IST
ಗಾಯತ್ರಿ ಜಿ.ಎಂ.
ಗಾಯತ್ರಿ ಜಿ.ಎಂ.   

ದಾವಣಗೆರೆ: ‘ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡಬೇಕಿದ್ದರೆ ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು. ಮನೆ ಸದಸ್ಯರ ಬೆಂಬಲ ಇರಬೇಕು. ಅಂಥ ವಾತಾವರಣ ನನಗೆ ಸಿಕ್ಕಿರುವುದರಿಂದಲೇ ಐಸಿಯು, ಎಂಐಸಿಯು ವಾರ್ಡ್‌ನಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಕೊರೊನಾ ಬಗ್ಗೆ ಈ ವರೆಗೆ ಭಯ ಉಂಟಾಗಿಲ್ಲ’ ಎಂದು ಸಿ.ಜಿ. ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿರುವ ಗಾಯತ್ರಿ ಜಿ.ಎಂ. ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಫ್ರಾನ್ಸ್‌ನಿಂದ ಬಂದಿದ್ದ ಯುವ ವೈದ್ಯನಿಗೆ ಕೊರೊನಾ ಬಂದಲ್ಲಿಂದ ಇಲ್ಲಿವರೆಗೆ ಕೊರೊನಾ ವಾರ್ಡ್‌ ಬಿಟ್ಟು ಹೊರಗೆ ಕೆಲಸ ಮಾಡದ ಗಾಯತ್ರಿ ಅವರು 17 ವರ್ಷಗಳಿಂದ ಚಿಗಟೇರಿ ಆಸ್ಪತ್ರೆಯಲ್ಲಿ ಇದ್ದಾರೆ. ಅದರಲ್ಲಿ 15 ವರ್ಷಗಳ ಕಾಲ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿಯೇ ಕೆಲಸ ಮಾಡಿ ಅನುಭವ ಇರುವವರು.

‘ವೆಂಟಿಲೇಟರ್‌ಗೆ ಬಂದವರು ಹೆದರಿಕೊಳ್ಳುವುದು ಜಾಸ್ತಿ. ಅದರಲ್ಲೂ ಪಕ್ಕದ ಬೆಡ್‌ನವರು ಮೃತಪಟ್ಟರೆ ಉಳಿದವರಿಗೆ ಖಿನ್ನತೆ ಉಂಟಾಗುತ್ತದೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ. ನಿಮಗೆ ಏನೂ ಆಗುವುದಿಲ್ಲ ಎಂದು ಧೈರ್ಯ ತುಂಬಿ ಆರೋಗ್ಯವಂತರಾಗಿ ಮಾಡುವುದೇ ಸವಾಲು. ಆ ಕೆಲಸವನ್ನು ನಿರಂತರ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

ADVERTISEMENT

‘ನಿಜಲಿಂಗಪ್ಪ ಬಡಾವಣೆಯಲ್ಲಿ ನಮ್ಮ ಮನೆ ಇದೆ. ಮನೆಯಲ್ಲಿ ಪತಿ, 10ನೇ ತರಗತಿಯಲ್ಲಿ ಓದುತ್ತಿರುವ ಮಗಳು, ಆರನೇ ತರಗತಿಯಲ್ಲಿರುವ ಮಗ ಇದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮನೆಯಲ್ಲಿ ವಹಿಸಬೇಕಾದ ಎಚ್ಚರವನ್ನಷ್ಟೇ ಪಾಲಿಸುತ್ತಿದ್ದೇನೆ. ವಿಪರೀತ ತಲೆ ಕೆಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುತ್ತೇನೆ. ತಂದೆ ತಾಯಿಯ ಪ್ರೋತ್ಸಾಹ, ಪತಿ, ಮಕ್ಕಳ ಸಹಕಾರ ಇರುವುದರಿಂದ ಮನೆ ಬಗ್ಗೆ ತಲೆಕೆಡಿಸಿಕೊಳ್ಳದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಗೆ ಬಂದಾಗ ಆಸ್ಪತ್ರೆ ಬಗ್ಗೆ ಯೋಚನೆ ಮಾಡದೇ ಇರುತ್ತೇನೆ’ ಎಂದು ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.