ADVERTISEMENT

ಅಂಗೈಯಲ್ಲಿ ಹುಬ್ಬಳ್ಳಿ, ಧಾರವಾಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 6:41 IST
Last Updated 9 ಅಕ್ಟೋಬರ್ 2017, 6:41 IST
ಆ್ಯಪ್‌ ಮುಖಪುಟ
ಆ್ಯಪ್‌ ಮುಖಪುಟ   

ಹುಬ್ಬಳ್ಳಿ: ಅವಳಿ ನಗರಗಳ ಪ್ರಮುಖ ಆಸ್ಪತ್ರೆಗಳು, ಪೊಲೀಸ್‌ ಠಾಣೆಗಳು, ಹೋಟೆಲ್‌ಗಳು, ಕಾಲೇಜುಗಳು, ಪಬ್‌ ಮತ್ತು ಬಾರ್‌ಗಳು ಬಗ್ಗೆ ಮಾಹಿತಿ ತಿಳಿಯಲು ಇನ್ನು ಮುಂದೆ ಅಲ್ಲಿ, ಇಲ್ಲಿ ತಡಕಾಡುವ ಅಗತ್ಯವಿಲ್ಲ. ಇವೆಲ್ಲ ಲಭ್ಯವಿರುವ ಆ್ಯಪ್‌ವೊಂದನ್ನು ಗೌರೀಶ ಮಜ್ಜಗಿ ತಯಾರು ಮಾಡಿದ್ದಾರೆ.

mycitie ಎನ್ನುವ ಹೆಸರಿನ ಆ್ಯಪ್‌ ನಾಲ್ಕು ಎಂ.ಬಿ. ಇದೆ. ‘ಬೆಟಾ’ ಮಾದರಿಯಲ್ಲಿ ಸಿದ್ಧಗೊಂಡಿರುವ ಆ್ಯಪ್‌ನಲ್ಲಿ ನಗರದ ಮತ್ತು ಸುತ್ತಮುತ್ತಲಿರುವ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಸಿನಿಮಾ ಮಂದಿರಗಳು, ಆಶ್ರಮಗಳು, ಶಾಲೆಗಳ ಬಗ್ಗೆ ಮಾಹಿತಿ ಇದೆ. ಆಸ್ಪತ್ರೆಗಳ ಬಗ್ಗೆ ತಿಳಿಯಲು ಹೋದಾಗ ಆಯುರ್ವೇದಿಕ್‌, ಚರ್ಮರೋಗ ತಜ್ಞರು, ದಂತ ತಪಾಸಣೆ ವೈದ್ಯರು ಹೀಗೆ ಪ್ರತಿ ವಿಷಯದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕೊಟ್ಟಿದ್ದಾರೆ.

ಆಸ್ಪತ್ರೆ, ಹೋಟೆಲ್‌, ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕ ಅದು ಇರುವ ವಿಳಾಸ, ದೂರವಾಣಿ ಸಂಖ್ಯೆ, ನಿಗದಿತ ಸ್ಥಳಕ್ಕೆ ಹೇಗೆ ತಲುಪಬೇಕು ಎನ್ನುವುದರ ಬಗ್ಗೆ ಗೂಗಲ್ ಮ್ಯಾಪ್‌ ಮೂಲಕ ರಸ್ತೆ ತೋರಿಸುವ ಸೌಲಭ್ಯ ಕೂಡ ಇದರಲ್ಲಿದೆ.

ADVERTISEMENT

ನಗರದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನೃಪತುಂಗ ಬೆಟ್ಟ, ಸಂಜೀವಿನಿ ವನ, ಇಂದಿರಾಗಾಂಧಿ ಗ್ಲಾಸ್ ಹೌಸ್‌, ಚಂದ್ರಮೌಳೇಶ್ವರ ದೇವಸ್ಥಾನ, ಧಾರ್ಮಿಕ ಸ್ಥಳಗಳ ಪಟ್ಟಿಯಲ್ಲಿ ಸಿದ್ಧಾರೂಢ ಮಠ, ಕಾಳಿ ಮಂದಿರ, ಬನಶಂಕರಿ ದೇವಸ್ಥಾನ, ವಿಠ್ಠಲ ಹರಿ ಮಂದಿರ, ಡಿ.ಡಿ.ಎಂ. ಚರ್ಚ್‌, ಅಂಜುಮಾನ್‌ ಮಸೀದಿ, ಮೆಹಬೂಬ್‌ ದರ್ಗಾ ಇವೆ. ಇವೆಲ್ಲವೂ ನೀವಿರುವ ಸ್ಥಳದಿಂದ ಎಷ್ಟು ದೂರದಲ್ಲಿವೆ ಎನ್ನುವ ಮಾಹಿತಿ ಕೂಡ ಅಡಕವಾಗಿದೆ.

ನಿರುದ್ಯೋಗ ಕಲಿಸಿದ ಪಾಠ: ಹುಬ್ಬಳ್ಳಿಯ ಗೌರೀಶ್‌ ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನೌಕರಿಗಾಗಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅವರು ಯಾರ ಬಳಿ ಕೆಲಸ ಕೇಳದೇ ಆ್ಯಪ್‌ ತಯಾರು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮಾನ ಮನಸ್ಕ ಸ್ನೇಹಿತರ ಜೊತೆ ಸೇರಿ ‘ಫ್ರೆಶರ್ಸ್‌ ವರ್ಕ್‌ ಸ್ಪೇಸ್‌’ ಎನ್ನುವ ತಂಡ ಕಟ್ಟಿದ್ದಾರೆ.

‘ಎಂಜಿನಿಯರಿಂಗ್‌ ಕಲಿತು ಕೆಲಸಕ್ಕಾಗಿ ಕೈಕಟ್ಟಿ ನಿಲ್ಲುವ ಬದಲು ಸಮಾಜಮುಖಿ ಕೆಲಸ ಮಾಡಲು ಆ್ಯಪ್‌ಗಳನ್ನು ಸಿದ್ಧಪಡಿಸುತ್ತೇನೆ. ವೆಡ್ಡಿಂಗ್‌ ಇನ್ವಿಟೇಷನ್‌ ಎನ್ನುವ ಆ್ಯಪ್‌ ಅನ್ನು ಮೊದಲು ಸಿದ್ಧಪಡಿಸಿದ್ದೆ. ಅವಳಿ ನಗರದ ಮತ್ತು ಹೊರ ಊರುಗಳಿಂದ ಬರುವ ಜನರಿಗೆ ಸುಲಭವಾಗಿ ಊರಿನ ಬಗ್ಗೆ ತಿಳಿದುಕೊಳ್ಳಲು ಹೊಸ ಆ್ಯಪ್‌ ತಯಾರು ಮಾಡಿದ್ದೇನೆ’ ಎಂದು ಗೌರೀಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದಕ್ಕಾಗಿ ನಾಲ್ಕು ತಿಂಗಳು ಕೆಲಸ ಮಾಡಿದ್ದೇನೆ. ಅದರಲ್ಲಿ ಇರುವುದು ಶೇ 10ರಷ್ಟು ಮಾಹಿತಿ ಮಾತ್ರ. ಇನ್ನಷ್ಟು ಮಾಹಿತಿ ಸೇರಿಸಲು ಕೆಲಸ ಮಾಡುತ್ತಿದ್ದೇನೆ. ಸಾರ್ವಜನಿಕರು ಸಲಹೆಗಳನ್ನು ನೀಡಲು ಮುಕ್ತ ಅವಕಾಶವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆ್ಯಪ್‌ ಅಭಿವೃದ್ಧಿಪಡಿಸುತ್ತೇನೆ’ ಎಂದು ಅವರು ಹೇಳಿದರು.

ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ ಆ್ಯಂಡ್ರ್ಯಾಡ್‌ ಮೊಬೈಲ್‌ನಿಂದ ಪ್ಲೇ ಸ್ಟೋರ್‌ ಮೂಲಕ ಉಚಿತವಾಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ ಇನ್ನಷ್ಟು ಅಭಿವೃದ್ಧಿಪಡಿಸಲು ಗೌರೀಶ ಕೆಲಸ ಮಾಡುತ್ತಿದ್ದಾರೆ. ಅವರಿಗೆ gourishmajjagi@freshersworkspace.in ಸಲಹೆ ನೀಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.