ADVERTISEMENT

ಅಂಗನವಾಡಿಗಳಿಗಷ್ಟೇ `ಕ್ಷೀರ ಭಾಗ್ಯ'

ನೀತಿಸಂಹಿತೆ ಬಿಸಿ: ಸರಳವಾಗಿ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 7:29 IST
Last Updated 2 ಆಗಸ್ಟ್ 2013, 7:29 IST

ಹುಬ್ಬಳ್ಳಿ: `ಕ್ಷೀರ ಭಾಗ್ಯ' ಯೋಜನೆಯ ಅಡಿ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮವು ಜಿಲ್ಲೆಯಲ್ಲಿ ಗುರುವಾರ ಆರಂಭಗೊಂಡಿತು. ಆದರೆ ಶಾಲಾ ವಿದ್ಯಾರ್ಥಿಗಳಿಗೆ ಹಾಲು ಕುಡಿಯುವ ಭಾಗ್ಯ ಒದಗಿ ಬರಲಿಲ್ಲ.

ಜಿಲ್ಲೆಯಲ್ಲಿ ಒಟ್ಟು 1467 ಅಂಗನವಾಡಿಗಳಲ್ಲಿನ ಮಕ್ಕಳಿಗೆ ಹಾಲಿನ ಪುಡಿಯನ್ನು ಬೆರೆಸಿ ಸಿದ್ಧಪಡಿಸಿದ ಹಾಲನ್ನು ನೀಡಲಾಯಿತು. ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ ಇದೆ. ಈ ಹಿನ್ನೆಲೆಯಲ್ಲಿ ಹಾಲು ವಿತರಣೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಯಾವ ಅಂಗನವಾಡಿಗಳಲ್ಲೂ ಸಮಾರಂಭಗಳು ನಡೆಯಲಿಲ್ಲ.

ಪ್ರತಿ ಮಗುವಿಗೆ ತಲಾ 18 ಗ್ರಾಂ ಹಾಲಿನ ಪುಡಿಯನ್ನು 150 ಎಂಎಲ್ ನೀರು ಹಾಗೂ 10 ಗ್ರಾಂ ಸಕ್ಕರೆಯೊಂದಿಗೆ  ಬೆರೆಸಿ ನೀಡಲಾಯಿತು. ಮಕ್ಕಳು ಮೊದಲು ಹಾಲು, ನಂತರ ಊಟ ಸವಿದು ಮನೆಗಳತ್ತ ನಡೆದರು. ಧಾರವಾಡ ಹಾಲು ಒಕ್ಕೂಟವು ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಹಾಲಿನ ಪುಡಿಯನ್ನು ವಿತರಿಸುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಸದ್ಯ ಅಂಗನವಾಡಿಗಳಿಗಷ್ಟೇ ಹಾಲಿನಪುಡಿ ವಿತರಣೆ ಮಾಡಿದೆ. 

ವಿದ್ಯಾರ್ಥಿಗಳು ಅವಕಾಶ ವಂಚಿತ: ರಾಜ್ಯದ ಬಹುತೇಕ ಜಿಲ್ಲೆಗಳ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಕಾರ್ಯವು ಗುರುವಾರದಿಂದ ಆರಂಭಗೊಂಡಿದ್ದರೂ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಈ ಕಾರ್ಯಕ್ಕೆ ಚಾಲನೆ ದೊರೆಯಲಿಲ್ಲ. ಇದರಿಂದ ಜಿಲ್ಲೆಯ 1087 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 2.10 ಲಕ್ಷ ವಿದ್ಯಾರ್ಥಿಗಳು ಸದ್ಯ ಯೋಜನೆಯಿಂದ ವಂಚಿತರಾದರು.

ಜಿಲ್ಲೆಯಲ್ಲಿ ಇಸ್ಕಾನ್ ಹಾಗೂ ಅದಮ್ಯ ಚೇತನ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ವಿತರಣೆ ಮಾಡುತ್ತಿವೆ. ಜಿಲ್ಲೆಯಲ್ಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಕಾರ್ಯವನ್ನು ಇದೇ ಸಂಸ್ಥೆಗಳಿಗೆ ವಿತರಿಸಲು ನಿರ್ಧರಿಸಲಾಗಿತ್ತು. ಹಾಲು ವಿತರಣೆಗೆ ಅವಶ್ಯವಾಗಿರುವ ಪರಿಕರ ಹಾಗೂ ಸಿಬ್ಬಂದಿಯ ವ್ಯವಸ್ಥೆ ಮಾಡಿಕೊಳ್ಳಲು ಈ ಸಂಸ್ಥೆಗಳು ಕಾಲಾವಕಾಶ ಕೋರಿವೆ.

ವಿದ್ಯಾರ್ಥಿಗಳಿಗೆ ಹಾಲು ವಿತರಿಸಲು ಇನ್ನೂ 15-30 ದಿನ ಬೇಕಾಗಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.