ADVERTISEMENT

ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರಕ್ಕೆ ಎಪಿಎಂಸಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:45 IST
Last Updated 19 ಮಾರ್ಚ್ 2012, 3:45 IST

ಹುಬ್ಬಳ್ಳಿ: ನಿರೀಕ್ಷೆಯಂತೆ ಇಲ್ಲಿನ ಅಕ್ಕಿಹೊಂಡ ಮಾರುಕಟ್ಟೆಯ ಸ್ಥಳಾಂತರ ಕಾರ್ಯಕ್ಕೆ ಮುಹೂರ್ತ ಕೂಡಿ ಬಂದಿದ್ದು, ಏಪ್ರಿಲ್ 1ರಿಂದ ಅಕ್ಕಿಹೊಂಡದ ಸಗಟು ವ್ಯಾಪಾರ ತನ್ನ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಎಪಿಎಂಸಿ ಆಡಳಿತ, ವರ್ತಕರಿಗೆ ನೊಟೀಸ್ ಜಾರಿ ಮಾಡಿದೆ.

ಅಕ್ಕಿಹೊಂಡ ಪ್ರದೇಶದ ಸಗಟು ಮಾರುಕಟ್ಟೆ ಹಾಗೂ ಗಾಂಧಿ ಮಾರುಕಟ್ಟೆಯ ಮಾನ್ಯತೆಯನ್ನು ಈಗಾಗಲೇ ರದ್ದುಗೊಳಿಸಿರುವ ಎಪಿಎಂಸಿ ಅದನ್ನು ಅಘೋಷಿತ ಪ್ರದೇಶ ಎಂದು ಪರಿಗಣಿಸಿದ್ದು, ತಾತ್ಕಾಲಿಕ ನೆಲೆಯಲ್ಲಿ ಮಾರ್ಚ್ 31ರವರೆಗೆ ಅಕ್ಕಿ ಹೊಂಡದಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಿದೆ.

ಅಘೋಷಿತ ಪ್ರದೇಶದಲ್ಲಿ ವ್ಯಾಪಾರ ನಡೆಸುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ವರ್ತಕರಿಗೆ ನೀಡಿರುವ ನೊಟೀಸ್‌ನಲ್ಲಿ ಸ್ಪಷ್ಟಪಡಿಸಿರುವ ಎಪಿಎಂಸಿ ಆಡಳಿತ ಯಾವುದೇ ಕಾರಣಕ್ಕೂ ನಿಗದಿತ ದಿನದ ನಂತರ ಅಲ್ಲಿ ವ್ಯಾಪಾರ ಚಟುವಟಿಕೆ ನಡೆಸದಂತೆ ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಮೂಲ ಸೌಕರ್ಯ ಅಭಿವೃದ್ಧಿ:  ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರ ಕಾರ್ಯಕ್ಕೆ ಅಲ್ಲಿನ ವರ್ತಕರು ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಎಪಿಎಂಸಿ ಪ್ರಾಂಗಣದಲ್ಲಿ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲ ಎಂಬುದು ಅವರ ವಾದಕ್ಕೆ ಬಲ ನೀಡಿತ್ತು.

ರಾಜಕೀಯ ಒತ್ತಡ ಹಾಗೂ ಇನ್ನಿತರೆ ಪ್ರಭಾವಗಳ ಮೂಲಕ ಸ್ಥಳಾಂತರ ಕಾರ್ಯವನ್ನು ಮುಂದೂಡುತ್ತಾ ತನ್ನ ಆದೇಶಕ್ಕೆ ಕಿಮ್ಮತ್ತು ನೀಡದಿದ್ದ ಅಕ್ಕಿಹೊಂಡ ವರ್ತಕರ ಸಂಘದ ನಿಲುವಿಗೆ ಈ ಬಾರಿ ಅಂತ್ಯ ಹಾಡಲು ಎಪಿಎಂಸಿ ಆಡಳಿತ ಮುಂದಾಗಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು. ಅದಕ್ಕಾಗಿ ಅಮರಗೋಳದ ಪ್ರಾಂಗಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಿದ್ಧತೆ ನಡೆಸಿದೆ. ಅದರಂತೆ ರೂ 3 ಕೋಟಿ ವೆಚ್ಚದಲ್ಲಿ ವಿದ್ಯುದೀಕರಣ ಯೋಜನೆ ಹಾಗೂ 1 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಎಪಿಎಂಸಿ ಆವರಣದಲ್ಲಿ ತಾತ್ಕಾಲಿಕವಾಗಿ 10 ಲಕ್ಷ ಲೀಟರ್ ನೀರು ಸಂಗ್ರಹಣೆ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಕೊಳವೆ ಬಾವಿಗಳ ಮೂಲಕ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಲು ಎನ್ನುವ ಎಪಿಎಂಸಿ ಕಾರ್ಯದರ್ಶಿ ಪಾತಲಿಂಗಪ್ಪ, ಮುಂದಿನ ದಿನಗಳಲ್ಲಿ ನೃಪತುಂಗ ಬೆಟ್ಟದಿಂದ ಜಲಮಂಡಳಿಯ  ನೀರು ಪೂರೈಕೆ ಲೈನ್ ಅಳವಡಿಸುವ ಉದ್ದೇಶವಿದ್ದು, ಆಗ ಶಾಶ್ವತ ವ್ಯವಸ್ಥೆ ಮಾಡಲಾಗುವುದು. ವಿದ್ಯುದೀಕರಣ ಕಾಮಗಾರಿ ಮುಂದಿನ 15 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಎನ್ನುತ್ತಾರೆ.

ಅಕ್ಕಿಹೊಂಡದಿಂದ ಹಾಲಿ 160ಕ್ಕೂ ಹೆಚ್ಚು ಸಗಟು ಮಾರಾಟ ವ್ಯಾಪಾರಸ್ಥರು ಸ್ಥಳಾಂತರಗೊಳ್ಳಬೇಕಿದ್ದು, ಇವರಲ್ಲಿ ಪ್ರಮುಖವಾಗಿ ಅಕ್ಕಿ, ಬೇಳೆ ಸೇರಿದಂತೆ ದಿನನಿತ್ಯದ ಕಿರಾಣಿ ವಸ್ತುಗಳ ಮಾರಾಟ ವ್ಯಾಪಾರಸ್ಥರು ಒಳಗೊಂಡಿದ್ದಾರೆ.
 
ಹುಬ್ಬಳ್ಳಿ ನಗರ ಬೆಳೆಯುತ್ತಿದ್ದಂತೆಯೇ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಳಗೊಂಡು ಅಕ್ಕಿಹೊಂಡದಲ್ಲಿ ಸಂಚಾರದ ದಟ್ಟಣೆ ಹಾಗೂ ಜನಜಂಗುಳಿ ನಿಭಾಯಿಸಲು ಸಾಧ್ಯವಾಗದೇ ಮಾರುಕಟ್ಟೆ ಸ್ಥಳಾಂತರಕ್ಕೆ ಸ್ಥಳೀಯರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಂದೆಯೇ ಎಪಿಎಂಸಿ ಪ್ರಾಂಗಣಕ್ಕೆ ಮಾರುಕಟ್ಟೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿತ್ತು.

ಒತ್ತಡಕ್ಕೆ ಮಣಿಯುವುದಿಲ್ಲ: ಶಂಕರಗೌಡ

ಈ ಹಿಂದಿನಂತೆ ಕೇವಲ ನೆಪ ಮಾತ್ರಕ್ಕೆ ಸ್ಥಳಾಂತರಗೊಳ್ಳಲು ಅಕ್ಕಿಹೊಂಡದ ವ್ಯಾಪಾರಸ್ಥರಿಗೆ ನೊಟೀಸ್ ನೀಡಲ್ಲ ಎನ್ನುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ.

ಈ ಬಾರಿ ಬಿಗಿ ನಿಲುವು ತಾಳಿದ್ದೇವೆ. ಹಿಂದೆಲ್ಲಾ ಸ್ಥಳಾಂತರ ಗೊಳ್ಳಲು ಸೂಚಿಸಿದರೆ `ಎಪಿಎಂಸಿಯಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ. ಹೆಚ್ಚು ಒತ್ತಾಯಿಸಿದರೆ ನ್ಯಾಯಾಲಯಕ್ಕೆ ತೆರಳುವು ದಾಗಿ~ ವರ್ತಕರು ಬೆದರಿಕೆ ಹಾಕುತ್ತಿದ್ದರು.

ಈ ಬಾರಿ ಎಲ್ಲಾ ಸವಲತ್ತು ಒದಗಿಸಿ ಸ್ಥಳಾಂತರಗೊಳ್ಳುವಂತೆ ಅಂತಿಮ ನೊಟೀಸ್ ನೀಡುತ್ತಿದ್ದೇವೆ. ಮಾರುಕಟ್ಟೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ದರ್ಪಣ್‌ಜೈನ್ ಕೂಡ ಸೂಚನೆ ನೀಡಿದ್ದಾರೆ. ವರ್ತಕರ ಯಾವುದೇ ರಾಜಕೀಯ ಒತ್ತಡಕ್ಕೆ ಎಪಿಎಂಸಿ ಆಡಳಿತ ಮಣಿಯುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ.

ಸ್ಥಳಾಂತರ ಅನಿವಾರ್ಯ: ಜಿಲ್ಲಾಧಿಕಾರಿ

ಅಕ್ಕಿಹೊಂಡದ ವರ್ತಕರು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಗೊಳ್ಳಲು ಈ ಹಿಂದೆ ನ್ಯಾಯಾಲಯದಿಂದ ಕಾಲಾವಧಿ ಪಡೆದಿದ್ದರು. ಈಗ ಅದು ಮುಗಿಯುತ್ತಾ ಬಂದಿದೆ ಆದ್ದರಿಂದ ಸ್ಥಳಾಂತರ ಅನಿವಾರ್ಯ ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ದರ್ಪಣ ಜೈನ್.

ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಅವರು `ತಾವು ಈ ಹಿಂದೆ ಎಪಿಎಂಸಿ ಆಡಳಿತಾಧಿಕಾರಿಯಾಗಿದ್ದಾಗ ಚರಂಡಿ, ರಸ್ತೆ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಶ್ರಮಿಸಿದ್ದು. ಎಪಿಎಂಸಿ ನಿಗದಿಪಡಿಸಿದ ಅವಧಿಯಲ್ಲಿ ವರ್ತಕರು ಸ್ಥಳಾಂತರಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.