ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆ: ‘ಯುವಕರು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಾಮೂಹಿಕ ಹೋರಾಟ ನಡೆಸಬೇಕು. ನಿಮ್ಮೊಂದಿಗೆ ಸಂಘಟನೆಯು ಸದಾ ಇರುತ್ತದೆ’ ಎಂದು ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ವೈ.ಸಂಪಂಗಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮನೆಮನೆಗೆ ಸಂಘಟನೆಯನ್ನು ಕೊಂಡೊಯ್ಯಬೇಕು. ಸಂಘಟನೆಯು ಜಾತಿ ಆಧರಿತವಾಗಬಾರದು. ಮಹನೀಯರು, ಶರಣರು, ಸಂತರು ಸಮಾನತೆಯನ್ನು ಸಾರಿದ್ದಾರೆ. ಅವರ ಆದರ್ಶದಲ್ಲಿ ಸಾಗಬೇಕು. ಸಂಘಟನೆಯು ಶೋಷಿತರ ಪರ ನಿಲ್ಲುತ್ತದೆ. ರಾಜಕೀಯ ಶಕ್ತಿಯಿಂದ ಸಮುದಾಯದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಎಲ್ಲ ಜಾತಿ, ಜನಾಂಗದವರೂ ಜಿಲ್ಲಾ ಸಮಿತಿಯಲ್ಲಿದ್ದೀರಿ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.
‘ಸಂಘಟನೆಯು ತುಳಿತಕ್ಕೆ ಒಳಗಾದವರ ಪರ ಕೆಲಸ ಮಾಡಲಿ. ದೇಶದಲ್ಲಿ ಸಂಪತ್ತು ಸರಿಯಾಗಿ ಹಂಚಿಕೆಯಾಗಿಲ್ಲ. ಸರ್ವರಿಗೂ ಸಮಪಾಲು– ಸಮಬಾಳು ತತ್ವ ಪಾಲನೆಯಾಗಲಿ. ಎಡ, ಬಲ ಬಿಟ್ಟು ಮಧ್ಯ ರಂಗದಲ್ಲಿ ಸಾಗಬೇಕು. ಯಾರೂ ನಮ್ಮನ್ನು ಯಾಮಾರಿಸದಂತೆ ಚಿಂತನೆ ಬೆಳೆಸಿಕೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಹೇಳಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮುಖಂಡರಾದ ಚಂದ್ರಶೇಖರ್ ಪೂಜಾರ್, ಧನಂಜಯ ಕಡ್ಲೇಬಾಳ, ನರಸಿಂಹಮೂರ್ತಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಗುರುಮೂರ್ತಿ, ಪಂಜು ಪೈಲ್ವಾನ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
‘ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿಲ್ಲ. ಅವರೇ ಸುಳ್ಳು ಕರೆಗಳನ್ನು ಮಾಡಿಸುತ್ತಿರಬಹುದು’ ಎಂದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ನ.26ರ ವರೆಗೆ ಮಾತ್ರ ಇರುತ್ತದೆ. 26ರ ನಂತರ ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯುವುದು ಸೂರ್ಯಚಂದ್ರ ಇರುವಷ್ಟೇ ಸತ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.