ADVERTISEMENT

`ಅಂಗವಿಕಲರಿಗೆ ತರಬೇತಿ ಅವಶ್ಯ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:24 IST
Last Updated 4 ಡಿಸೆಂಬರ್ 2012, 6:24 IST

ಹುಬ್ಬಳ್ಳಿ: ಸರಿಯಾದ ಸಮಯದಲ್ಲಿ ಸರಿಯಾದ ತರಬೇತಿ ನೀಡುವುದರಿಂದ ಬುದ್ಧಿಮಾಂದ್ಯತೆ ಸೇರಿದಂತೆ ವಿವಿಧ ಬಗೆಯ ಅಂಗವೈಕಲ್ಯವುಳ್ಳ ಮಕ್ಕಳನ್ನು ಸಬಲರನ್ನಾಗಿಸಲು ಸಾಧ್ಯ' ಎಂದು ಸುಧಾ ಆರ್.ಎನ್. ಶೆಟ್ಟಿ ರೋಟರಿ ವಿಶೇಷ ಮಕ್ಕಳ ಶಾಲೆಯ ನಿರ್ದೇಶಕಿ ವೈಶಾಲಿ ಗೋರೆ ಅಭಿಪ್ರಾಯಪಟ್ಟರು.

ಕಿಮ್ಸನ ಆಶಾಕಿರಣ ಸಂಘಟನೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು, ಬುದ್ಧಿಮಾಂದ್ಯವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲ. ಬದಲಾಗಿ ತರಬೇತಿಯಿಂದ ಉತ್ತಮ ಫಲಿತಾಂಶ ಸಾಧ್ಯವಿದೆ ಎಂದರು. ಇಂತಹ ಮಕ್ಕಳ ಪೋಷಕರಿಗೆ ಈ ಅಂಶವನ್ನು ಮನವರಿಕೆ ಮಾಡುವ ಅಗತ್ಯವಿದ್ದು, ಕಿಮ್ಸ ವೈದ್ಯರು ಅದಕ್ಕೆ ಸಹಕಾರ ನೀಡುವಂತೆ ಕೋರಿದರು.

ಅಂಗವಿಕಲರಿಗೆ ಪ್ರಮಾಣಪತ್ರ ನೀಡಲು ಇರುವ ಪ್ರಕ್ರಿಯೆ ಸರಳಗೊಳಿಸಬೇಕೆಂದರು. ಅಂಗವಿಕಲರಿಗೆ ಕನಿಕರ ತೋರಿಸುವುದನ್ನು ಬಿಟ್ಟು ಎಲ್ಲರಂತೆ ಸಮಾನವಾಗಿ ಬದುಕುವ ಅವಕಾಶ ನೀಡಬೇಕು ಎಂದು ಕಿಮ್ಸ ಪ್ರಾಚಾರ್ಯ ಡಾ. ಯು.ಎಸ್. ಹಂಗರಗ ಹೇಳಿದರು.

ಪತ್ರಕರ್ತೆ ಮಂಜುಳಾ ಶಿರಕೋಳ, ಬಹುಮುಖ ಪ್ರತಿಭೆ ರವಿ ಹಿರೇಮಠ, ಸರ್ವ ಶಿಕ್ಷಣ ಅಭಿಯಾನ ಶಿಕ್ಷಕ ಪ್ರತೀಕ್ ಕೆಳಗೇರಿ, ಕ್ರೀಡಾಪಟು ರವಿ ವಾಲಿ, ಉದ್ಯೋಗಿ ಬಸವರಾಜು ಹಾಗೂ ಅಂಗವಿಕಲರ ಏಳಿಗೆಗೆ ಶ್ರಮಿಸುತ್ತಿರುವ ಡಾ. ಕೆನತ್ ಅವರನ್ನು ಸನ್ಮಾನಿಸಲಾಯಿತು.

ಕಿಮ್ಸ ವೈದ್ಯಕೀಯ ಅಧೀಕ್ಷಕ ಡಾ. ಬಿ. ವಿಜಯಚಂದ್ರ, ಆರ್ಥಿಕ ಸಲಹೆಗಾರ ಕಿಟ್ಟಾ ನಾಯಕ್, ಆಶಾಕಿರಣ ಕಾರ್ಯದರ್ಶಿ ಡಾ. ಸುನಿಲ್ ಗೋಖಲೆ, ಡಾ. ಕಮ್ಮಾರ ಇತರರು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರಾದ ಡಾ. ಮರಿಲಿಂಗಪ್ಪ, ಡಾ. ಭವಾನಿ ಪ್ರಸಾದ್, ಮಂಜುನಾಥ, ಗೀತಾ ಕುಲಕರ್ಣಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.