ADVERTISEMENT

ಕೋಳಿ ಸಾಕಾಣಿಕೆದಾರನಿಗೆ ಹಕ್ಕಿಜ್ವರದ ಬರೆ

ಮಾರುಕಟ್ಟೆಯಲ್ಲಿ ಕಡಿಮೆಯಾಗದ ದರ l ಗ್ರಾಹಕನಿಗೆ ಸಿಗದ ಲಾಭ

ಬಾಲಕೃಷ್ಣ ಪಿ.ಎಚ್‌
Published 18 ಜನವರಿ 2021, 1:55 IST
Last Updated 18 ಜನವರಿ 2021, 1:55 IST
ನಿಟುವಳ್ಳಿಯ ಚಿಕನ್ ಸೆಂಟರ್
ನಿಟುವಳ್ಳಿಯ ಚಿಕನ್ ಸೆಂಟರ್   

ದಾವಣಗೆರೆ: ಹಕ್ಕಿಜ್ವರದ ಗುಮ್ಮ ಕೋಳಿ ಸಾಕಾಣಿಕೆದಾರರಿಗಷ್ಟೇ ಹೊಡೆತ ನೀಡಿದೆ. ಮಾರುಕಟ್ಟೆಯಲ್ಲಿ ಮಾತ್ರ ಕೋಳಿ ದರ ಕಡಿಮೆಯಾಗಿಲ್ಲ. ದಲ್ಲಾಳಿಗಳು ಶ್ರಮವಿಲ್ಲದೇ ಲಾಭ ಹೊಡೆಯುತ್ತಿದ್ದಾರೆ.

ಹಕ್ಕಿಜ್ವರ ಬರುವ ಮೊದಲು ಮಾಂಸದ ಕೋಳಿಗೆ ಕೆ.ಜಿ.ಗೆ ₹ 90 ಇತ್ತು. ಕೇರಳ ಸಹಿತ ಕೆಲವು ರಾಜ್ಯಗಳಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿದೆ ಎಂಬ ಸುದ್ದಿ ಬರುತ್ತಿದ್ದಂತೆ ಮಾಂಸದ ಕೋಳಿ ದರ ಒಮ್ಮೆಲೆ ₹ 50ಕ್ಕೆ ಇಳಿದಿತ್ತು. ಭಾನುವಾರ ₹ 55 ಇತ್ತು. ಇದು ಕೋಳಿ ಸಾಕಾಣಿಕೆದಾರರಿಗೆ ಸಿಗುವ ದರ. ಆದರೆ ಗ್ರಾಹಕರಿಗೆ ಈ ಕಡಿಮೆ ದರದ ಲಾಭ ಸಿಗುತ್ತಿಲ್ಲ. ಗ್ರಾಹಕರು ಇಡಿ ಕೋಳಿಗೆ ಕೆ.ಜಿ.ಗೆ ₹ 120ರಿಂದ₹ 130 ಕೊಡಬೇಕು. ವಿತ್‌ ಸ್ಕಿನ್‌ ಮಾಂಸ ಬೇಕಿದ್ದರೆ ₹ 150ರಿಂದ ₹ 160 ನೀಡಬೇಕು. ವಿತ್‌ಔಟ್‌ ಸ್ಕಿನ್‌ ಆದರೆ ಮತ್ತೆ ₹ 20 ಜಾಸ್ತಿ ನೀಡಬೇಕು.

‘ಕೋಳಿ ಸಾಕಣೆ ಮಾಡಲು ಕಷ್ಟ ಪಡುವವರು ನಾವು. ಆದರೆ ಎಲ್ಲೇ ಯಾವುದೇ ರೋಗ ಬಂದರೂ ಮೊದಲು ಅದರ ಹೊಡೆತ ಬೀಳುವುದು ನಮಗೇ ಆಗಿದೆ. ಈಗ ಹಕ್ಕಿಜ್ವರ ಎಲ್ಲೋ ಬಂತು ಎಂದು ಇಲ್ಲಿ ದರ ಇಳಿಸಲಾಗಿದೆ. ನಮಗೆ ಆದ ನಷ್ಟ ಕೋಳಿ ಮಾಂಸ ತಿನ್ನುವವರಿಗಾದರೂ ಲಾಭ ಆಗುತ್ತದೆಯೇ ಎಂದು ನೋಡಿದರೆ ಅದೂ ಇಲ್ಲ. ಅವರಿಗೆ ಯಾವುದೇ ದರ ಇಳಿಕೆಯಾಗಿಲ್ಲ. ದಲ್ಲಾಳಿಗಳು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮಧ್ಯ ಕರ್ನಾಟಕ ಕೋಳಿ ಸಾಕಾಣಿಕೆದಾರರ ಹಾಗೂ ಮಾರಾ ಟಗಾರರ ಸಹಕಾರ ಸಂಘದ ನಿರ್ದೇಶಕ ಮಲ್ಲಾಪುರ ಒ. ದೇವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮಾಂಸ ಬಜಾರ್‌ ಮಾಡಿ: ದಲ್ಲಾಳಿಗಳ ಹಿಡಿತ ತಪ್ಪಿಸಿ ಕೋಳಿ ಸಾಕುವ ರೈತ ಮತ್ತು ತಿನ್ನುವ ಗ್ರಾಹಕ ಇಬ್ಬರಿಗೂ ಲಾಭ ಉಂಟಾಗಬೇಕಿದ್ದರೆ ಮಾಂಸ ಬಜಾರ್‌ ಮಾಡಬೇಕು. ರೈತರಿಂದ ಗ್ರಾಹಕರಿಗೆ ನೇರ ಮಾರಾಟದ ವ್ಯವಸ್ಥೆ ತರಬೇಕು. ಅದಕ್ಕೆ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾಂಸ ಮಳಿಗೆಗಳನ್ನು ತೆರೆಯಬೇಕು. ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಆದ ರೀತಿಯಲ್ಲಿಯೇ ಕೋಳಿಯೂ ಮಾರಾಟವಾಗಬೇಕು.

ಅದಕ್ಕಾಗಿ ಮಾಂಸ ಬಜಾರ್‌ ಮಾಡಿ ಎಂದು ಎಂಟು ವರ್ಷಗಳಿಂದ ಮನವಿ ಮಾಡಿಕೊಂಡು ಬಂದಿದ್ದರೂ ಸರ್ಕಾರ ದಿಂದ ಸ್ಪಂದನ ಸಿಕ್ಕಿಲ್ಲ. ರೈತರ ನೆರವಿಗೆ ಧಾವಿಸಿಲ್ಲ ಎಂದು ಮಲ್ಲಾಪುರ ದೇವರಾಜ್‌ ದೂರಿದರು. ‘ನೇರ ಮಾರುಕಟ್ಟೆ ಇದ್ದಿದ್ದರೆ ನಾವು ₹ 55ರ ಬದಲು ₹ 75ಕ್ಕೆ ಮಾರಾಟ ಮಾಡುತ್ತಿದ್ದೆವು. ನಮಗೆ ₹ 20 ಆದರೂ ಉಳಿಯುತ್ತಿತ್ತು. ಜತೆಗೆ ಗ್ರಾಹ ಕನಿಗೂ ₹ 150 ಕೊಡುವ ಬದಲುಅದರ ಅರ್ಧ ದರಕ್ಕೆ ಸಿಗುವುದರಿಂದ ಅವನೂ ಒಂದು ಕೆ.ಜಿ. ಬದಲು 2 ಕೆ.ಜಿ. ಒಯ್ಯುತ್ತಿದ್ದ. ಅವನಿಗೂ ಲಾಭವಾ ಗುತ್ತಿತ್ತು’ ಎಂಬುದು ಅವರ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.