ಜಗಳೂರು: ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರು ತಾಲ್ಲೂಕಿನ ವಿವಿಧ ವಸತಿ ಶಾಲೆಗಳು, ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಗೆ ತೆರಳಿ, ಅಲ್ಲಿನ ಸ್ವಸಹಾಯ ಸಂಘದ ಮಹಿಳೆಯರು ನಿರ್ವಹಣೆ ಮಾಡುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕಾಮಗಾರಿಗಳನ್ನು ಪರಿಶೀಲಿಸಿದರು. ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ವಾಹನದ ಮಹಿಳಾ ಚಾಲಕಿಯ ಅಹವಾಲು ಆಲಿಸಿದರು.
ತೋರಣಗಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದ ಪಾಠ ಓದಿಸುವ ಮೂಲಕ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ದೊಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಠ್ಠಲರಾವ್, ‘ಸರ್ಕಾರವು ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧನೆ ಮಾಡಬೇಕು. ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ತರಬೇತಿ ಕೊಡುವ ಕೆಲಸ ಆಗಬೇಕು’ ಎಂದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಾರ್ಯಕರ್ತೆಯರು ಸಮರ್ಪಕವಾಗಿ ಅಕ್ಷರಾಭ್ಯಾಸ ಮಾಡಿಸಬೇಕು. ಆಗ ಎಳವೆಯಲ್ಲಿಯೇ ಮಕ್ಕಳಲ್ಲಿ ಕಲಿಕಾ ಪ್ರಕ್ರಿಯೆ ಶುರುವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾದಿಕ್ ಉಲ್ಲಾ, ಪಿಡಿಒಗಳಾದ ಮರುಳಸಿದ್ದಪ್ಪ, ಕೋಟ್ರೇಶ್, ಅರವಿಂದ್, ಎಂಜಿನಿಯರ್ ಸಚಿನ್, ಮರಿಯಪ್ಪ, ಮಹಾಂತೇಶ್ ಹಾಜರಿದ್ದರು.
ಹಿರೇಮಲ್ಲನ ಹೊಳೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅವರೇ ಸ್ವತಃ ವಾಹನ ಚಲಾಯಿಸುತ್ತಿದ್ದಾರೆ. ಇದು ಅವರ ಬದ್ಧತೆ ತೋರಿಸುತ್ತದೆಗಿತ್ತೆ ಮಾಧವ ವಿಠ್ಠಲರಾವ್ ಜಿಲ್ಲಾ ಪಂಚಾಯಿತಿ ಸಿಇಒ
ಹಿಂದಿ ಓದಲು ಕಷ್ಟಪಟ್ಟ ವಿದ್ಯಾರ್ಥಿ
ದೊಣೆಹಳ್ಳಿ ಹೊಸಟ್ಟಿ ಗ್ರಾಮದ ಸಮೀಪವಿರುವ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ಸಿಇಒ ಕನ್ನಡ ಇಂಗ್ಲಿಷ್ ಹಿಂದಿ ಪಠ್ಯಗಳನ್ನು ವಿದ್ಯಾರ್ಥಿಗಳಿಂದ ಓದಿಸಿದರು. ಹಿಂದಿ ಪಾಠ ಓದಲು ವಿದ್ಯಾರ್ಥಿಯೊಬ್ಬ ಕಷ್ಟಪಟ್ಟಿದ್ದನ್ನು ಕಂಡು ಶಿಕ್ಷಕರನ್ನು ಅವರು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.