ಸಂತೇಬೆನ್ನೂರು (ದಾವಣಗೆರೆ): ರಾಜ್ಯದ ವೀರಶೈವ ಲಿಂಗಾಯತ ಸಮುದಾಯವು ದಾವಣಗೆರೆ, ಶಿವಮೊಗ್ಗ ಹಾಗೂ ಬೀದರ್‌ನ ಮೂರು ಕುಟುಂಬಗಳ ಕಪಿಮುಷ್ಟಿಯಲ್ಲಿದೆ. ರಾಜಕೀಯ ಲಾಭಕ್ಕಾಗಿ ಸಮುದಾಯದ ಹಿತಾಸಕ್ತಿ ಬಲಿಕೊಡುವ ಕೆಲಸವನ್ನು ಒಗ್ಗೂಡಿ ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ಬಸವೇಶ್ವರ ವಿನಾಯಕ ಗೆಳೆಯರ ಬಳಗ ಬುಧವಾರ ಹಮ್ಮಿಕೊಂಡಿದ್ದ ‘ಧರ್ಮ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕುಟುಂಬಗಳ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವ – ಲಿಂಗಾಯತರು ಹಿಂದೂ ಎಂದು ಬರೆಯಿಸಬೇಡಿ’ ಎಂಬ ಈಶ್ವರ ಖಂಡ್ರೆ ನಿರ್ಧಾರ ಏಕಪಕ್ಷೀಯವಾಗಿದೆ. ‘ವೀರಶೈವ–ಲಿಂಗಾಯತರು ಒಗ್ಗೂಡಿ ಹಿಂದೂ ಧರ್ಮ ರಕ್ಷಿಸಬೇಕು’ ಎಂಬ ಒತ್ತಾಯ ಕೂಡ ರಾಜಕೀಯ ಪ್ರೇರಿತವಾಗಿದೆ. ಜನರಿಗೆ ಇಂತಹ ಸಲಹೆ ನೀಡುವುದಕ್ಕೂ ಮುನ್ನ ನಿಮ್ಮ ಧರ್ಮ ಯಾವುದು ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಆಗ್ರಹಿಸಿದರು.
‘ಭಾರತದಲ್ಲಿ 6 ಧರ್ಮಗಳು ಮಾತ್ರ ಅಧಿಕೃತ. ವೀರಶೈವ– ಲಿಂಗಾಯತ ಅಧಿಕೃತ ಧರ್ಮವಲ್ಲ. ವೀರಶೈವ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಹೊಂದಾಣಿಕೆ ರಾಜಕಾರಣದಲ್ಲಿ ಪ್ರಾಮಾಣಿಕತೆ ಮರೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.