ADVERTISEMENT

31ಕ್ಕೆ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 12:04 IST
Last Updated 28 ಡಿಸೆಂಬರ್ 2018, 12:04 IST
ಕೆ.ಆರ್‌. ಜಯಶೀಲಾ
ಕೆ.ಆರ್‌. ಜಯಶೀಲಾ   

ದಾವಣಗೆರೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇದೇ 31ರಂದು ರಾಜೀನಾಮೆ ಸಲ್ಲಿಸುವುದಾಗಿ ಕೆ.ಆರ್‌. ಜಯಶೀಲಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆಯಾಗುತ್ತಿರುವುದರಿಂದ ರಾಜೀನಾಮೆ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷದ ಮುಖಂಡರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳನ್ನು ಹರಪನಹಳ್ಳಿಗೆ ಕೊಟ್ಟಿದ್ದರು. ಇದೇ 24ರಂದು ಉಪಾಧ್ಯಕ್ಷೆ ರಶ್ಮಿ ರಾಜಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರ ನನಗೆ ಸಲ್ಲಿಸಿದ್ದರು’ ಎಂದು ತಿಳಿಸಿದರು.

ADVERTISEMENT

‘ಸಿಇಒ ವಿರುದ್ಧ ಎಸಿಬಿಗೆ ದೂರು ನೀಡಿರುವುದಕ್ಕೂ ರಾಜೀನಾಮೆಗೂ ಸಂಬಂಧವಿಲ್ಲ. ಮೊದಲೇ ತೀರ್ಮಾನ ಆಗಿದ್ದಂತೆ ಮೂರು ತಿಂಗಳು ಅಧಿಕಾರ ನಡೆಸಿದ ಬಳಿಕ ರಾಜೀನಾಮೆ ನೀಡಬೇಕಾಗಿತ್ತು. ಈಗಾಗಲೇ ವಿಳಂಬವಾಗಿದೆ. ಪಕ್ಷದ ಶಿಸ್ತಿಗೆ ಎಲ್ಲರೂ ತಲೆಬಾಗಲೇಬೇಕು. ವರಿಷ್ಠರ ಆದೇಶದಂತೆ ರಾಜೀನಾಮೆ ಕೊಡುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರಿಷ್ಠರು ಆಕ್ಷೇಪಿಸಿಲ್ಲ:‘ಎಸಿಬಿಗೆ ದೂರು ನೀಡಿದ ವಿಚಾರದಲ್ಲಿ ಪಕ್ಷ ನಿಮ್ಮನ್ನು ಬೆಂಬಲಿಸಲಿಲ್ಲವೇ’ ಎಂಬ ಪ್ರಶ್ನೆಗೆ, ‘ಆ ರೀತಿ ಏನೂ ಇಲ್ಲ. ಎಲ್ಲ ಸದಸ್ಯರಿಗೂ ತನಿಖೆ ನಡೆಯಲಿ ಎಂದೇ ಇದೆ. ನನಗೆ ಬೆಂಬಲ ಸಿಕ್ಕಿಲ್ಲ ಎಂದೇನೂ ಇಲ್ಲ. ರೈತ ಸಂಘದವರು, ತಾಲ್ಲೂಕು ಪಂಚಾಯಿತಿಗಳಲ್ಲೂ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಪಕ್ಷದ ವರಿಷ್ಠರು ಆಕ್ಷೇಪ ವ್ಯಕ್ತಪಡಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಹೋರಾಟದಿಂದ ಹಿಂದೆ ಸರಿಯುತ್ತೀರಾ?’ ಎಂಬ ಪ್ರಶ್ನೆಗೆ, ‘ಅದನ್ನೆಲ್ಲ ಈಗಲೇ ಹೇಳಲು ಆಗುವುದಿಲ್ಲ. ನಾನು ದೂರು ಕೊಟ್ಟಿದ್ದೇನೆ. ತನಿಖೆ ನಡೆಯುತ್ತದೆ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.