ADVERTISEMENT

ದಾವಣಗೆರೆ: 5ರಂದು ‘ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:31 IST
Last Updated 3 ಜೂನ್ 2023, 14:31 IST

ದಾವಣಗೆರೆ: ದಾವಣಗೆರೆ ಗಿಳಿವಿಂಡು ಬಳಗ ಸಂಯೋಜನೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮ ಜೂ.5ರಂದು ಜನತಾ ಬಜಾರ್ ಕಟ್ಟಡದ ಮಹಡಿಯ ಮೇಲೆ ನಡೆಯಲಿದೆ.

‘ದಾವಣಗೆರೆ ನಗರದ ಪಾಲಿಕೆ ಬಳಿಯಿರುವ ಮರಗಳಲ್ಲಿ ಸುಮಾರು 20ರಿಂದ 30ಸಾವಿರ ಗಿಳಿವಿಂಡು ಸೇರುತ್ತವೆ. ಬೆಳಿಗ್ಗೆಯೇ ತೆರಳುವ ಗಿಳಿಗಳು 150ಕ್ಕೂ ಹೆಚ್ಚು ಕಿ.ಮೀ. ಸಂಚರಿಸಿ ಬಳಿಕ ಸ್ವಸ್ಥಾನಕ್ಕೆ ಸೇರಿಕೊಳ್ಳುತ್ತವೆ. ಇಷ್ಟು ಗಿಳಿಗಳು ಸೇರುವ ಪ್ರದೇಶವಾಗಿ ರಾಜ್ಯದಲ್ಲಿ ದಾವಣಗೆರೆ ಮೊದಲ ಸ್ಥಾನದಲ್ಲಿದೆ ಎಂದು ಪಕ್ಷಿತಜ್ಞರು ತಿಳಿಸಿದ್ದಾರೆ’ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಗಿಳಿವಿಂಡು ಬಳಗ ಕಳೆದ ಎರಡು ವರ್ಷಗಳಿಂದ ಪಕ್ಷಿಗಳ ಸಂರಕ್ಷಣೆ ಕುರಿತು ಶಾಲೆ-ಕಾಲೇಜುಗಳ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಗಿಳಿವಿಂಡು ರಕ್ಷಣೆ ಬಗ್ಗೆಯೂ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘5ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಮೇಯರ್ ವಿನಾಯಕ ಪೈಲ್ವಾನ್ ಉದ್ಘಾಟಿಸುವರು. ಜನತಾ ಬಜಾರ್ ಅಧ್ಯಕ್ಷ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಶಿಶುಪಾಲ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಹಿರಿಯ ಪತ್ರಕರ್ತ ಕೆ. ಚಂದ್ರಣ್ಣ, ಎಸ್‌ಬಿಎಂ ನಿವೃತ್ತ ಅಧಿಕಾರಿ ಅಜಿತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಎಂ.ಜಿ. ಶ್ರೀಕಾಂತ್, ರಾಜಶೇಖರ ಸಕ್ಕಟ್ಟು, ಅಶೋಕ್, ವಸಂತ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.