ADVERTISEMENT

ಕನ್ನಡದ ಕೆಲಸಕ್ಕೆ ಯುವಜನರ ಹಚ್ಚಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎನ್‌.ಟಿ. ಯರ‍್ರಿಸ್ವಾಮಿ ಕರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 3:44 IST
Last Updated 2 ಮಾರ್ಚ್ 2021, 3:44 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಎನ್ ಟಿ ಯರ್ರಿಸ್ವಾಮಿ ಹಾಗೂ ಅವರ ಪತ್ನಿ ಸಾವಿತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷ ಮನು ಬಳಿಗಾರ ಅವರು ಸನ್ಮಾನಿಸಿದರು. ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕಿ, ಲೇಖಕರಾದ ಎಸ್ ಓಂಕಾರಯ್ಯ ತವನಿಧಿ, ಜೆ ಸಿ ಮಂಜುನಾಥ್ ಹುಲ್ಲೇಹಾಳ್ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಎನ್ ಟಿ ಯರ್ರಿಸ್ವಾಮಿ ಹಾಗೂ ಅವರ ಪತ್ನಿ ಸಾವಿತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷ ಮನು ಬಳಿಗಾರ ಅವರು ಸನ್ಮಾನಿಸಿದರು. ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕಿ, ಲೇಖಕರಾದ ಎಸ್ ಓಂಕಾರಯ್ಯ ತವನಿಧಿ, ಜೆ ಸಿ ಮಂಜುನಾಥ್ ಹುಲ್ಲೇಹಾಳ್ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌, ಗ್ಯಾಜೆಟ್‌, ಕಂಪ್ಯೂಟರ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್, ಟ್ವಿಟರ್‌ಗಳನ್ನು ಬೆರಳ ತುದಿಯಲ್ಲಿ ಇಟ್ಟುಕೊಂಡಿರುವ ಯುವಜನರನ್ನು ಕನ್ನಡದ ಕೆಲಸಕ್ಕೆ ಹಚ್ಚುವ ಕಾರ್ಯವಾಗಬೇಕು ಎಂದು ಹಿರಿಯ ಸಾಹಿತಿ ಎನ್‌,ಟಿ. ಎರ‍್ರಿಸ್ವಾಮಿ ಕರೆ ನೀಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಅವರು ಸೋಮವಾರ ಮಾತನಾಡಿದರು.

ಮೊದಲ ಪಾಠಶಾಲೆಯಾದ ಮನೆಯಲ್ಲೇ ಕನ್ನಡ ಕಂಪಿಲ್ಲ. ಮೊದಲ ಗುರುಗಳಾದ ತಾಯಿ, ತಂದೆಯನ್ನೇ ಮಮ್ಮಿ, ಡ್ಯಾಡಿ ಎಂದು ಕರೆಯುವ ಪರಿಸ್ಥಿತಿ ಇದೆ. ಇದುವೇ ಹೆತ್ತವರಿಗೂ ಖುಷಿಯ ವಿಚಾರವಾಗಿರುವುದು ದುರ್ದೈವ ಎಂದು ವಿಷಾದಿಸಿದರು.

ADVERTISEMENT

ಇಂಗ್ಲಿಷ್‌ ಎಂಬ ಪರಭಾಷಾ ಮೋಹಿನಿಯ ಸಮ್ಮೋಹನದಿಂದ ಕನ್ನಡ ತಾಯಿ ಬಡವಾಗುತ್ತಿದ್ದಾಳೆ. ಕನ್ನಡದ ಶಾಲೆಗಳು ಅವನತಿಯತ್ತ ಸಾಗುತ್ತಿವೆ. ನಮ್ಮ ಸಂಸ್ಕೃತಿ, ಪರಂಪರೆಯ ಬೇರುಗಳನ್ನು ಕತ್ತರಿಸುವ ಕೆಲಸವಾಗುತ್ತಿದೆ. ಕನ್ನಡ ಭಾಷೆ ಅಮ್ಮನ ಭಾಷೆ ಮಾತ್ರವಾಗದೇ ಅನ್ನದ ಭಾಷೆಯೂ ಆಗಬೇಕು. ಉದ್ಯೋಗ ನೀಡುವ ಭಾಷೆಯಾಗಬೇಕು. ರುಡ್‌ಸೆಟ್‌ನಂಥ ಸಂಸ್ಥೆಗಳು ಪ್ರತಿ ತಾಲ್ಲೂಕಿನಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಉದ್ಯಮದಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಸಂವಿಧಾನಾತ್ಮಕ ರಕ್ಷಣೆ ಇದೆ. ಆದರೆ ಅದಾಗುತ್ತಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದ್ದರೂ ಕನ್ನಡಕ್ಕೆ ಸ್ವಾಯತ್ತೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜನವರಿಯಲ್ಲೇ ಕನ್ನಡ ಸಪ್ತಾಹ ಕಡ್ಡಾಯವಾಗಿ ಆಚರಿಸಬೇಕು. ರಾಜಕೀಯ ಸ್ಥಿತ್ಯಂತರದಿಂದ ವಿಶ್ವಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆದಿಲ್ಲ. ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆ ಮತ್ತೆ ಮ್ಯಾಂಚಸ್ಟರ್‌ ನಗರ ಎಂಬ ವೈಭವಕ್ಕೆ ಮರಳಲು ಜವಳಿ ಪಾರ್ಕ್‌ಗಳನ್ನು ಆರಂಭಿಸಬೇಕು. ಎಲ್ಲ ಮಾಹಿತಿಗಳು ಕನ್ನಡದಲ್ಲೇ ದೊರೆಯುವಂತಾಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳಾಗಬೇಕು. 24 ಗಂಟೆ ಕಾರ್ಯನಿರ್ವಹಿಸುವ ಗ್ರಂಥಾಲಯಗಳು ನಿರ್ಮಾಣವಾಗಬೇಕು. ಬ್ಯಾಂಕಿಂಗ್‌ ಮತ್ತಯ ರೈಲ್ವೆ ಉಚಿತ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪಿಸಬೇಕು. ಪತ್ರಿಕಾಭವನ ಆಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.